Advertisement
ಹೌದು, ಮಕರ ಸಂಕ್ರಾಂತಿ ದಿನವಾದ ಬುಧವಾರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದ ಸಮಾಗಮಮ್ ಕ್ರೀಡಾಂಗಣದಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಸಮೂಹ ಸಂಸ್ಥೆಗಳು ಆಯೋಜಿಸಿದ್ದ 45ನೇ ವಾರ್ಷಿಕ ಕ್ರೀಡಾಕೂಟ ಹಾಗೂ ಕಲೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮೂಡಿ ಬಂದ ಹಲವು ರೋಮಾಂಚನಕಾರಿ ಆಟೋಟಗಳು ಸಮಾಗಮಮ್ ಕ್ರೀಡಾಂಗಣದಲ್ಲಿ ಸಾಹಸ ಲೋಕವನ್ನೇ ತೆರೆದಿಟ್ಟಿತು.
Related Articles
Advertisement
ಏಕ ಚಕ್ರ ಸೈಕಲ್ ಸವಾರಿ, ಬಗೆಬಗೆಯ ಯೋಗಾಂಗ ಸಾಧನೆಗಳು, ಕ್ರಿಕೆಟ್ ಆಟದ ಚಮತ್ಕಾರಿಕ ತಂತ್ರಗಳು, ಭೂಕೇಂದ್ರಿತ ಬಹುರೂಪಿ ಕಸರತ್ತು, ವರ್ತುಲ ವಿನ್ಯಾಸದ ರಚನೆಯಲ್ಲಿ ಸಾಹಸ ಪ್ರದರ್ಶನ ಆರಂಭೋತ್ಸವದಲ್ಲಿ ಪ್ರದರ್ಶನಗೊಂಡಿತು.
ಉದ್ಘಾಟನಾ ಸಮಾರಂಭದಲ್ಲಿ ದೂರದ ಉತ್ತರಾಖಂಡದ ನಗರಾಭಿವೃದ್ಧಿ ಸಚಿವ ಮದನ್ ಕೌಶಿಕ್, ಶಿಕ್ಷಣ ತಜ್ಞ ಅತುಲ್ ಕೊಠಾರಿ, ನಾನಾ ರಾಜ್ಯಗಳ ಹಲವು ಶಾಸಕರು, ವಿನಯಾನಂದ ಸ್ವಾಮೀಜಿ, ಆಂಟನಿ ಟ್ಯಾನಿ, ಡೇವಿಡ್ ಕಾರ್ನ್ಸ್ವೀಟ್, ಪೊ›.ಶಶಿಧರ್ ಪ್ರಸಾದ್, ಬಿ.ಎನ್.ನರಸಿಂಹಮೂರ್ತಿ, ಬಿ.ನಾರಾಯಣ ರಾವ್, ಕರಾಯ ಸಂಜೀವ ಶೆಟ್ಟಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ಉಪಸ್ಥಿತರಿದ್ದರು.
ಸಮಾಗಮಮ್‌ನಲ್ಲಿ ಗಮನ ಸೆಳೆದ ಸಾಹಸ ಕ್ರೀಡೆ: ಸಮಾಗಮಮ್ ಕ್ರೀಡಾಂಗಣದ ಮಧ್ಯೆ 120 ಅಡಿ ಎತ್ತರದಲ್ಲಿ ಹಾಟ್‌ಏರ್ ಬಲೂನ್ ಮೂಲಕ ವಿದ್ಯಾರ್ಥಿಗಳು ಮಾಡಿದ ಕಸರತ್ತು ನೆರದಿದ್ದವರನ್ನು ವಿಸ್ಮಯಗೊಳಿಸಿದರೆ, ಸತ್ಯಸಾಯಿ ಮಾನವ ಅಭ್ಯುದಯ ಕೇಂದ್ರದ ವಿದ್ಯಾರ್ಥಿಗಳು ಕ್ರೀಡಾಂಗಣದ ಸುತ್ತಲೂ ಬಗೆಬಗೆಯ ಭಂಗಿಗಳಲ್ಲಿ ಕುದುರೆ ಸವಾರಿಗೈದರು. ಕುದುರೆಗಳನ್ನು ಅದ್ಭುತವಾಗಿ ನಿಯಂತ್ರಿಸುತ್ತಾ ನಾಗಾಲೋಟ, ಅಡೆತಡೆ ಓಟ, ನೆಗೆತಗಳನ್ನು ರೋಮಾಂಚನಕಾರಿಯಾಗಿ ಪ್ರದರ್ಶಿಸಿ ಸಾಹಸ ಮೆರೆದರು.
ಸುಮಾರು 25 ಅಡಿ ಎತ್ತರದ ಕ್ರೇನ್‌ನಲ್ಲಿ ತೂಗು ಹಾಕಲಾದ ಕಬ್ಬಿಣದ ಚೌಕಟ್ಟಿನಲ್ಲಿ ಅಳವಡಿಸಿದ ಹಗ್ಗ ಮತ್ತು ಚಕ್ರಗಳಲ್ಲಿ ವಿದ್ಯಾರ್ಥಿಗಳು ದೇಶೀ ಕಲೆಯಾದ ಯೋಗಾಸನವನ್ನು ವಿವಿಧ ಭಂಗಿಗಳಲ್ಲಿ ಪ್ರದರ್ಶಿಸಿದರು. ಅಗ್ನಿಚಕ್ರದ ಮಧ್ಯೆ ಬೈಕ್‌ನಲ್ಲಿ ನೆಗೆದು ಮುಂದಕ್ಕೆ ಸಾಗುವ ದೃಶ್ಯ ಬೆರಗುಗೊಳಿಸಿತು. ಉಳಿದಂತೆ ಸಿಂಗಾಪುರದ ಸಿಂಹ ನೃತ್ಯ, ಮಾರ್ಷಲ್ ಆರ್ಟ್ಸ್ ಗಮನ ಸೆಳೆಯಿತು.
ಸುಮಾರು 4 ಸಾವಿರ ಮಕ್ಕಳು ಮೂರುವರೆ ಗಂಟೆಕಾಲ ಪಥ ಸಂಚಲನದಿಂದ ಕೊನೆ ಕ್ರೀಡೆಯವರೆಗೂ ನಡೆಸಿಕೊಟ್ಟ ವಿವಿಧ ಸಾಹಸ ಕ್ರೀಡೆಗಳು ಅವಿಸ್ಮರಣೀಯ. ಇಂತಹ ಕ್ರೀಡಾಕೂಟಗಳು ಮಕ್ಕಳಲ್ಲಿ ಸಾಹಸ ಪ್ರವೃತ್ತಿಗೆ ಪ್ರೇರಣೆ ಕೊಡುತ್ತವೆ. ಸರ್ಕಾರಿ ಶಾಲೆಗಳಲ್ಲಿ ಕೂಡ ಜಿಲ್ಲೆಗೆ ಒಂದು ಶಾಲೆಯಲ್ಲಿ ಈ ರೀತಿಯ ಸಾಹಸ ಕ್ರೀಡೆಗಳನ್ನು ಕಲಿಸಬೇಕಿದೆ. -ಸುರೇಶ್ ಕುಮಾರ್, ಶಿಕ್ಷಣ ಸಚಿವ * ಕಾಗತಿ ನಾಗರಾಜಪ್ಪ