Advertisement
ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಅನಧಿಕೃತ ಜಾಹೀರಾತು ಫಲಕಗಳು, ಗ್ಯಾಂಟ್ರಿ, ಗೋಡೆ ಬರಹ ಹಾಗೂ ಭಿತ್ತಿಪತ್ರಗಳಿಂದ ನಗರದ ಅಂದ ಹಾಳಾಗುತ್ತಿದೆ. ಆ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಒಂದು ವರ್ಷದ ಅವಧಿಗೆ ಎಲ್ಲ ರೀತಿಯ ಜಾಹೀರಾತು ಪ್ರದರ್ಶನವನ್ನು ಸಂಪೂರ್ಣವಾಗಿ ನಿಷೇಧಿಸಲು ಪಾಲಿಕೆ ನಿರ್ಣಯ ಕೈಗೊಂಡಿದೆ.
Related Articles
Advertisement
ತೆರವುಗೊಳಿಸಿ ಇಲ್ಲವೆ, ಜೈಲಿಗೆ ಹೋಗಿ: ಪಾಲಿಕೆಯ ವ್ಯಾಪ್ತಿಯ ಪಾದಚಾರಿ ಮಾರ್ಗ, ರಾಜಕಾಲುವೆ ಹಾಗೂ ಉದ್ಯಾನಗಳಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳನ್ನು ಪಾಲಿಕೆಯಿಂದಲೇ ತೆರವುಗೊಳಿಸುತ್ತೇವೆ. ಸರ್ಕಾರದ ಇತರೆ ಇಲಾಖೆಗಳಿಗೆ ಪತ್ರ ಬರೆದು ಕೂಡಲೇ ಅವರು ಅಳವಡಿಸಿದ ಫಲಕಗಳನ್ನು ತೆಗೆಯಲು ಸೂಚನೆ ನೀಡಲಾಗುವುದು.
ಇನ್ನು ಖಾಸಗಿ ಜಾಗದಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳನ್ನು ಜಾಗದ ಮಾಲೀಕರೆ 15 ದಿನಗಳಲ್ಲಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಫಲಕವಿರುವ ಆಸ್ತಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು. ಹಾಗೇ ಈಗಾಗಲೇ ಪಾಲಿಕೆಯಿಂದ 880 ಅನಧಿಕೃತ ಜಾಹೀರಾತು ಫಲಕಗಳನ್ನು ಬುಡ ಸಮೇತವಾಗಿ ತೆರವುಗೊಳಿಸಿದ್ದು, ಇನ್ನೂ 2500ಕ್ಕೂ ಹೆಚ್ಚು ಫಲಕಗಳನ್ನು ತೆರವುಗೊಳಿಸಬೇಕಿದೆ ಎಂದು ಮಾಹಿತಿ ನೀಡಿದರು.
ಬಾಕಿ ತೆರಿಗೆ ಪಾವತಿಸಲೇ ಬೇಕು: ಪಾಲಿಕೆಯಿಂದ ಈಗಾಗಲೇ ನೂರಾರು ಏಜೆನ್ಸಿಗಳಿಗೆ 300 ಕೋಟಿ ರೂ. ಮೊತ್ತದ ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಲಾಗಿದೆ. ಇದೀಗ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸುತ್ತಿದ್ದು, ಏಜೆನ್ಸಿಗಳು ಬಾಕಿ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪಾಲಿಕೆಗೆ ಬರಬೇಕಿರುವ ಎಲ್ಲ ಬಾಕಿ ವಸೂಲಿ ಮಾಡುತ್ತೇವೆ ಎಂದು ಮಂಜುನಾಥ ಪ್ರಸಾದ್ ಹೇಳಿದರು.
