Advertisement

ಪಾಲಿಕೆಗೆ ಕಳಚಿತು ಜಾಹೀರಾತು ಬಾಕಿ ಉರುಳು

11:28 AM May 16, 2022 | Team Udayavani |

ಹುಬ್ಬಳ್ಳಿ: ಜಾಹೀರಾತು ಫಲಕಗಳ ಪರವಾನಗಿ ಶುಲ್ಕ (ಹೋರ್ಡಿಂಗ್ಸ್‌) ಪಾವತಿಯಲ್ಲಿ ಜಿಎಸ್‌ಟಿ ವಿಧಿಸುತ್ತಿರುವ ಕುರಿತ ರಿಟ್‌ ಅರ್ಜಿಗೆ ಹೈಕೋರ್ಟ್‌ ಇತಿಶ್ರೀ ಹಾಡಿದ್ದು, ಕಳೆದ ಐದು ವರ್ಷಗಳಿಂದ ಉಳಿಸಿಕೊಂಡ ಬಾಕಿ ವಸೂಲಿಗೆ ಪಾಲಿಕೆ ಮುಂದಾಗಿದೆ. ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಅರ್ಜಿಯ ನೆಪದಲ್ಲಿ ಬಾಕಿ ಉಳಿಸಿಕೊಂಡಿದ್ದವರು ಇದೀಗ ಕೋಟಿಗಟ್ಟಲೆ ಪಾವತಿ ಮಾಡುವ ಪರಿಸ್ಥಿತಿ ಎದುರಾಗಿದೆ.

Advertisement

ಜಾಹೀರಾತುದಾರರು ಹಾಗೂ ಪಾಲಿಕೆ ನಡುವೆ ಒಂದಲ್ಲಾ ಒಂದು ಸಂಘರ್ಷ ನಡೆಯುತ್ತಿದೆ. ಶುಲ್ಕ ಹೆಚ್ಚಳಕ್ಕೆ ವಿರೋಧ ನಂತರದಲ್ಲಿ ತೆರಿಗೆ ಹೀಗೆ ಒಂದಲ್ಲಾ ಒಂದು ಕಾರಣದಿಂದ ಪಾಲಿಕೆಗೆ ಪ್ರತಿವರ್ಷ ಸಂದಾಯವಾಗಬೇಕಾದ ಶುಲ್ಕ ಅಥವಾ ತೆರಿಗೆ ಪಾವತಿಯಾಗುತ್ತಿಲ್ಲ. ಕೆಲ ಜಾಹೀರಾತುದಾರರು ಸಕಾಲಕ್ಕೆ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಆದರೆ ಬಹುತೇಕರು ನಾನಾ ಕಾರಣಗಳಿಟ್ಟುಕೊಂಡು ಪ್ರತಿವರ್ಷ ಪಾವತಿಗೆ ಮುಂದಾಗುತ್ತಿಲ್ಲ. ಹೀಗಾಗಿ ಹುಬ್ಬಳ್ಳಿಯಲ್ಲಿ 272 ಹಾಗೂ ಧಾರವಾಡದಲ್ಲಿ 63 ಜಾಹೀರಾತು ಫಲಕಗಳಿಂದ ಪಾಲಿಕೆಗೆ ಪ್ರತಿವರ್ಷ ಬರಬೇಕಾದ ಸುಮಾರು 2.30 ಕೋಟಿ ರೂ. ಸಂದಾಯವಾಗುತ್ತಿಲ್ಲ. ಆದರೆ ಜಾಹೀರಾತು ಫಲಕಗಳಿಂದ ಬರುವ ಆದಾಯವನ್ನು ಪರವಾನಗಿದಾರರು ಪಡೆಯುತ್ತಿದ್ದಾರೆ. ಹೀಗಾಗಿ ಕಳೆದ ಐದು ವರ್ಷದಲ್ಲಿ ಪಾಲಿಕೆಗೆ ಸಂದಾಯವಾಗಬೇಕಾದ ಶುಲ್ಕದಲ್ಲಿ ಬರೋಬ್ಬರಿ 9.72 ಕೋಟಿ ರೂ. ಬಾಕಿ ಉಳಿದುಕೊಂಡಿದೆ.

ವಿವಾದ ಏನು?

