ಗದಗ: ವಿದ್ಯಾರ್ಥಿಗಳು ಜೀವನದ ಉದ್ದಕ್ಕೂ ಸ್ವಯಂ ಪ್ರೇರಣೆ ಹಾಗೂ ಕ್ರಿಯಾಶೀಲತೆಯಿಂದ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಇದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಹಾಯಕಾರಿಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರೊ| ಎಸ್.ವಿ. ಸಂಕನೂರ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಹೆಚ್ಚು ಅಂಕ ಪಡೆಯಬೇಕೆಂಬ ಹುಮ್ಮಸ್ಸು ಹೊಂದದೇ ತಮ್ಮ ಆಸಕ್ತಿದಾಯಕ ಕ್ಷೇತ್ರಗಳಿಗೆ ಅನುಗುಣವಾಗಿ ಪಠ್ಯದೊಂದಿಗೆ ವಿಶಿಷ್ಟ ಕೌಶಲ ವೃದ್ಧಿಸಿಕೊಳ್ಳಬೇಕು. ಉತ್ಸಾಹದಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಾಗುತ್ತದೆ. ಇದಕ್ಕಿಂತ ಮಿಗಿಲಾಗಿ ಭಾವನಾತ್ಮಕ ಬೆಳವಣಿಗೆಯೂ ಹೆಚ್ಚುತ್ತದೆ. ಆಗಮಾತ್ರ ಸರ್ವತೋಮುಖ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಯುಪಿಎಸ್‌ಸಿಯಲ್ಲಿ ದೇಶಕ್ಕೆ 17ನೇ ರ್‍ಯಾಂಕ್ ಗಳಿಸಿದ ರಾಹುಲ್ ಸಂಕನೂರ ಮಾತನಾಡಿ, ಹಳ್ಳಿಯ ಯುವಜನರು ಕೀಳರಿಮೆ ತೊರೆದು ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು ಎಂದರು.
ಪದವಿ ಕಾಲೇಜಿನ ಪ್ರಾಚಾರ್ಯ ಸಿ. ಲಿಂಗಾರೆಡ್ಡಿ ಮಾತನಾಡಿ, ಬಡತನ, ಹಳ್ಳಿ ಬದುಕು ಸಾಧನೆಗೆ ಅಡೆತಡೆಯಾಗದು ಎಂದರು. ಪ್ರೊ| ಎಸ್.ಎಂ. ಬೆಂಗಳೂರ, ಶರಣಪ್ಪ ಸಂಕನೂರ, ಎಸ್.ಪಿ. ಸಂಶಿಮಠ, ವೀರೇಶ ಕೂಗು, ಅಶೋಕ ನಿಲೂಗಲ್ ಇದ್ದರು. ಪ್ರೊ| ಎಸ್.ಜೆ. ಹಿರೇಮಠ ಸ್ವಾಗತಿಸಿದರು. ಪ್ರೊ| ಎಂ.ಎಂ. ನರಗುಂದ ಪರಿಚಯಿಸಿದರು. ರಘುವೀರ ಕಲ್ಬುರ್ಗಿ ವಂದಿಸಿದರು. ಪ್ರೊ| ಶ್ವೇತಾ ಗುಂಡಾ ಹಾಗೂ ಪ್ರೊ| ಎಸ್.ಬಿ. ಹಾವೇರಿ ನಿರೂಪಿಸಿದರು.