ಮದುವೆ ಫ್ಲೆಕ್ಸ್ ಕೂಡ ಇರಬಾರದು: ನಗರದ ಕಲ್ಯಾಣ ಮಂಟಪ-ಸಮುದಾಯ ಭವನಗಳಲ್ಲಿ ನಡೆಯುವ ಮಧುವೆ ಮತ್ತಿತರ ಶುಭ ಸಮಾರಂಭ, ಕಾರ್ಯಕ್ರಮಗಳಿಗೆ ಅಳವಡಿಸುವ ಸೂಚನಾ ಫಲಕಗಳು, ಪ್ಲೆಕ್ಸ್, ಶಾಪಿಂಗ್ ಮಾಲ್, ಕಂಪನಿಗಳು, ಶಿಕ್ಷಣ ಸಂಸ್ಥೆಗಳು ಅಳವಡಿಸಿರುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸಬೇಕು ಎಂದು ಮೇಯರ್ ಸಂಪತ್‌ರಾಜ್ ತಿಳಿಸಿದರು.
ಪಾಲಿಕೆಯೇ ಸೂಕ್ತ ಸ್ಥಳ ಗುರುತಿಸಲಿ: ಪಾಲಿಕೆ ವ್ಯಾಪ್ತಿಯಲ್ಲಿ ಕೂಡಲೇ ಫ್ಲೆಕ್ಸ್ ಹಾಗೂ ಅನಧಿಕೃತ ಜಾಹೀರಾತು ಫಲಕಗಳನ್ನು ನಿಷೇಧಿಸಿ, ಬುಡಸಮೇತವಾಗಿ ಅವುಗಳನ್ನು ತೆರವುಗೊಳಿಸಬೇಕು. ನಂತರ ಪಾಲಿಕೆಯಿಂದಲೇ ಸೂಕ್ತ ಜಾಗ ಗುರುತಿಸಿ, ಜಾಹೀರಾತು ಉಪವಿಧಿಗಳಂತೆ ಟೆಂಡರ್ ಕರೆದು ಅಥವಾ ಹರಾಜು ಹಾಕಿ, ಹೆಚ್ಚಿನ ಮೊತ್ತ ನೀಡುವವರಿಗೆ ಜಾಹೀರಾತು ಫಲಕ ಅಳವಡಿಸಲು ಅವಕಾಶ ನೀಡಬೇಕು ಎಂದು ಆಡಳಿತ ಪಕ್ಷ ನಾಯಕ ಎಂ.ಶಿವರಾಜು ತಿಳಿಸಿದರು.
ದೆಹಲಿ ಮಾದರಿ ಜಾರಿಗೆ ತನ್ನಿ: ದೇಶದ ರಾಜಧಾನಿ ದೆಹಲಿಯಲ್ಲಿ ಯಾವುದೇ ಜಾಹೀರಾತು ಫಲಕಗಳ ಅಳವಡಿಕೆಗೆ ಅನುಮತಿ ನೀಡಿಲ್ಲ. ಅದೇ ಮಾದರಿಯಯನ್ನು ಬೆಂಗಳೂರಲ್ಲೂ ಜಾರಿಗೊಳಿಸಿದರೆ ನಗರದ ಸೌಂದರ್ಯ ಹಾಳಾಗದು. ಒಂದೊಮ್ಮೆ ಉಪವಿಧಿಗಳನ್ನು ಜಾರಿಗೊಳಿಸುವುದಾದರೆ 2011ರಲ್ಲಿ ಬಿಜೆಪಿ ಆಡಳಿತದಲ್ಲಿ ರೂಪಿಸಿದ ಉಪವಿಧಿಗಳನ್ನು ಪರಿಗಣಿಸುವುದು ಸೂಕ್ತ ಎಂದು ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಸಲಹೆ ನೀಡಿದರು.