ಕಳೆದ ಐದು ವರ್ಷಗಳ ಹಿಂದೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆ ಜಾರಿಯಾದ ನಂತರ ಬಹುತೇಕ ಪರವಾನಗಿದಾರರು ತೆರಿಗೆ ಪಾವತಿ ಮಾಡಲಿಲ್ಲ. ಜಿಎಸ್‌ಟಿ ಜಾರಿಯಾದ ನಂತರ ಪಾಲಿಕೆಯಿಂದ ದುಬಾರಿ ತೆರಿಗೆ ವಿಧಿಸಲಾಗುತ್ತಿದೆ. ಜಾಹೀರಾತು ಹೋರ್ಡಿಂಗ್‌ಗಳಿಗೆ ಅನುಮತಿ ನೀಡಲು ಜಾಹೀರಾತು ಏಜೆನ್ಸಿಗಳಿಗೆ ಜಾಹೀರಾತು ತೆರಿಗೆ ಅಥವಾ ಶುಲ್ಕ ವಿಧಿಸಲು ಪಾಲಿಕೆಗೆ ಅಧಿಕಾರವಿಲ್ಲ ಎಂಬುದು ಜಾಹೀರಾತುದಾರರ ಸಂಘದ ವಾದವಾಗಿತ್ತು. ಹೀಗಾಗಿ ಕೆಲವರು ಕಳೆದ ಐದು ವರ್ಷಗಳಿಂದ ಶುಲ್ಕ ಬಾಕಿ ಉಳಿಸಿಕೊಂಡಿದ್ದರು. ಕಳೆದ ವರ್ಷ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಎರಡು ವರ್ಷಗಳಿಂದ ಬಹುತೇಕ ಶುಲ್ಕ ಪಾವತಿ ಸ್ಥಗಿತಗೊಂಡಿತ್ತು. ಇದೀಗ ಹೈಕೋರ್ಟ್‌ ಅರ್ಜಿಯನ್ನು ವಜಾಗೊಳಿಸಿ ಪಾಲಿಕೆ ನಿರ್ಧಾರವನ್ನು ಎತ್ತಿಹಿಡಿದಿದೆ. ಹೀಗಾಗಿ ಕೋರ್ಟ್‌ ನೆಪವಿಟ್ಟುಕೊಂಡು ಕೋಟಿಗಟ್ಟಲೆ ಬಾಕಿ ಉಳಿಸಿಕೊಂಡವರು ಪಾವತಿ ಮಾಡಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಪಾಲಿಕೆ

Advertisement

ಶುಲ್ಕ ಪಾವತಿ ಮಾಡದವರ ಫಲಕಗಳ ಮೇಲಿನ ಜಾಹೀರಾತು ತೆರವಿಗೆ ಪಾಲಿಕೆ ಮುಂದಾಗಿದೆ. ಪಾಲಿಕೆಗೆ ನೂತನವಾಗಿ ಆಗಮಿಸಿದ್ದ ಕಂದಾಯ ವಿಭಾಗದ ಉಪ ಆಯುಕ್ತರು ಬಾಕಿ ಪಾವತಿ ಮಾಡಬೇಕು. ಮುಂದೆ ಹೈಕೋರ್ಟ್‌ ನೀಡುವ ಆದೇಶದ ಪ್ರಕಾರ ಪಾಲಿಕೆ ನಡೆದುಕೊಳ್ಳುತ್ತದೆ ಎಂದು ಎಲ್ಲಾ ಪರವಾನಗಿದಾರರಿಗೆ ನೋಟಿಸ್‌ ಜಾರಿ ಮಾಡಿದ್ದರು. ಇದರಿಂದಾಗಿ ಕೆಲವರು ಪಾವತಿಗೆ ಮುಂದಾಗಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಒಂದಿಷ್ಟು ಶುಲ್ಕ ಪಾವತಿಯಾಗಿದೆ. ಪಾಲಿಕೆಯಲ್ಲಿ ಹಿಂದಿದ್ದ ಅಧಿಕಾರಿಗಳು ಕಳೆದ ಐದು ವರ್ಷಗಳಲ್ಲಿ ಈ ಕಾರ್ಯ ಮಾಡಿದ್ದರೆ ಇಷ್ಟೊಂದು ಹೊರೆಯಾಗುತ್ತಿರಲಿಲ್ಲ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಯಾರ್ಯಾರಿಂದ ಎಷ್ಟೆಷ್ಟು ಬಾಕಿ?

