ಬಸವನಬಾಗೇವಾಡಿ: ಶೂನ್ಯ ಬಡ್ಡಿ ದರದಲ್ಲಿ ಸಾಲ ಮತ್ತು ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಮೂಲಕ ಸರ್ಕಾರ ರೈತರಿಗೆ ಸಹಾಯ ಹಸ್ತ ಚಾಚುತ್ತಿದೆ. ರೈತರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಶನಿವಾರ ಕೃಷಿ ಇಲಾಖೆ ಆವರಣದಲ್ಲಿ ಪ್ರಸಕ್ತ ಸಾಲಿನ ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು. ಸಣ್ಣ ರಾಷ್ಟ್ರಗಳು ವೈಜ್ಞಾನಿಕ ಪದ್ಧತಿಯಲ್ಲಿ ಉತ್ತಮ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ನಮ್ಮ ದೇಶದಲ್ಲಿ ವೈಜ್ಞಾನಿಕವಾಗಿ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿಲ್ಲ.
ಹೀಗಾಗಿ ಕೃಷಿಯಲ್ಲಿ ಲಾಭದ ಕೊರತೆ ಹೆಚ್ಚಾಗುತ್ತಿದೆ ಎಂದ ಅವರು, ರೈತರು ಕೇವಲ ಏಕ ಮುಖ ಬೆಳೆಗಳನ್ನು ಬೆಳೆಯದೆ ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ತಮ್ಮ ಆದಾಯ ವೃದ್ಧಿಸಿಕೊಳ್ಳಬೇಕು. ಹೈನುಗಾರಿಕೆ, ಕುರಿ, ಮೀನು, ಕೋಳಿ ಸಾಗಾಣಿಕೆಯಲ್ಲೂ ತೊಡಗುವಂತೆ ಸಲಹೆ ನೀಡಿದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಡಿ.ಡಬ್ಲೂÂ. ಮಾತನಾಡಿ, ಜಿಲ್ಲೆಯಲ್ಲಿ 7 ಲಕ್ಷ ಹೆಕ್ಟೇರ್ ಭೂಮಿಯಲ್ಲಿ 5 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ರೈತರು ತೊಗರಿಯನ್ನೆ ಬಿತ್ತಿದ್ದಾರೆ. ಕೇವಲ ಒಂದೇ ಬೆಳೆಯನ್ನು ಬೆಳೆಯದೆ ಮಿಶ್ರ ಬೆಳೆಗಳನ್ನು ಬೆಳೆಯಬೇಕು. ಒಂದು ಬೆಳೆ ಹೋದರು ಕೂಡಾ ಇನ್ನೊಂದು ಬೆಳೆ ರೈತರ ಕೈ ಹಿಡಿಯುತ್ತದೆ.
ಜಮೀನುಗಳಿಗೆ ಹೆಚ್ಚು ರಾಸಾಯನಿಕ ಗೊಬ್ಬರಕ್ಕಿಂತ ಸಾವಯುವ ಗೊಬ್ಬರ ಬಳಸಿದರೆ ಭೂಮಿ ಫಲವತ್ತತೆ ಹೆಚ್ಚುತ್ತದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣಾ ಕಲ್ಯಾಣಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಸಿ.ಬಿ. ಪಾಟೀಲ, ಕೃಷಿ ಸಹಾಯಕ ನಿರ್ದೇಶಕ ಎಂ.ಎಚ್. ಯರಝರಿ ಇದ್ದರು. ದಾನಪ್ಪ ಕತ್ನಳ್ಳಿ ನಿರೂಪಿಸಿದರು.