ಅಶ್ಲೀಲ ಜಾಹೀರಾತಿಗೆ ಕಡಿವಾಣ ಹಾಕಿ: ನಗರದ ಹಲವು ಫಲಕಗಳಲ್ಲಿ ಮುಜಗರ ಉಂಟುಮಾಡುವಂತಹ ಜಾಹೀರಾತುಗಳಿವೆ. ಕೆಲವೆಡೆ ಅಳವಡಿಸಿರುವ ಒಳ ಉಡುಪಿನ ಜಾಹೀರಾತುಗಳು ಅಶ್ಲೀಲವಾಗಿದ್ದು, ಮಕ್ಕಳೊಂದಿಗೆ ಆ ಮಾರ್ಗದಲ್ಲಿ ಓಡಾಡಲು ಮುಜುಗರವಾಗುತ್ತದೆ. ಹೀಗಾಗಿ ಇಂತಹ ಜಾಹೀರಾತುಗಳಿಗೆ ಕಡಿವಾಣ ಹಾಕಬೇಕು ಎಂದು ಬಿಜೆಪಿಯ ಪ್ರತಿಭಾ ಧನರಾಜ್ ಒತ್ತಾಯಿಸಿದರು.
ಎಲ್ಲರ ಅಭಿಪ್ರಾಯ ಪಡೆಯಬೇಕು: ಜಾಹೀರಾತು ಬೈಲಾ ತಿದ್ದುಪಡಿ ಉಪವಿಧಿಗಳನ್ನು ಜಾರಿಗೊಳಿಸುವ ಮೊದಲು ಸಾರ್ವಜನಿಕರು, ಜಾಹೀರಾತು ಏಜೆನ್ಸಿಗಳೊಂದಿಗೆ ಚರ್ಚಿಸುವುದು ಸೂಕ್ತ. ಜಾಹೀರಾತು ಫಲಕಗಳನ್ನು ನಿಷೇಧಿಸಿದರೆ ಎಷ್ಟು ಜನರು ಕೆಲಸ ಕಳೆದುಕೊಳ್ಳುತ್ತಾರೆ ಎಂಬ ಕುರಿತು ಪರಿಶೀಲಿಸಬೇಕು. ಜತೆಗೆ ಜಾಹೀರಾತು ಉಪವಿಧಿಗಳ ಕುರಿತು ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು ಎಂದು ಮಹಮದ್ ರಿಜ್ವಾನ್ ಹೇಳಿದರು.
ಏರ್‌ಪೋರ್ಟ್‌ಗೆ 200 ಕೋಟಿ-ಬಿಬಿಎಂಪಿಗೆ ಕೇವಲ 30 ಕೋಟಿ:ಕೇವಲ 4ರಿಂದ 5 ಚದರ ಕಿ.ಮೀ. ವ್ಯಾಪ್ತಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಾಹೀರಾತಿನಿಂದ ವಾರ್ಷಿಕ 200 ಕೋಟಿ ರೂ. ವರಮಾನ ಬರುತ್ತಿದೆ. ಆದರೆ, 800 ಚದರ ಕಿ.ಮೀ. ವ್ಯಾಪ್ತಿಯ ಪಾಲಿಕೆಗೆ ವಾರ್ಷಿಕ 30 ಕೋಟಿ ರೂ. ಆದಾಯ ಬರುತ್ತಿದೆ. ಹೀಗಾಗಿ ನಗರದಲ್ಲಿ ಜಾಹೀರಾತು ನಿಷೇಧ ಮಾಡುವುದು ಅನಿವಾರ್ಯ ಎಂದು ಉಮೇಶ್ ಶೆಟ್ಟಿ ಹೇಳಿದರು.
ಜಾಹೀರಾತು ನೀತಿ ಮುಂದಕ್ಕೆ: ನೂತನ ಜಾಹೀರಾತು ನೀತಿ ಜಾರಿ ಸಂಬಂಧ ಸದಸ್ಯರು ವಿಸ್ತೃತವಾಗಿ ಚರ್ಚೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಹೊಸ ಜಾಹೀರಾತು ನೀತಿ ಅನುಮೋದನೆಗೆ ಕಾಲಾವಕಾಶ ನೀಡುವಂತೆ ಹೈಕೋರ್ಟ್‌ಗೆ ಕೋರಬೇಕು ಎಂದು ಪಾಲಿಕೆ ಸದಸ್ಯರು ಒತ್ತಾಯಿಸಿದರು. ಕಾಲಾವಕಾಶ ಕೋರುವಂತೆ ಆಯುಕ್ತರಿಗೆ ಮೇಯರ್ ಸೂಚಿಸಿದರು.