ಬಾಕಿ ಉಳಿಸಿಕೊಂಡವರು ನವೀಕರಣ, ಬಾಕಿ, ಚಾಲ್ತಿ ಹಾಗೂ ಬಾಕಿ ಉಳಿದಿರುವ ಪ್ರತಿ ತಿಂಗಳಿಗೆ ಶೇ. 1.5 ನೋಟಿಸ್‌ ಫೀ ಕೂಡ ಪಾವತಿ ಮಾಡಬೇಕಾಗಿದೆ. ಅರಿಹಂತ ಆ್ಯಡ್ಸ್‌ -1,28,94,348 ರೂ., ತಿರುಮಲಾ ಆ್ಯಡ್ಸ್‌-1,22,07,184 ರೂ., ಕಲರ್‌ ಪಾಯಿಂಟ್ಸ್ -78,61,946 ರೂ., ಪೂರ್ಣಿಮಾ ಆರ್ಟ್ಸ್-53,47,435 ರೂ., ಕ್ರಿಯೇಟಿವ್‌ ಆ್ಯಡ್ಸ್‌-34,59,107 ರೂ., ದಿ ಪ್ರಿಸಂ ಅಡ್ವರ್ಟೈಸರ್ -8,70,857 ರೂ., ಇತರೆ ಪರವಾನಗಿದಾರರ ಬಾಕಿ ಸೇರಿದಂತೆ ಒಟ್ಟು ಬರೋಬ್ಬರಿ 9,72,94,019 ರೂ. ಪಾಲಿಕೆಗೆ ಸಂದಾಯವಾಗಬೇಕಾಗಿದೆ. ಕೆಲವರು ಐದು ವರ್ಷಗಳಿಂದಲೂ ಬಾಕಿ ಉಳಿಸಿಕೊಂಡಿದ್ದಾರೆ. ಇದೀಗ 2022-23ನೇ ಸಾಲಿನ ಶುಲ್ಕವೂ ಪಾವತಿ ಮಾಡಬೇಕಾಗಿದೆ.

ಬಾಕಿ ವಸೂಲಿಗೆ ಕ್ರಮ

ಹೈಕೋರ್ಟ್‌ ಅರ್ಜಿಯನ್ನು ವಜಾ ಮಾಡುತ್ತಿದ್ದಂತೆ ಎಲ್ಲಾ ಪರವಾನಗಿದಾರರಿಗೆ ಕಂದಾಯ ವಿಭಾಗದಿಂದ ಚಲನ್‌ ನೀಡಲಾಗಿದ್ದು, ನೋಟಿಸ್‌ ಜಾರಿ ಮಾಡಿ ಬಾಕಿ ಪಾವತಿ ಮಾಡುವಂತೆ ಎಚ್ಚರಿಕೆ ನೀಡಲಾಗುತ್ತಿದೆ. ಪಾಲಿಕೆ ನಿಯಮಾವಳಿ ಪ್ರಕಾರ ಮೂರು ನೋಟಿಸ್‌ ಜಾರಿ ಮಾಡಿದ ನಂತರ ಬಾಕಿ ಉಳಿಸಿಕೊಳ್ಳುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ರಿಟ್‌ ಅರ್ಜಿ ವಜಾಗೊಂಡ ನಂತರ ನೋಟಿಸ್‌ ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಕೆಲವರು ಬಾಕಿ ಪಾವತಿಗೆ ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಬಾಕಿ ಉಳಿಯದಂತೆ ವಸೂಲು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಪಾಲಿಕೆ ನಿಯಮಗಳ ಪ್ರಕಾರ ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಬಾಕಿ ವಸೂಲಿಗೆ ನೋಟಿಸ್‌ ಜಾರಿ ಮಾಡಲಾಗುತ್ತಿದೆ. ಈಗಾಗಲೇ ಬಾಕಿ ಉಳಿಸಿಕೊಂಡವರ ಜಾಹೀರಾತುಗಳನ್ನು ನಿಯಮಗಳ ಪ್ರಕಾರ ತೆರವುಗೊಳಿಸುವ ಕೆಲಸ ಆಗುತ್ತಿದೆ. ಅವರಿಗೆ ಮನವರಿಕೆ ಮಾಡುವ ಕೆಲಸ ಪಾಲಿಕೆಯಿಂದ ಆಗಲಿದೆ. ಇಷ್ಟಕ್ಕೂ ಬಾಕಿ ವಸೂಲಿ ಆಗದಿದ್ದರೆ ಪಾಲಿಕೆ ನಿಯಮಗಳ ಪ್ರಕಾರ ಯಾವ ಕ್ರಮ ಕೈಗೊಳ್ಳಬಹುದು ಎಂಬುದನ್ನು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಡಾ| ಬಿ.ಗೋಪಾಲಕೃಷ್ಣ, ಆಯುಕ್ತರು, ಮಹಾನಗರ ಪಾಲಿಕೆ

