Advertisement
ತಂಬಾಕಿನ ವಿವಿಧ ರೂಪ ಮತ್ತು ಪರಿಣಾಮಗಳು
Related Articles
Advertisement
ಹೊಗೆರಹಿತ ತಂಬಾಕು ರೂಪಗಳಾದ ಗುಟ್ಕಾ, ಖೈನಿ, ತಂಬಾಕು ಸಹಿತ ಪಾನ್ ಬಾಯಿಯ ಮತ್ತು ಗಂಟಲಿನ ಕ್ಯಾನ್ಸರ್‌ಗಳನ್ನು ಉಂಟು ಮಾಡುವಲ್ಲಿ ಪ್ರಮುಖ ಅಂಶವಾಗಿದೆ ಎಂದು ತೋರಿಸಲಾಗುತ್ತದೆ.
ಆರೋಗ್ಯದ ಮೇಲೆ ಪರಿಣಾಮಗಳು
ಹೊಗೆಯಾಡುವ ಮತ್ತು ಹೊಗೆರಹಿತ ತಂಬಾಕು ಉತ್ಪನ್ನಗಳ ಬಳಕೆಯು ಶ್ವಾಸಕೋಶದ ಕ್ಯಾನ್ಸರ್, ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆಗಳು ಕಾಣಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಯಾವುದಾದರೂ ಕಾಯಿಲೆಗೆ ಚಿಕಿತ್ಸೆ ಪಡೆದುಕೊಂಡಿರುವವರ ಅನಾರೋಗ್ಯವನ್ನು ಉಲ್ಬಣಗೊಳಿಸಿ ದೇಹದ ಕಾರ್ಯನಿರ್ವಹಣೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.
ಬಾಯಿಯ ಆರೋಗ್ಯದ ಮೇಲೆ ಪರಿಣಾಮಗಳು
ಬಾಯಿಯ ಆರೋಗ್ಯದ ಮೇಲೆ ತಂಬಾಕು ಸೇವನೆಯ ಪರಿಣಾಮಗಳು ಗಂಭೀರವಾಗಿವೆ. ಕ್ಯಾನ್ಸರ್ ಸಂಬಂಧಿ ಮರಣದ ಪ್ರಮುಖ ಕಾರಣವಾದ ಬಾಯಿಯ ಕ್ಯಾನ್ಸರ್ ಕಾಣಿಸಿಕೊಳ್ಳಲು ಧೂಮಪಾನ ಅಥವಾ ಹೊಗೆರಹಿತವಾದ ತಂಬಾಕು ಉತ್ಪನ್ನಗಳ ಬಳಕೆಗೆ ಸಂಬಂಧಿಸಿದೆ ಎನ್ನುವುದು ಗಮನಾರ್ಹವಾಗಿದೆ.
ತಂಬಾಕಿನಲ್ಲಿರುವ ಚೂಪಾದ ಕಣಗಳ ಕಾರಣದಿಂದಾಗಿ ಒಸಡು ರೋಗಗಳು, ಹಲ್ಲಿನ ಕಲೆಗಳು, ಬಾಯಿಯ ಗಾಯಗಳು ಮತ್ತು ಅಂತಿಮವಾಗಿ ಹಲ್ಲು ಉದುರುವುದು ಇತ್ಯಾದಿ ಆರೋಗ್ಯ ಸಮಸ್ಯೆಗಳು ಧೂಮಪಾನಿಗಳು ಮತ್ತು ಹೊಗೆರಹಿತ ತಂಬಾಕು ಬಳಕೆದಾರರಲ್ಲಿ ಸಾಮಾನ್ಯ. ಧೂಮಪಾನ ವ್ಯಸನ ರುಚಿ ಮತ್ತು ವಾಸನೆಯ ಇಂದ್ರಿಯಗಳನ್ನು ದುರ್ಬಲಗೊಳಿಸುತ್ತದೆ.
ಬಾಯಿಯಲ್ಲಿ ಉಂಟಾಗಬಹುದಾದ ಗಾಯಗಳು ಗುಣವಾಗುವ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ ಮತ್ತು ಹಲ್ಲಿನ ಕ್ಷಯವನ್ನು ಉಲ್ಬಣಗೊಳಿಸುತ್ತದೆ. ಇದಲ್ಲದೆ, ಧೂಮಪಾನ ಮತ್ತು ಇತರ ತಂಬಾಕು ಉತ್ಪನ್ನಗಳ ಬಳಕೆದಾರರಿಗೆ ಬಾಯಿಯ ದುರ್ವಾಸನೆಯನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗು ವುದಿಲ್ಲ. ನಿಕೋಟಿನ್ ಮತ್ತು ತಂಬಾಕಿನ ರಾಸಾಯನಿಕಗಳ ಸಂಯೋಜನೆಯು ಬಾಯಿ ಒಣಗಲು ಕಾರಣವಾಗುತ್ತದೆ.
