ದಾವಣಗೆರೆ: ಜನವರಿ ತಿಂಗಳು ಮಾವಿನ ಹೂ ಬಿಡುವ ಸಮಯವಾಗಿರುವುದರಿಂದ ಅಗತ್ಯ ಸಸ್ಯ ಸಂರಕ್ಷಣಾ ಕ್ರಮ ತೆಗೆದುಕೊಳ್ಳಲು ಸೂಕ್ತ ಕಾಲ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ| ಎಂ.ಜಿ. ಬಸವನಗೌಡ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ 4,376 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಪ್ರಮುಖವಾಗಿ ಚನ್ನಗಿರಿ, ಹರಪನಹಳ್ಳಿ ಮತ್ತು ಜಗಳೂರು ತಾಲೂಕುಗಳ ಹೆಚ್ಚಿನ ಪ್ರದೇಶದಲ್ಲಿ ಮಾವು ಬೆಳೆಯ ಲಾಗುತ್ತದೆ. ವಾರ್ಷಿಕ 35,279 ಮೆಟ್ರಿಕ್ ಟನ್‌ಗಳಷ್ಟು ಮಾವು ಉತ್ಪಾದನೆ ಆಗಲಿದೆ. ಪ್ರತೀ ಹೆಕ್ಟೇರ್ ಗೆ ಇಳುವರಿ ಸರಾಸರಿ 8 ಟನ್‌ಗಳಿಷ್ಟಿದೆ ಎಂದು ತಿಳಿಸಿದ್ದಾರೆ.
ಕಳೆದ 8-10 ದಿನಗಳಿಂದ ಜಿಲ್ಲೆಯಾದ್ಯಂತ ಚಳಿ ಹೆಚ್ಚಾಗಿದೆ. ಸರಿ ಸಮಾರು 8 ರಿಂದ 14 ಡಿಗ್ರಿಯಷ್ಟಿದೆ. ಚಳಿ ಬಿದ್ದ ನಂತರ ಹೂವಿನ ಮೊಗ್ಗುಗಳು ಬಿಡುತ್ತವೆ. ಈ ಸಮಯದಲ್ಲಿ ಗಿಡಗಳಿಗೆ ನೀರು ಬಿಡುವ ಅಗತ್ಯ ಇರುವುದಿಲ್ಲ. ನೀರು ಬಿಟ್ಟರೆ ಇರುವ ಹೂವುಗಳು ಉದುರುವ ಸಂಭವವಿರುತ್ತದೆ. ಆದುದರಿಂದ ಹೂವು ಕಾಯಿಯಾಗಿ ಬಟಾಣಿ ಗಾತ್ರ ಬಂದ ನಂತರ ನೀರು ಕೊಟ್ಟರೆ ಉತ್ತಮ ಎಂದು ತಿಳಿಸಿದ್ದಾರೆ.
ಯಾವುದಾದರೂ ತಾಕಿನಲ್ಲಿ ಹೂವು ಬಿಟ್ಟಿಲ್ಲವಾದರೆ ಅಂತಹ ತಾಕಿನಲ್ಲಿ ಕೃತಕವಾಗಿ ಮರದ ಕೆಳಗೆ ಹೊಗೆಯನ್ನು ಹಾಕುವುದು ಅಥವಾ ಪ್ರತಿ ಲೀಟರ್ ನೀರಿನಲ್ಲಿ ಅರ್ಧ ಮಿಲೀ ನೈಟ್ರೋಬೆಂಜಿನ್ ಬೆರೆಸಿ ಸಿಂಪಡಿಸಿದರೆ ಹೂವಿನ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ತಿಳಿಸಿದ್ದಾರೆ.
ಉಷ್ಣಾಂಶ ಸಹ ಏರುತ್ತಿರುವ ಪರಿಣಾಮ ಮಾವಿಗೆ ಜಿಗಿಹುಳುಗಳ ಕಾಟ ಹೆಚ್ಚಾಗುವ ಸಂಭವವಿರುವುದರಿಂದ 0.5 ಮಿಲೀ ಇಮಿಡಾಕ್ಲೋಪ್ರಿಡ್ ಅಥವಾ 2 ಮಿಲೀ ಪಿಪ್ರೋನಿಲ್‌ನ್ನು ಪ್ರತೀ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು. ಜೊತೆಗೆ ಕಾಯಿಗಳ ಗಾತ್ರ ಮತ್ತು ಗುಣಮಟ್ಟ ಹೆಚ್ಚಿಸಲು ಮಾವು ಸ್ಪೆಷಲ್ 5 ಗ್ರಾಂ ಲಘು ಪೋಷಕಾಂಶವನ್ನು ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಿದರೆ ಉತ್ತಮ ಫಸಲನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.
ಮಾವಿನಲ್ಲಿ ಬೂದಿ ರೋಗದ ಸಂಭವವಿದ್ದರೆ 1 ಮಿಲೀ ಹೆಕ್ಸಾಕೊನೋಜೋಲ್ ಅಥವಾ 2 ಗ್ರಾಂ ಕಾರ್ಬಂಡೈಜಿಯಮ್‌ನ್ನು ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಿ. ಹೆಚ್ಚಿನ ಮಾಹಿತಿಗೆ ತೋಟಗಾರಿಕಾ ಇಲಾಖೆ ಅಥವಾ ತರಳಬಾಳು ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.