ಯಾದಗಿರಿ: ತಾಲೂಕಿನಲ್ಲಿ ಹತ್ತಿ 52 ಸಾವಿರ ಹಾಗೂ ತೊಗರಿ 23 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದು, ಹಾನಿಯಾದ ಬೆಳೆಗಳ ಸರ್ವೇ ಕಾರ್ಯ ಶೇ.35 ಮುಗಿದಿದೆ. ಸರ್ವೇ ಕಾರ್ಯವನ್ನು ಇನ್ನು ಒಂದು ವಾರದಲ್ಲಿ ಪೂರ್ಣಗೊಳಿಸಿ ಎಂದು ಕೃಷಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಸೂಚಿಸಿದರು.
ಬುಧವಾರ ಜಿಲ್ಲೆಯ ವಡ್ನಳ್ಳಿ, ಯರಗೋಳ, ವಡಗೇರಾ, ತಾಲೂಕಿನ ಕೃಷಿ ಭೂಮಿಗೆ ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ಭೇಟಿ ನೀಡಿ ಮಳೆಯಿಂದ ಬೆಳೆಹಾನಿಯಾಗಿರುವುದನ್ನು ವೀಕ್ಷಿಸಿ ಮಾತನಾಡಿದ ಅವರು, ಜಿಲ್ಲೆಯ ತಾಲೂಕು, ಗ್ರಾಮ ಪಂಚಾಯಿತಿ ಮಟ್ಟದ ಗ್ರಾಮ ಸಭೆಗಳಲ್ಲಿ ಬೆಳೆ ವಿಮೆ ಕುರಿತು ಜನರಿಗೆ ಹಾಗೂ ರೈತರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ವಡ್ನಳ್ಳಿ ಗ್ರಾಮದ ಅಂಬ್ಲಿಪ್ಪ, ಬಸವರಾಜ, ವಿಶ್ವನಾಥ ಅವರ 12 ಎಕರೆ ಕೃಷಿ ಭೂಮಿಯಲ್ಲಿ ಮಳೆಯಾಗಿ ಹಳ್ಳದ ನೀರು ಹೊಲಗಳಿಗೆ ನುಗ್ಗಿ ಹೆಸರು ಮತ್ತು ಹತ್ತಿ ಬೆಳೆಗಳು ಪೂರ್ಣ ಪ್ರಮಾಣದಲ್ಲಿ ಜಲಾವೃತವಾಗಿ ಬೆಳೆ ಹಾನಿಯಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಹಾನಿಯಾದ ಕುರಿತು ಸರ್ವೇ ಮಾಡಿ ರೈತರಿಗೆ ಬೆಳೆ ಹಾನಿ ಪರಿಹಾರ ವ್ಯವಸ್ಥೆ ಮಾಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಯರಗೋಳ ಗ್ರಾಮದ ದೊಡ್ಡ ಕೆರೆ ಹತ್ತಿರ ರೈತ ಮಲ್ಲಪ್ಪರ 9 ಎಕರೆ ಕೃಷಿ ಭೂಮಿಯಲ್ಲಿ ದೊಡ್ಡ ಕೆರೆಯ ನೀರು ಹೊಲಗಳಿಗೆ ನುಗ್ಗಿ, ಹತ್ತಿ ಮತ್ತು ತೊಗರಿ ಹಾಳಾಗಿದ್ದು ಇಂತಹ ರೈತರ ಕೃಷಿ ಭೂಮಿಗಳ ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ರೈತರಿಗೆ ಬೆಳೆಹಾನಿಯಾದ ಹರಿಹಾರ ಒದಗಿಸಬೇಕು. ಯರಗೋಳದ ದೊಡ್ಡ ಕೆರೆಯ ನೀರು ರೈತರ ಕೃಷಿ ಭೂಮಿಗೆ ನುಗ್ಗದಂತೆ ಮುಂಜಾಗ್ರತಾ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅತೀವೃಷ್ಟಿಯಿಂದ ಜಿಲ್ಲೆಯಲ್ಲಿ ಸಾಕಷ್ಟು ರೈತರ ಬೆಳೆ ಹಾನಿಯಾಗಿದೆ. ರೈತರಿಗೆ ಬೆಳೆ ವಿಮೆ ಬಗ್ಗೆ ಹೋಬಳಿ ಮಟ್ಟದಲ್ಲಿ ಹಾಗೂ ಪ್ರತಿ ಗ್ರಾಮದಲ್ಲಿ ಬೆಳೆ ವಿಮೆ ಮತ್ತು ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ನೀಡುವ ಫಲಕ ಹಾಕಿಸಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಯುವ ಪ್ರತಿ ಗ್ರಾಮ ಸಭೆಯಲ್ಲಿ ಕೂಡಾ ಬೆಳೆ ವಿಮೆ ಕುರಿತು ಜನರಿಗೆ ಸರಿಯಾಗಿ ಮಾಹಿತಿ ನೀಡಬೇಕು ಎಂದರು. ಜಂಟಿ ಕೃಷಿ ನಿರ್ದೇಶಕರು, ತಹಶೀಲ್ದಾರರು ಇದ್ದರು.