ಇದು ಮಾತನಾಡುವಲ್ಲಿ ತೊಂದರೆ ಉಂಟುಮಾಡುತ್ತದೆ. ಜಗಿಯಲು, ಮಾತನಾಡಲು ತೊಂದರೆಯಾಗುವುದಲ್ಲದೆ ಬಾಯಿಯ ದುರ್ವಾಸನೆಯನ್ನು ತೊಡೆದುಹಾಕುವ ಸಾಮರ್ಥ್ಯವನ್ನು ತಂಬಾಕು ಸೇವನೆ ತಡೆಯುತ್ತದೆ. ತಂಬಾಕಿನ ನಿರಂತರ ಬಳಕೆಯು ಬಾಯಿಯ ಅಂಗಾಂಶಗಳಲ್ಲಿ ಬದಲಾ ವಣೆಗಳನ್ನು ಉಂಟುಮಾಡುತ್ತದೆ. ಇದು ಬಾಯಿ, ಗಂಟಲ ಕುಳಿಯಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳಲು ಕಾರಣವಾಗುತ್ತದೆ.
ಪರಿಣಾಮಕಾರಿ ತಂಬಾಕು ನಿಯಂತ್ರಣ ಕ್ರಮ
ತಂಬಾಕು ಉತ್ಪನ್ನಗಳ ಸೇವನೆ ಒಂದು ರೀತಿಯ ಸಾಂಕ್ರಾಮಿಕ ರೋಗದಂತಿದ್ದು, ಇಂತಹ ಸಾಂಕ್ರಾಮಿಕ ರೋಗವನ್ನು ಪರಿಹರಿಸಲು ಅತ್ಯಂತ ಕಠಿನವಾದ ತಂಬಾಕು ನಿಯಂತ್ರಣ ಕ್ರಮಗಳ ಅಗತ್ಯವಿದೆ. ಯುವ ಪೀಳಿಗೆ ತಂಬಾಕು ಪರಿಚಯ ಆಗುವುದನ್ನು ನಿಯಂತ್ರಿಸುವುದು ಮತ್ತು ಶಾಲಾ ಪರಿಸರದಲ್ಲಿ ತಡೆಗಟ್ಟುವ ಕಾರ್ಯಕ್ರಮಗಳು ಪರಿಣಾಮಕಾರಿ ಎಂದು ಶಿಕ್ಷಣತಜ್ಞರು ಮತ್ತು ಆರೋಗ್ಯ ಕ್ಷೇತ್ರದ ತಜ್ಞರು ಬೆಂಬಲಿಸಿದ್ದಾರೆ.
ಈ ಕಾರ್ಯಕ್ರಮಗಳು ಯುವಕರಲ್ಲಿ ಧೂಮಪಾನದ ಪ್ರಯೋಗ ಮತ್ತು ಪ್ರಾರಂಭವನ್ನು ತಡೆಗಟ್ಟುವ ಗುರಿಯನ್ನು ಹೊಂದಿವೆ. ಆದರೂ ಹದಿಹರೆಯದವರಿಗೆ ಸಿಗರೇಟುಗಳನ್ನು ಖರೀದಿಸುವುದು ಕಷ್ಟಕರವಾಗಿದೆ. ಆದರೂ ಇವುಗಳು ಯುವಕರು ಧೂಮಪಾನ ಸೇವನೆಯ ಪರಿಚಯವಾಗುವುದರ ವಿರುದ್ಧ ಸ್ಥಿರವಾದ ಧನಾತ್ಮಕ ಪರಿಣಾಮ ಬೀರಿಲ್ಲ.
ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿ (ಎನ್‌ಆರ್‌ಟಿ) ವರೆನಿಕ್ಲೈನ್ (ಚಾಂಪಿಕ್ಸ್) ಮತ್ತು ಬುಪ್ರೊಪಿಯಾನ್ (ಝೈಬಾನ್)ನಂತಹ ಧೂಮಾಪಾನದ ನಿಲುಗಡೆ ಚಿಕಿತ್ಸೆಗಳು ಧೂಮಪಾನವನ್ನು ತೊರೆಯಲು ಬಯಸುವವರಿಗೆ ಸಹಾಯವನ್ನು ನೀಡುತ್ತವೆ. ಎನ್‌ಆರ್‌ಟಿ ತಂಬಾಕು ಹೊಗೆಯಲ್ಲಿ ಹಾನಿಕಾರಕ ರಾಸಾಯನಿಕಗಳಿಲ್ಲದೆ ಕಡಿಮೆ ಮಟ್ಟದ ನಿಕೋಟಿನ್ ಅನ್ನು ಒದಗಿಸುತ್ತದೆ. ವಿಡ್ರಾವಲ್ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ವರೆನಿಕ್ಲೈನ್ ಮತ್ತು ಬುಪ್ರೊಪಿಯಾನ್ ವೈದ್ಯರ ಸಲಹೆ ಮೇರೆಗೆ ಮೇಲೆ ಲಭ್ಯವಿದೆ. ವ್ಯಸನಕಾರಿ ನಡವಳಿಕೆಯಲ್ಲಿ ತೊಡಗಿರುವ ಮೆದುಳಿನ ಪ್ರದೇಶಗಳಲ್ಲಿ ಕೆಲಸ ಮಾಡುತ್ತದೆ ಮತ್ತು ಧೂಮಪಾನವನ್ನು ತೊರೆಯುವಲ್ಲಿ ಸಹಾಯಕವಾಗಿದೆಯೆಂದು ಸಾಬೀತಾಗಿದೆ.
