Advertisement

ವೈದ್ಯಕೀಯ ಸಾಧನ ದಾಸ್ತಾನು ಮಾಡಲು ಸಲಹೆ

09:53 AM May 22, 2020 | mahesh |

ವಾಷಿಂಗ್ಟನ್‌: ಕೋವಿಡ್‌ ಹಾವಳಿಯನ್ನು ತಡೆಗಟ್ಟಲು ವಿಫ‌ಲರಾಗಿ ಎಲ್ಲೆಡೆಗಳಿಂದ ಟೀಕೆಯನ್ನು ಎದುರಿಸುತ್ತಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ದೇಶದ ಒಂಭತ್ತು ಪ್ರಮುಖ ವಿಜ್ಞಾನಿಗಳು ಹಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಏಳು ಪುಟಗಳ ವರದಿಯಲ್ಲಿ ಅವರು ಸಾಂಕ್ರಾಮಿಕ ರೋಗ ಘಟಸ್ಫೋಟಗೊಂಡಾಗ ಕೈಗೊಳ್ಳಬೇಕಾದ ತುರ್ತು ನಿರ್ಧಾರಗಳ ಬಗ್ಗೆ ಗಮನ ಸೆಳೆದಿದ್ದಾರೆ ಹಾಗೂ ವೈದ್ಯಕೀಯ ಸಾಧನಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇಟ್ಟುಕೊಳ್ಳಲು ಸಲಹೆ ಮಾಡಿದ್ದಾರೆ.

Advertisement

ಕೋವಿಡ್‌ ವೈರಸ್‌ ಹಾವಳಿ ಇನ್ನೂ ನಿಂತಿಲ್ಲ. ಇನ್ನು ಮೂರು ತಿಂಗಳ ಒಳಗಾಗಿ ಅಗತ್ಯವಿರುವ ವೈದ್ಯಕೀಯ ಸಾಧನಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಷಮಿಸಬಹುದು ಎಂಬ ಎಚ್ಚರಿಕೆಯನ್ನು ಈ ವಿಜ್ಞಾನಿಗಳು ನೀಡಿದ್ದಾರೆ.

ಎಲ್ಲ ಒಂಭತ್ತು ವಿಜ್ಞಾನಿಗಳು ಹಿಂದಿನ ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ಎರಡೂ ಅವಧಿಯಲ್ಲಿ ವೈಜ್ಞಾನಿಕ ಸಲಹೆಗಾರರಾಗಿದ್ದವರು. ಒಬಾಮ ಮತ್ತು ಟ್ರಂಪ್‌ ನಡುವೆ ಕೋವಿಡ್‌ ವಿಚಾರವಾಗಿ ಚಕಮಕಿ ನಡೆಯುತ್ತಿರುವಾಗಲೇ ಈ ವಿಜ್ಞಾನಿಗಳು ತಂಡ ಸಲಹೆಗಳನ್ನು ನೀಡಿದೆ.

ಟೆಸ್ಟಿಂಗ್‌ ಕಿಟ್‌, ರಕ್ಷಣಾ ಉಡುಗೆ, ಎನ್‌ 95 ಮಾಸ್ಕ್, ಶಮನಕಾರಿ ಔಷಧಿ ಇತ್ಯಾದಿಗಳ ದಾಸ್ತಾನು ಪ್ರಕ್ರಿಯೆ ತಕ್ಷಣ ಶುರುವಾಗಬೇಕು. ಇನ್ನೊಂದು ಸುತ್ತಿನ ಕೋವಿಡ್‌ ತಾಂಡವ ಪ್ರಾರಂಭವಾಗಲು ಹೆಚ್ಚು ಸಮಯ ಬೇಕಾಗಿಲ್ಲ. ಹೀಗಾಗಿ ಸಮರೋಪಾದಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ವಿಜ್ಞಾನಿಗಳು ಹೇಳಿದ್ದಾರೆ.

ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಮಟ್ಟದಲ್ಲಿ ಈ ಕುರಿತು ಸಮಗ್ರವಾದ ಕಾರ್ಯಯೋಜನೆಯೊಂದನ್ನು ರಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಸತ್ತು ನೀಡಿರುವ ಸಲಹೆಗಳನ್ನು ಅಧ್ಯಕ್ಷರು ಪರಿಗಣಿಸಬೇಕೆಂದು ವಿಜ್ಞಾನಿಗಳು ಹೇಳಿದ್ದಾರೆ.

Advertisement

ವೆಂಟಿಲೇಟರ್‌, ಟೆಸ್ಟಿಂಗ್‌ ಕಿಟ್‌, ಮಾಸ್ಕ್, ಪಿಪಿಇ ಮತ್ತಿತರ ಸಾಧನಗಳ ಕೊರತೆಯಿಂದಲೇ ಕೋವಿಡ್‌ ಹಾವಳಿ ತೀವ್ರವಾಯಿತು ಹಾಗೂ ಅನೇಕ ಆರೋಗ್ಯ ಸಿಬಂದಿಗಳು ಪ್ರಾಣ ಕಳೆದುಕೊಂಡರು. ಈ ತಪ್ಪು ಪುನರಾವ ರ್ತನೆಯಾಗಬಾರದು ಎಂದು ವಿಜ್ಞಾನಿಗಳು ಕಳಕಳಿ ವ್ಯಕ್ತಪಡಿಸಿದ್ದಾರೆ.

ಮುಂಬರುವ ಶರದೃತುವಿನಲ್ಲಿ ಅಮೆರಿಕದಲ್ಲಿ ಎರಡನೇ ಸುತ್ತಿನ ಕೋವಿಡ್‌ ಹಾವಳಿ ಶುರುವಾಗುವ ಸಾಧ್ಯತೆಯಿದೆ ಎಂಬ ಆತಂಕವಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳ ಸಲಹೆ ಮಹತ್ವ ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next