Advertisement

ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಸಲಹೆ

12:54 PM May 16, 2017 | Team Udayavani |

ದಾವಣಗೆರೆ: ಕೌಶಲ್ಯಾಭಿವೃದ್ಧಿಯಿಂದ ನಿರುದ್ಯೋಗಿಗಳು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸಲಹೆ ನೀಡಿದ್ದಾರೆ. ಸೋಮವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮುಖ್ಯಮಂತ್ರಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ, ವೆಬ್‌ ಪೋರ್ಟಲ್‌ ಉದ್ಘಾಟಿಸಿ, ಮಾತನಾಡಿದರು.

Advertisement

ನಮ್ಮ ಸರ್ಕಾರದಿಂದ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ಇಲಾಖೆ ಸವಲತ್ತಿನಿಂದ ನಿರುದ್ಯೋಗಿಗಳು ಉದ್ಯೋಗ ಪಡೆದುಕೊಳ್ಳಬೇಕಿದೆ ಎಂದರು. ವೆಬ್‌ ಪೋರ್ಟಲ್‌, ಮೊಬೈಲ್‌ ಆ್ಯಪ್‌ ಅತಿ ಉಪಯುಕ್ತವಾಗಿದೆ. ನಿಮ್ಮ ಆಸಕ್ತಿ ಆಧರಿಸಿ, ಯಾವುದೇ ರೀತಿಯ ತರಬೇತಿ ಪಡೆಯಲು ಇದು ಸಹಕಾರಿಯಾಗಲಿದೆ. 

ದೇಶದ ಆರ್ಥಿಕತೆ ಉದ್ಯೋಗ ಆಧರಿಸಿಯೇ ನಿರ್ಧಾರ ಆಗುತ್ತದೆ. ಇದೇ ಕಾರಣಕ್ಕೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಉದ್ಯೋಗಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಈಗ ನಮ್ಮ ಸರ್ಕಾರ ಸಹ ಇದೇ ನಿಟ್ಟಿನಲ್ಲಿ ಕಾಯೋನ್ಮುಖವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು. 

ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಮಾತನಾಡಿ, ವಿದ್ಯಾಭ್ಯಾಸದ ನಂತರ ಅನೇಕರಿಗೆ ಇಂದು ಸೂಕ್ತ ಉದ್ಯೋಗ ಸಿಗುವುದಿಲ್ಲ. ಇದನ್ನು ಮನಗಂಡೇ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಆರಂಭಿಸಲು ನಿರ್ಧರಿಸಿತ್ತು. ಇದರ ಫಲವಾಗಿ ಇಂದು ರಾಜ್ಯಾದ್ಯಂತ ಕೇಂದ್ರ ಕಾರ್ಯಾರಂಭ ಮಾಡಿವೆ.

ನಮ್ಮಲ್ಲೂ ಸಹ ಇಂದು ಉದ್ಘಾಟನೆಗೊಂಡಿದೆ ಎಂದರು. ಒಟ್ಟು 131 ಕೌಶಲ್ಯ ಸಂಬಂಧಿ ತರಬೇತಿ ನೀಡಲು ಇಲಾಖೆಯಿಂದ ಕ್ರಮ ವಹಿಸಲಾಗಿದೆ. ನಮ್ಮಲ್ಲಿ ಪ್ರತ್ಯೇಕ ಕೇಂದ್ರವನ್ನೇ ತೆರೆಯಲಾಗಿದೆ. ಅಭ್ಯರ್ಥಿಗಳು ತಮ್ಮ ತಮ್ಮ ಆಸಕ್ತಿ ಆಧರಿಸಿ, ತರಬೇತಿಗೆ ನೋಂದಣಿ ಮಾಡಿಕೊಳ್ಳಬೇಕು. 

Advertisement

ನಿರ್ದಿಷ್ಟ ಅವಧಿಯ ತರಬೇತಿ ನಂತರ ಸೂಕ್ತ ಉದ್ಯೋಗ ಕಲ್ಪಿಸುವ ಉದ್ದೇಶವನ್ನೂ ಸಹ ಹೊಂದಲಾಗಿದೆ ಎಂದು ಅವರು ತಿಳಿಸಿದರು. ಸರ್ಕಾರ ತರಬೇತಿಗೆ ನೋಂದಣಿಯಾಗುವ ಅಭ್ಯರ್ಥಿಗಳ ಸಂಖ್ಯೆ ಆಧರಿಸಿ, ತರಬೇತಿಗೆ ಏಜೆನ್ಸಿಗಳನ್ನು ಗುರುತಿಸುತ್ತದೆ.

ಉನ್ನತ ವ್ಯಾಸಂಗ ಮಾಡಿ ಒಂದು ನಿರ್ದಿಷ್ಟವಾದ ಕೆಲಸಕ್ಕೆ ಅಂಟಿಕೊಳ್ಳುವವರನ್ನು ಇನ್ನಷ್ಟು ಉನ್ನತ ಉದ್ಯೋಗಕ್ಕೆ ಕಳುಹಿಸಬೇಕು. ಕನಿಷ್ಠ ಅಗತ್ಯ ಶಿಕ್ಷಣ ಪಡೆದವರಿಗೆ ಉತ್ತಮ ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕು ಅಥವಾ ಸ್ವ ಉದ್ಯೋಗ ಕೈಗೊಳ್ಳಲು ಸಹಕಾರಿಯಾಗಬೇಕು ಎಂಬುದು ತರಬೇತಿಯ ಉದ್ದೇಶ ಎಂದರು. 

ಮೇಯರ್‌ ಅನಿತಾಬಾಯಿ, ಡೆಪ್ಯುಟಿ ಮೇಯರ್‌ ಮಂಜಮ್ಮ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌. ಅಶ್ವತಿ, ಡೂಡಾ ಅಧ್ಯಕ್ಷ ಎಚ್‌.ಜಿ. ರಾಮಚಂದ್ರಪ್ಪ, ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ಜಿಪಂ ಉಪ ಕಾರ್ಯದರ್ಶಿ ಷಡಾಕ್ಷರಪ್ಪ ವೇದಿಕೆಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next