ಕಲಬುರಗಿ: ನಗರದಲ್ಲಿ 50 ಹಾಸಿಗೆಯ ಯುನಾನಿ ಆಸ್ಪತ್ರೆ ನಿರ್ಮಿಸಲಾಗಿದ್ದು, ಇದರ ಉಪಯೋಗವನ್ನು ನಾಗರಿಕರು ಪಡೆಯಬೇಕೆಂದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ದುಬೈ ಕಾಲೊನಿ ಹಿಂದೆ ನಿರ್ಮಿಸಲಾಗಿರುವ ಸರಕಾರಿ ಯುನಾನಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರೀಕ್ ದೇಶದಿಂದ ಪ್ರಾರಂಭವಾದ ಯುನಾನಿ ಚಿಕಿತ್ಸಾ ಪದ್ದತಿ ಅತಿ ಕಡಿಮೆ ಖರ್ಚಿನಲ್ಲಿ ರೋಗಗಳನ್ನು ಗುಣಮುಖಪಡಿಸುತ್ತದೆ. ಈ ಪದ್ಧತಿಯಲ್ಲಿ ಒಳ್ಳೆಯ ಔಷಧಿಗಳು ಲಭ್ಯವಿದ್ದು, ಬಹುದಿನಗಳಿಂದ ಕಾಡುವ ರೋಗಗಳಿಗೆ ಈ ಚಿಕಿತ್ಸೆ ಮದ್ದಾಗಿದೆ ಎಂದರು.
ಆಯುಷ್ ಪದ್ಧತಿ ಅಡಿಯಲ್ಲಿ ಬರುವ ಆಯುರ್ವೇದ, ಯುನಾನಿ, ಹೋಮಿಯೋಪತಿ, ಯೋಗ ಚಿಕಿತ್ಸೆಗಳ ಕುರಿತು ವೈದ್ಯರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ತಕ್ಷಣಕ್ಕೆ ಚಿಕಿತ್ಸೆಗೆ ಅವಶ್ಯಕವಿರುವಂಥಹ ರೋಗಿಗಳಿಗೆ ನೂತನ ವೈದ್ಯ ಪದ್ಧತಿ ಅನುಕೂಲಕರವಾಗಿದೆ ಎಂದು ಹೇಳಿದರು. ಯುನಾನಿ ಆಸ್ಪತ್ರೆ ಆವರಣದಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು, ಇಲ್ಲಿ ಪಾಲಿಕೆ, ಅರಣ್ಯ ಇಲಾಖೆ ಜತೆಗೂಡಿ ಗಿಡ ಮರಗಳನ್ನು ಬೆಳೆಸುವ ಮೂಲಕ ಆವರಣವನ್ನು ಸುಂದರೀಕರಣ ಗೊಳಿಸಬೇಕು. ಈ ಹಿಂದೆ 1951ರಲ್ಲಿ ದೇಶದಲ್ಲಿ ಮೊದಲ ಜನಗಣತಿ ಕೈಗೊಳ್ಳಲಾಗಿತ್ತು ಆಗ ದೇಶದಲ್ಲಿ ಕೇವಲ 500 ಕಾಲೇಜುಗಳಿದ್ದವು. ಇಂದು ಸುಮಾರು 38000 ಕಾಲೇಜುಗಳಿವೆ ಎಂದರೆ ಶಿಕ್ಷಣ ಕ್ಷೇತ್ರವು ಬೃಹದಾಕಾರದಲ್ಲಿ ಬೆಳೆದಿದೆ ಎನ್ನುವುದು ನಿರೂಪಿಸುತ್ತದೆ ಎಂದರು.
ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಮೇಯರ್ ಮಲ್ಲಮ್ಮ ವಳಕೇರಿ, ಮುಖಂಡರಾದ ಭಾಗಣ್ಣಗೌಡ ಸಂಕನೂರ, ಉಪ ಮೇಯರ್ ಅಲಿಯಾ ಸಿರಿನ್, ಶರಣಮ್ಮ ಯಲ್ಲಪ್ಪ ನಾಯಿಕೋಡಿ, ಜಿ.ಪಂ. ಸಿಇಒ ಡಾ| ರಾಜಾ ಪಿ., ಪಾಲಿಕೆ ಆಯುಕ್ತೆ ಫೌಜಿಯಾ ತರನ್ನುಮ್, ಬೆಂಗಳೂರಿನ ಯುನಾನಿ ಉಪ ನಿರ್ದೇಶಕಿ ಡಾ| ಶೋಭಾರಾಣಿ, ಕಲಬುರಗಿ ಆಯುಷ್ ಇಲಾಖೆ ಅಧಿಕಾರಿ ಡಾ| ನಾಗರತ್ನಾ ಚಿಮ್ಮಲಗಿ ಮತ್ತಿತರರು ಪಾಲ್ಗೊಂಡಿದ್ದರು.
ಯುನಾನಿ ಚಿಕಿತ್ಸೆಯು ತುಂಬಾ ಹಳೆಯ ರೋಗಗಳನ್ನು ಗುಣಪಡಿಸುವ ಪದ್ಧತಿಯಾಗಿದೆ. ಇದು ತುಂಬಾ ಕಡಿಮೆ ವೆಚ್ಚದಲ್ಲಿ ದೊರೆಯಲಿದ್ದು, ಇದರಿಂದ ಯಾವುದೇ ದುಷ್ಪರಿಣಾಮಗಳು ಉಂಟಾಗುವುದಿಲ್ಲ. ನಗರದಲ್ಲಿ ಸದ್ಯ ಯುನಾನಿ ಆಸ್ಪತ್ರೆ ಪ್ರಾರಂಭಿಸಲಾಗಿದ್ದು ಯುನಾನಿ ಮೆಡಿಕಲ್ ಕಾಲೇಜ್ ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮುತುವರ್ಜಿ ವಹಿಸಿ ಯುನಾನಿ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಬೇಕು.
•ಖನೀಜ್ ಫಾತಿಮಾ, ಶಾಸಕಿ