ಭಾರತದಲ್ಲಿ ತಂಬಾಕು ನಿಯಂತ್ರಣಕ್ಕಾಗಿ ವಿವಿಧ ಕಾನೂನುಗಳು ಮತ್ತು ಕಾನುನುಗಳಿವೆ. ತಂಬಾಕು ಬಳಕೆಯನ್ನು ಕಡಿಮೆ ಮಾಡಲು ಭಾರತ ಸರಕಾರವು 2004ರಲ್ಲಿ ತನ್ನ ಸಮಗ್ರ ತಂಬಾಕು ನಿಯಂತ್ರಣ ಕಾನೂನು “”ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ 2003” (ಇOಖಕಅ 2003) (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯದ ನಿಯಂತ್ರಣ, ಉತ್ಪಾದನೆ, ಪೂರೈಕೆ ಮತ್ತು ವಿತರಣೆ) ಜಾರಿಗೊಳಿಸಿತು.
ಈ ಕಾಯಿದೆ ಈ ಕೆಳಗಿನವುಗಳನ್ನು ಒಳಗೊಂಡಿದೆ:
ಎ) ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನದ ನಿಷೇಧ
ಬಿ) ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಜಾಹೀರಾತಿನ ನಿಷೇಧ
ಸಿ) 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ಸಿಗರೇಟ್ ಅಥವಾ ಇತರ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವುದು.
ಡಿ) ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಉತ್ಪಾದನೆ, ಪೂರೈಕೆ ಮತ್ತು ವಿತರಣೆಯಲ್ಲಿ ವ್ಯಾಪಾರ ಮತ್ತು ವಾಣಿಜ್ಯದ ಮೇಲಿನ ನಿಷೇಧ. ಭಾರತದಲ್ಲಿ ಪರಿಣಾಮಕಾರಿ ತಂಬಾಕು ನಿಯಂತ್ರಣವನ್ನು ಸಾಧಿಸಲು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮೇಲ್ವಿಚಾರಣೆ ಮಾಡುವುದು ಪ್ರಮುಖವಾಗಿದೆ.
ತಂಬಾಕು ಸೇವನೆ ಅಪಾಯಕಾರಿ
ಮೌಖೀಕ ಆರೋಗ್ಯದ ಮೇಲೆ ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ನಿರಾಕರಿಸಲಾಗದು. ತಂಬಾಕು ಸೇವನೆಯು ಬಾಯಿಯ ಕಾಯಿಲೆಗಳು ಬರುವ ಗಮನಾರ್ಹ ಅಪಾಯಗಳನ್ನು ಉಂಟು ಮಾಡುತ್ತದೆ. ಮುಖದ ಆರೋಗ್ಯ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ತಂಬಾಕು ಬಳಕೆದಾರರನ್ನು ಗುರುತಿಸುವಲ್ಲಿ ಮತ್ತು ಶಿಕ್ಷಣ ನೀಡುವಲ್ಲಿ ದಂತವೈದ್ಯರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ತಂಬಾಕು ಬಳಕೆಯ ವಿರುದ್ಧದ ಹೋರಾಟವು ಪ್ರಬಲವಾದ ಅಡ್ವೆಕೆಸಿ, ಜಾಗೃತಿಕ ಮತ್ತು ಕಠಿನ ನಿಯಂತ್ರಣ ಕ್ರಮಗಳ ಅಗತ್ಯ ಹೊಂದಿದೆ. ಸಾರ್ವಜನಿಕರು, ಆರೋಗ್ಯ ವೃತ್ತಿಪರರು ಮತ್ತು ನೀತಿ ನಿರೂಪಕರು ಒಟ್ಟಾಗಿ ಕೆಲಸ ಮಾಡುವ ಮೂಲಕ ಬಾಯಿಯ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ತಂಬಾಕಿನ ವಿನಾಶಕಾರಿ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಪ್ರಗತಿ ಸಾಧಿಸಬಹುದು. ತಂಬಾಕಿನ ವಿರುದ್ಧ ನಿಲುವು ತೆಗೆದುಕೊಳ್ಳಲು ಮತ್ತು ಎಲ್ಲರಿಗೂ ಆರೋಗ್ಯಕರ ಭವಿಷ್ಯವನ್ನು ಸೃಷ್ಟಿಸಲು ಇದು ನಿರ್ಣಾಯಕ ಸಮಯ.
-ಡಾ| ನವ್ಯಾ,
ಸಾರ್ವಜನಿಕ ಆರೋಗ್ಯ ದಂತವೈದ್ಯ ವಿಭಾಗ,
ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಸಿನ್ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)