Advertisement

ಸೈಬರ್‌ ವ್ಯಸನದಿಂದ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ

09:45 AM Jul 15, 2019 | Suhan S |

ಹುಬ್ಬಳ್ಳಿ: ಸೈಬರ್‌ ವ್ಯಸನದಿಂದ ಮಕ್ಕಳ ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳಿಗೆ ಸೈಬರ್‌ ಸಾಕ್ಷರತೆ ಅಳವಡಿಸುವುದು ಅವಶ್ಯ ಎಂದು ಕ್ಲಿನಿಕಲ್ ಸೈಕಾಲಜಿ ಪ್ರಾಧ್ಯಾಪಕ ಡಾ| ಮನೋಜಕುಮಾರ ಶರ್ಮಾ ಹೇಳಿದರು.

Advertisement

ಮನಃಶಾಸ್ತ್ರ ವಿಭಾಗದ ವತಿಯಿಂದ ಕಿಮ್ಸ್‌ ಗೋಲ್ಡನ್‌ ಜ್ಯುಬಿಲಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 4ನೇ ವಾರ್ಷಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್ ವ್ಯವಸ್ಥೆ ಬೆಳೆಸಿಕೊಂಡ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಮಕ್ಕಳ ಮೆದುಳಿನ ಮೇಲೆ ಪರಿಣಾಮವಾಗುತ್ತಿದೆ. ಹೆಚ್ಚು ಸಮಯವನ್ನು ಮೊಬೈಲ್ನಲ್ಲೇ ಕಳೆಯುವುದರಿಂದ ಆಟ, ವ್ಯಾಯಾಮದಂಥ ದೈಹಿಕ ಚಟುವಟಿಕೆ ಇಲ್ಲವಾಗಿದೆ. ಇದರಿಂದ ಬೊಜ್ಜು ಬೆಳೆಯುತ್ತದೆ. ಅದು ಮುಂದೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದರು.

ಸಾಮಾನ್ಯವಾಗಿ ವಯಸ್ಕರು 50-60 ಬಾರಿ ಸ್ಮಾರ್ಟ್‌ಫೋನ್‌ ಪರಿಶೀಲಿಸುತ್ತಾರೆ. ಕೆಲವರು 100ಕ್ಕೂ ಹೆಚ್ಚು ಬಾರಿ ಮೊಬೈಲ್ ಪರಿಶೀಲಿಸುತ್ತಾರೆ. ಇದು ವ್ಯಕ್ತಿಯ 10 ದುಡಿಯುವ ವರ್ಷಗಳನ್ನು ಹಾಳು ಮಾಡುತ್ತದೆ ಎಂದರು.

ಜೀರೋ ಇನ್‌ ಬಾಕ್ಸ್‌ ಸಿಂಡ್ರೋಮ್‌ನಿಂದ ಕೆಲವರು ತೊಂದರೆಗೀಡಾಗುತ್ತಿದ್ದಾರೆ. ರಾತ್ರಿ ಎಷ್ಟೇ ಹೊತ್ತಾದರೂ ವ್ಯಾಟ್ಸ್‌ಆ್ಯಪ್‌ ಗ್ರೂಪ್‌ಗ್ಳ ಎಲ್ಲ ಸಂದೇಶ, ವಿಡಿಯೋ ನೋಡಿಯೇ ಮಲಗುತ್ತಾರೆ. ಇದರಿಂದ ನಿದ್ರೆಯ ಸಮಯ 90 ನಿಮಿಷಗಳಷ್ಟು ಕಡಿಮೆಯಾಗುತ್ತಿದೆ. ನಿದ್ರಾಹೀನತೆಯಿಂದ ಆರೋಗ್ಯ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದರು.

Advertisement

ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಯಾವುದೇ ಸಂದೇಶ, ವಿಡಿಯೋ ಬಾರದಿದ್ದರೂ ಒತ್ತಡಕ್ಕೊಳಗಾಗುವ ಜನರಿದ್ದಾರೆ. ತಮ್ಮನ್ನು ಕಡೆಗಣಿಸಲಾಗುತ್ತಿದೆ. ತಮಗೆ ಯಾರೂ ಸ್ನೇಹಿತರಿಲ್ಲ ಎಂಬ ಭಾವನೆ ಅವರಿಗೆ ಕಾಡುತ್ತದೆ. ಯಾವುದೇ ಸಂದೇಶ ಬಂದರೂ ತ್ವರಿತವಾಗಿ ಅದನ್ನು ಇತರರಿಗೆ ರವಾನಿಸಬೇಕೆಂಬ ತುಡಿತ ಅವರಲ್ಲಿರುತ್ತದೆ ಎಂದರು.

ಒಂದು ದಿನ ಮನೆಯಲ್ಲಿ ಮೊಬೈಲ್ ಮರೆತು ಬಂದರೆ ದಿನ ಪೂರ್ತಿ ಚಡಪಡಿಕೆಯಾಗುತ್ತದೆ. ಜನರು ಏನೋ ಕಳೆದುಕೊಂಡ ಭಾವ ಅನುಭವಿಸುತ್ತಾರೆ. ನೊಮೊಫೋಬಿಯಾದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಚಿಂತನ-ಮಂಥನ ನಡೆಯಬೇಕಿದೆ. ಇದರ ಗೀಳಿಗೀಡಾದವರಿಗೆ ಸಮರ್ಪಕ ಸಮಾಲೋಚನೆ, ಚಿಕಿತ್ಸೆ ದೊರೆಯುವಂತಾಗಬೇಕು ಎಂದರು.

ಕಡಿಮೆ ದರದಲ್ಲಿ ಇಂಟರ್‌ನೆಟ್ ಲಭ್ಯತೆ, ಸೇವಾ ಸಂಸ್ಥೆಗಳು ಪ್ರತಿ ದಿನ 1ರಿಂದ 2 ಜಿಬಿ ನೀಡುತ್ತಿರುವುದು, 6-7 ವರ್ಷದ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದು ಸೇರಿದಂತೆ ಹಲವು ಕಾರಣಗಳಿಂದ ಸೈಬರ್‌ ವ್ಯಸನಕ್ಕೀಡಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ಡಾ|ಎ.ಜಗದೀಶ ಮಾತನಾಡಿ, ದಕ್ಷಿಣ ಭಾರತ ಮನೋಶಾಸ್ತ್ರ ಸಂಸ್ಥೆ ವತಿಯಿಂದ ಮೂಲ ಸಂಗತಿಗಳನ್ನು ತಿಳಿಸಿಕೊಡಲು ಹೊಸ ಕೋರ್ಸ್‌ ಆರಂಭಿಸಲಾಗುತ್ತಿದೆ. ಭಾರತದಲ್ಲಿ ಮೊದಲ ಬಾರಿ ಇಂಥ ಕೋರ್ಸ್‌ ಆರಂಭಿಸಲಾಗುತ್ತಿದೆ. ಮುಂದಿನ ವರ್ಷ ದೇಶಾದ್ಯಂತ ಕೋರ್ಸ್‌ ಆರಂಭಿಸಲಾಗುವುದು ಎಂದರು.

ಡಾ| ಮಹೇಶ ದೇಸಾಯಿ, ಡಾ| ಅಭಯ ಮಟಕರ, ಡಾ| ಅರುಣಕುಮಾರ ವೇದಿಕೆ ಮೇಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next