ಘಟಕಗಳ ಪುನಾರಂಭಕ್ಕೆ ಅವಕಾಶ ಕೊಡಿ: ಈ ಮಧ್ಯೆ, ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್ ಮುದ್ರಣ ಘಟಕಗಳ ಮಾಲೀಕರು ಮೇಯರ್ ಸಂಪತ್ ರಾಜ್‌ರನ್ನು ಭೇಟಿ ಮಾಡಿ ಘಟಕಗಳನ್ನು ಮುಚ್ಚದಂತೆ ಮನವಿ ಮಾಡಿದರು. ಘಟಕಗಳಲ್ಲಿ ಫ್ಲೆಕ್ಸ್ ಹೊರತು ಬೇರೆ ರೀತಿಯ ಮುದ್ರಣ ಕಾರ್ಯ ಕೂಡ ಮಾಡಲಾಗುತ್ತಿದ್ದು, ಘಟಕಗಳನ್ನು ತೆಗೆಯಲು ಅವಕಾಶ ನೀಡಬೇಕೆಂದು ಕೋರಿದರು.
ಪಾಲಿಕೆಯಿಂದ ಅನುಮತಿ ಪಡೆದಿರುವ ಜಾಹೀರಾತುಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ತೆರವು ಮಾಡಲಾಗುವುದು. ಪಾಲಿಕೆಯಿಂದ ಅನುಮತಿ ಪಡೆದವರು ಕೂಡ ಫ್ಲೆಕ್ಸ್, ಪ್ಲಾಸ್ಟಿಕ್ ಮಿಶ್ರಿತ ಬ್ಯಾನರ್ ಬಳಸುವಂತಿಲ್ಲ.-ಆರ್.ಸಂಪತ್ ರಾಜ್, ಮೇಯರ್ ಒಂದು ವರ್ಷ ನಿಷೇಧದ ನಂತರ ಜಾಹೀರಾತು ಉಪವಿಧಿಗಳ ಕುರಿತು ಚರ್ಚಿಸಿ ಅಭಿಪ್ರಾಯ ಪಡೆಯಲಾಗುವುದು. ಬಳಿಕ ಹರಾಜು ಪ್ರಕ್ರಿಯೆ ಅಥವಾ ಗ್ಲೋಬಲ್ ಟೆಂಡರ್ ಕರೆಯುವ ಬಗ್ಗೆ ತೀರ್ಮಾನಿಸಲಾಗುವುದು.
-ಎನ್.ಮಂಜುನಾಥ ಪ್ರಸಾದ್, ಆಯುಕ್ತರು ಸದ್ಯದ ಪರಿಸ್ಥಿತಿಯಲ್ಲಿ ಯಾರ ಮೇಲಾದರೂ ದ್ವೇಷವಿದ್ದರೆ, ಅವರ ಹೆಸರಿನಲ್ಲಿ ಫ್ಲೆಕ್ಸ್ ಹಾಕಿ ಅವರ ಮೇಲೆ ಪ್ರಕರಣ ದಾಖಲಾಗುವಂತೆ ಮಾಡಬಹುದು. ಹೀಗಾಗಿ ಇಂತಹ ಕಾನೂನು ದುರ್ಬಳಕೆ ಬಗ್ಗೆಯೂ ಪರಿಶೀಲಿಸಬೇಕು.
-ಸತೀಶ್ ರೆಡ್ಡಿ, ಶಾಸಕ ಜಾಹೀರಾತು ಶುಲ್ಕದಿಂದ ಬಂದ ಆದಾಯ (ಕೋಟಿ ರೂ.ಗಳಲ್ಲಿ)
ವರ್ಷ ಆದಾಯ
-2010-11 12.96
-2011-12 32
-2012-13 23
-2013-14 35
-2014-15 21
-2015-16 6.19
-ಒಟ್ಟು 130.15