ಇಂಡಿ: ಭಾರತೀಯ ಜನತಾ ಪಕ್ಷದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಆದಾಯ ದ್ವಿಗುಣಗೊಳಿಸಲು ಸಾಕಷ್ಟು ಶ್ರಮಿಸುತ್ತಿವೆ. ರೈತರು ಸರ್ಕಾರದ ಯೋಜನೆಗಳ ಲಾಭ ಪಡೆದು ಆದಾಯ ದ್ವಿಗುಣಗೊಳಿಸಿಕೊಳ್ಳಲು ಮುಂದಾಗಬೇಕು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.
ಪಟ್ಟಣದ ಸಿಂದಗಿ ರಸ್ತೆಯ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ರೈತ ಮೋರ್ಚಾ ಮಂಡಲ ಪದಾಧಿಕಾರಗಳ ವಿಶೇಷ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತಾಪಿ ವರ್ಗದವರು ಬೆಳೆ ಬೆಳೆಯುತ್ತಾರೆ. ಆದರೆ ಅವರಿಗೆ ಲಾಭ ಸಿಗುತ್ತಿಲ್ಲ. ಇಂದು ಕೃಷಿಯಲ್ಲಿ ರೈತರು ಸಾಕಷ್ಟು ತೊಂದರೆಗೀಡಾಗಿದ್ದಾರೆ. ಆದ್ದರಿಂದ ಸರ್ಕಾರ ರೈತರ ಆರ್ಥಿಕ ಸುಧಾರಣೆಗೆ ಆದಾಯದಲ್ಲಿ ದ್ವಿಗುಣ ಆಗುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಫಸಲ್ ಬೀಮಾ ಯೋಜನೆ, ಕಿಸಾನ್ ಸಮ್ಮಾನ್ ನಿಧಿ, ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ, ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ರೈತರಿಗೆ ಆತ್ಮವಿಶ್ವಾಸ ಮೂಡಿಸಿದ್ದಾರೆ ಎಂದರು.
ಆತ್ಮಯೋಜನೆ ನಿರ್ದೇಶಕ ಎಂ.ಬಿ. ಪಟ್ಟಣಶೆಟ್ಟಿ ಮಾತನಾಡಿ, ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿವೆ. ರೈತರು ಯಾವುದೇ ಬೆಳೆ ಬೆಳೆದರೂ ಮಾರುಕಟ್ಟೆಯಿಂದ ಹಿಡಿದು ದಲ್ಲಾಳಿಗಳ ಹಾವಳಿ ತಪ್ಪಿದ್ದಲ್ಲ. ಇಂತಹ ಸಂಕಷ್ಟಗಳನ್ನು ತಪ್ಪಿಸಲು ರೈತರು ನೇರವಾಗಿ ಗ್ರಾಹಕರ ಕೈ ಸೇರಬೇಕಾದರೆ ಸಮಾನ ರೈತರು ಒಗ್ಗೂಡಿ ಸಂಸ್ಕರಣೆ ಮಾಡಿ ನೇರ ಮಾರಾಟ ಮಾಡಿದರೆ ದ್ವಿಗುಣ ಲಾಭ ಪಡೆಯಲು ಸಾಧ್ಯ ಎಂದರು.
1972ರಲ್ಲಿ ಸರ್ಕಾರಗಳು ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆಯಲಿ ಎಂಬ ಸದಾಶಯದಿಂದ ರೈತರಿಗೆ ಸಾಕಷ್ಟು ಸಹಾಯ ಸಹಕಾರ ಮಾಡಲಾಗುತ್ತಿತ್ತು. ಆದರೆ ಈಗ ರಾಜ್ಯ, ಕೇಂದ್ರ ಸರ್ಕಾರಗಳು ರೈತರು ಬೆಳೆದ ಪ್ರತಿಯೊಂದು ಬೆಳೆಗೆ ಯೋಗ್ಯ ಬೆಲೆ ಸಿಕ್ಕು ರೈತ ದ್ವಿಗುಣ ಲಾಭ ಪಡೆಯಲಿ ಎಂದು ರೈತರ ಹಿತರಕ್ಷಣೆಗೆ ಕೃಷಿ ಕಲ್ಯಾಣ ಯೋಜನೆಗಳನ್ನು ನೀಡುತ್ತಿದೆ. ಇದರ ಲಾಭ ಪಡೆದು ರೈತರು ಆರ್ಥಿಕ ಸಬಲರಾಗಬೇಕು ಎಂದರು.
ಬಿಜೆಪಿ ರೈತ ಮೋರ್ಚಾ ಮುಖಂಡೆ ಮಧು ಪಾಟೀಲ ಮಾತನಾಡಿ, ರೈತರ ಸಂಘಗಳನ್ನು ಹೋಬಳಿ ಮಟ್ಟದಲ್ಲಿ ಸ್ಥಾಪನೆ ಮಾಡಿ ರೈತರೂ ಒಗ್ಗೂಡಿ ತಾವು ಬೆಳೆದ ಬೆಳೆಗಳನ್ನು ಸಂಸ್ಕರಿಸಿ ಗ್ರಾಹಕರಿಗೆ ಮಾರಾಟ ಮಾಡಿದರೆ ರೈತರು ದ್ವಿಗುಣ ಲಾಭ ಪಡೆಯಬಹುದು. ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿಕೊಳ್ಳಬಹುದು. ರೈತ ಆರ್ಥಿಕವಾಗಿ ಬಲಾಡ್ಯನಾಗಲು ಸಾಧ್ಯ ಎಂದರು.
ಅನಿಲ ಜಮಾದಾರ, ರಾಮು ಜಾಧವ, ಸಿದ್ದು ಬುಳ್ಳಾ, ರಮೇಶ ಶಹಾಪೇಟಿ, ರಾಜೇಶ ಕಾಡೆ, ಸಿದ್ದಗೊಂಡ ಬಿರಾದಾರ, ಬಸವರಾಜ ಕಲ್ಲೂರ, ರಜನಿಕಾಂತ ಕಲ್ಲೂರ, ರವಿ ವಗ್ಗೆ, ಅಶೋಕ ಅಕಲಾದಿ, ಅನಿಲಗೌಡ ಬಿರಾದಾರ, ಸೋಮು ನಿಂಬರಗಿಮಠ, ಮಲ್ಲು ವಾಲೀಕಾರ, ಭೀಮಾಶಂಕರ ಆಳೂರ ಸೇರಿದಂತೆ ಅನೇಕರು ಇದ್ದರು.