ಕಲಬುರಗಿ: ಜಿಲ್ಲೆಗೆ ಕೋವಿಡ್ ‘ಮಹಾ’ ಕಂಟಕ ಬೆಂಬಿಡದೆ ಕಾಡುತ್ತಿದ್ದು, ಶನಿವಾರ 18 ಜನ ಮಕ್ಕಳು ಸೇರಿ ಮತ್ತೆ 67 ಜನರಿಗೆ ಮಹಾಮಾರಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 883ಕ್ಕೆ ಏರಿಕೆಯಾಗಿದೆ.
ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಸೇಡಂ ತಾಲೂಕಿನ ನಾಲ್ಕು ವರ್ಷದ ಮಗು (ಪಿ 6805)ವಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ ಕಲಬುರಗಿ ನಗರದ ಖಾನ್ ಕಾಲೋನಿಯ 30 ವರ್ಷದ ಪುರುಷ (ಪಿ 6772)ನಿಗೆ ಸೋಂಕು ಅಂಟಿಕೊಂಡಿದೆ. ಉಳಿದಂತೆ ಎಲ್ಲ ಸೋಂಕಿತರು ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿ ಬಂದವರೇ ಆಗಿದ್ದಾರೆ.
ಮಹಾ ನಂಟಿನಿಂದ ನಗರ ಪ್ರದೇಶದಲ್ಲಿ ಮಹಾಮಾರಿ ಸೋಂಕು ಮತ್ತಷ್ಟು ವ್ಯಾಪಿಸಿದೆ. ಸ್ವಾಸ್ತಿಕ ನಗರದಲ್ಲಿ 30 ವರ್ಷದ ಮಹಿಳೆ, 71 ವರ್ಷದ ವೃದ್ಧನಿಗೆ ಕೊರೊನಾ ಕಾಣಿಸಿಕೊಂಡಿದೆ. ಅದೇ ರೀತಿ ಜಿಲಾನಬಾದ್‍ನಲ್ಲಿ ಎರಡು ವರ್ಷ ಮತ್ತು ಎಂಟು ವರ್ಷದ ಹೆಣ್ಣು ಮಕ್ಕಳಿಗೆ ಹೆಮ್ಮಾರಿ ವಕ್ಕರಿಸಿದೆ. ಬ್ರಹ್ಮಪುರ ಬಡಾವಣೆಯಲ್ಲಿ 27 ವರ್ಷದ ಯುವಕ, ರಾಮ ಮಂದಿರ ಬಳಿಯ 33 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ತಾಲೂಕಿನ ಕವಲಗಾ ಬಿ. ಗ್ರಾಮದ ಮೂವರಿಗೆ ಸೋಂಕು ದೃಢಪಟ್ಟಿದೆ.
ಚಿತ್ತಾಪುರ ತಾಲೂಕಿನಲ್ಲಿ 25 ಜನರು, ಆಳಂದ ತಾಲೂಕಿನಲ್ಲಿ 23 ಜನರು, ಅಫಜಲಪುರ ತಾಲೂಕಿನಲ್ಲಿ ಆರು ಹಾಗೂ ಕಾಳಗಿ, ಯಾಡ್ರಮಿ ಹಾಗೂ ಶಹಾಬಾದ್ ತಾಲೂಕಿನಲ್ಲಿ ತಲಾ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.
ಕಾಳಗಿ ಮತ್ತು ಯಾಡ್ರಮಿಯಲ್ಲಿ ಎರಡು ವರ್ಷದ ಗಂಡು ಮಕ್ಕಳು, ಚಿತ್ತಾಪುರ ತಾಲೂಕಿನ ದೇವಾಪುರ ತಾಂಡಾದಲ್ಲಿ ಒಂದು ವರ್ಷದ ಹೆಣ್ಣು, ಎರಡು ವರ್ಷದ ಇಬ್ಬರು ಗಂಡು ಹುಡುಗರು, ಹತ್ತು ವರ್ಷದ ಬಾಲಕಿಗೆ ಸೋಂಕು ಮಕ್ಕರಿಸಿದೆ. ಅಫಜಲಪುರ ತಾಲೂಕಿನ ಗಬ್ಬೂರ ಬಿ. ಗ್ರಾಮದಲ್ಲಿ ಮೂರು ವರ್ಷದ ಗಂಡು ಮಗುವಿಗೆ ಕೊರೊನಾ ಪತ್ತೆಯಾಗಿದೆ.
23 ಜನ ಬಿಡುಗಡೆ: ಕೋವಿಡ್-19 ಸೋಂಕಿಗೆ ಒಳಗಾಗಿದ್ದ 23 ಜನರು ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತೆಲಂಗಾಣದಿಂದ ಬಂದ ಕಮಲಾಪುರ ತಾಲೂಕಿನ 30 ವರ್ಷ ವ್ಯಕ್ತಿ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದ್ದ ಚಿತ್ತಾಪುರ ತಾಲೂಕಿನ 22 ಜನರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 883 ಜನ ಸೋಂಕಿತರಲ್ಲಿ ಇದುವರೆಗೆ 377 ಜನರು ಡಿಸ್ಚಾರ್ಜ್ ಆಗಿದ್ದಾರೆ. ಹತ್ತು ಸೋಂಕಿತರು ಮೃತಪಟ್ಟಿದ್ದು, ಉಳಿದಂತೆ 496 ಸೋಂಕಿತರಿಗೆ ಐಸೋಲೇಷನ್ ವಾರ್ಡ್ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.