ವಿಜಯಪುರ: ಭಾರತದ ಗಡಿಯಲ್ಲಿ ನಿಂತು ಪ್ರಜೆಗಳನ್ನು ರಕ್ಷಿಸಿದ ಮಾದರಿಯಲ್ಲಿ ನಿವೃತ್ತಿ ನಂತರ ಸೈನಿಕರು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹ ವಿಸ್ತರಣಾಧಿಕಾರಿ ಬಿ.ಬಿ. ಚನ್ನಪ್ಪಗೌಡರ ಕರೆ ನೀಡಿದರು.
ಬುಧವಾರ ವಿಜಯಪುರ ಹಿಟ್ನಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲೆ ಮಾಜಿ ಸೈನಿಕರಿಗೆ ಹಮ್ಮಿಕೊಂಡಿದ್ದ ಕೃಷಿ ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, . ವಿಷಮುಕ್ತವಾದ ಪರಿಶುದ್ಧ ಆಹಾರ ಉತ್ಪಾನೆಗೆ ಮುಂದಾಗುವ ಹೊಣೆಗಾರಿಕೆ ಬದ್ಧತೆ ಸ್ವೀಕರಿಸಬೇಕು ಎಂದರು.
ದೇಶದ ಗಡಿಯಲ್ಲಿ ಜೀವಕ್ಕೂ ಅಂಜದೇ ಎದೆಗೊಟ್ಟು ನಿಂತು ಭಾರತಮಾತೆಯ ಸೇವೆ ಸಲ್ಲಿಸುವ ಸೈನಿಕರ ಸೇವೆ ಸದಾ ಸ್ಮರಣೀಯ. ಸೇವಾ ನಿವೃತ್ತಿ ಬಳಿಕ ಸೈನಿಕರು ಕೃಷಿಯಲ್ಲಿ ತೊಡಗುವ ಮೂಲಕ ಪ್ರಸಕ್ತ ಸಂದರ್ಭದಲ್ಲಿ ಕೃಷಿ ರಂಗ ಎದುರಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಪ್ರಸಕ್ತ ಸಂದರ್ಭದಲ್ಲಿ ಹಲವು ರೀತಿಯ ಅವೈಜ್ಞಾನಿಕ ಕಾರಣಗಳಿಂದಾಗಿ ಕೃಷಿ ಕ್ಷೇತ್ರ ಸೊರಗುತ್ತಿದೆ. ನೈಸರ್ಗಿಕ ವಿಕೋಪ, ಕೀಟ-ರೋಗಗಳ ಹಾವಳಿ, ಬೆಲೆ ಕುಸಿದಂಥ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಕೃಷಿಯಲ್ಲಿ ಆಧುನಿಕ ತಾಂತ್ರಿಕತೆ-ಯಾಂತ್ರೀಕರಣ ಅಳವಡಿಕೆ, ಮಳೆ ನೀರು ಕೊಯ್ಲು, ವಿಫಲ ಕೊಳವೆ-ತೆರೆದ ಭಾವಿಗಳ ಅಂರ್ತಜಲ ಮರುಪೂರಣ, ನೀರು ನಿರ್ವಹಣೆ ಜರೂರಾಗಿದೆ. ಅವೈಜ್ಞಾನಿಕ ನೀರು, ರಸಗೊಬ್ಬರ, ಕ್ರಿಮಿನಾಶಕ ಬಳಕೆ ಭವಿಷ್ಯದ ಕೃಷಿಗೆ ಮಾರಕವಾಗಲಿದೆ ಎಂದು ವಿಶ್ಲೇಷಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಎಸ್.ಎ. ಬಿರಾದಾರ ಮಾತನಾಡಿ, ಸಮಗ್ರ ಕೃಷಿ ಜೊತೆಗೆ
ಪಶುಪಾಲನೆ, ಮೇವಿನ ಬೆಳೆಗಳು ಹಾಗೂ ಕೃಷಿ ಆಧಾರಿತ ಉಪ ಕಸಬು ರೈತರನ್ನು ಆರ್ಥಿಕ ದುಸ್ಥಿತಿಯಿಂದ ಸುಸ್ಥಿತಿಗೆ ತರುವಲ್ಲಿ ನೆರವಾಗಲಿದೆ ಎಂದರು.
ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಆರ್.ಕೆ. ನವೀನಕುಮಾರ, ಮಾಜಿ ಸೈನಿಕ ಎಸ್.ಐ.ಮುಚ್ಚಂಡಿ ಮಾತನಾಡಿದರು. ಕೃಷಿ ವಿಷಯಗಳ ತಜ್ಞರಾದ ಡಾ| ಎಸ್. ಎಂ. ವಸ್ತ್ರದ, ಡಾ| ಶ್ವೇತಾ ಜಿ., ಡಾ| ಎಂ.ಆರ್. ಜಗದೀಶ, ಶ್ರೀಶೈಲ ರಾಠೊಡ ಭಾಗವಹಿಸಿದ್ದರು. ಸುಮಾರು 60 ಮಾಜಿ ಸೈನಿಕರು ಪಾಲ್ಗೊಂಡಿದ್ದರು.