ಸರಕಾರದ ಆದೇಶದಲ್ಲಿ ಜಾಹೀರಾತು ತೆರಿಗೆ ರದ್ದು ಮಾಡಿದ್ದರೂ ಪಾಲಿಕೆಯಿಂದ ನಮ್ಮ ಮೇಲೆ ಹೇರುತ್ತಿದ್ದಾರೆ. ಇದನ್ನು ಖಂಡಿಸಿ ರಿಟ್‌ ಅರ್ಜಿ ಹಾಕಿದ್ದೆವು. ನಮ್ಮ ವಿರುದ್ಧವಾಗಿ ಆದೇಶ ಬಂದಿದ್ದು, ಎಲ್ಲರೊಂದಿಗೆ ಚರ್ಚಿಸಿ ಮೇಲ್ಮನವಿ ಹೋಗುವ ಬಗ್ಗೆ ನಿರ್ಧರಿಸಲಾಗುವುದು. ಜಾಹೀರಾತು ತೆರವುಗೊಳಿಸುವ ಪಾಲಿಕೆ ಕೆಲಸ ನಷ್ಟಕ್ಕೆ ಕಾರಣವಾಗುತ್ತಿದೆ. ಇದೀಗ ನೀಡಿರುವ ಚಲನ್‌ನಲ್ಲಿ ಸಾಕಷ್ಟು ನ್ಯೂನತೆಗಳಿವೆ. ಇವುಗಳ ಬಗ್ಗೆ ಕೇಳಿದರೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಇಂತಹ ಅಸಡ್ಡೆ ಹಾಗೂ ನಿಯಮ ವಿರೋಧಿ ನಿರ್ಧಾರಗಳಿಂದಾಗಿ ಪಾಲಿಕೆ ವಿರುದ್ಧ ಕೋರ್ಟ್‌ ಮೆಟ್ಟಿಲೇರುವಂತಾಗಿದೆ. –ಸಂದೀಪ ರೋಖಡೆ, ಅಧ್ಯಕ್ಷ, ಹು-ಧಾ ಜಾಹೀರಾತುದಾರರ ಸಂಘ

ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದವರು ಕೆಲವರು ಮಾತ್ರ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಹಲವರು ಶುಲ್ಕ ಪಾವತಿ ಮಾಡಿಲ್ಲ. ಕೆಲವರು ಐದು ವರ್ಷಗಳಿಂದ ಜಾಹೀರಾತು ತೆರಿಗೆ ಪಾವತಿ ಮಾಡಿಲ್ಲ. ಇದೀಗ ಘನ ನ್ಯಾಯಾಲಯ ರಿಟ್‌ ಅರ್ಜಿ ವಜಾಗೊಳಿಸಿದೆ. ಸುಮಾರು 9.72 ಕೋಟಿ ರೂ. ಪಾಲಿಕೆಗೆ ಬರಬೇಕಾಗಿದೆ. ವಸೂಲಾತಿಗೆ ಯಾವುದೇ ಕಾರಣಕ್ಕೂ ವಿಳಂಬ ಮಾಡುವ ಪ್ರಶ್ನೆಯಿಲ್ಲ. –ಆನಂದ ಕಲ್ಲೋಳಿಕರ, ಉಪ ಆಯುಕ್ತ, ಕಂದಾಯ ವಿಭಾಗ            

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next