Advertisement

ಮುಂದುವರಿದ ಸಮೀಕ್ಷೆ, ಫಾಗಿಂಗ್‌, ನಿಯಂತ್ರಣ ಕಾರ್ಯಾಚರಣೆ

12:31 AM Jul 22, 2019 | Team Udayavani |

ಮಂಗಳೂರು: ನಗರ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆಯಿಂದ ವಿವಿಧಡೆ ಸಮೀಕ್ಷೆ, ಪರಿಸರ ಸ್ವಚ್ಛತೆ ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಕಾರ್ಯ ರವಿವಾರ ವ್ಯಾಪಕವಾಗಿ ನಡೆಯಿತು.

Advertisement

ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಗುಜ್ಜರಕೆರೆ ವ್ಯಾಪ್ತಿಯಲ್ಲಿ ಸುಮಾರು 300ಕ್ಕೂ ಅಧಿಕ ಮಂದಿಯಿಂದ ಸ್ವಚ್ಛತೆ ಕಾರ್ಯ ನಡೆಯಿತು.

ತಹಶೀಲ್ದಾರ ಗುರುಪ್ರಸಾದ್‌, ಪಾಲಿಕೆ ಆಯುಕ್ತ ಮಹಮ್ಮದ್‌ ನಝೀರ್‌ ಉಪಸ್ಥಿತರಿದ್ದು, ಸ್ವಚ್ಛತಾ ಕಾರ್ಯದ ಉಸ್ತುವಾರಿಯನ್ನು ನೋಡಿಕೊಂಡರು. ನಗರದ ಭಗಿನಿ ಸಮಾಜ, ಎಂಫಸಿಸ್‌ ಆವರಣ, ಮಂಗಳೂರು ಕ್ಲಬ್‌ ಆವರಣ, ಮುಳಿಹಿತ್ಲು ಜಂಕ್ಷನ್‌, ಕುಲಾಲ್ ಭವನ ಸಮೀಪ ಸಹಿತ ನಗರದ 71 ಕಡೆಗಳಲ್ಲಿ ಸೊಳ್ಳೆ ಉತ್ಪಾದನ ತಾಣಗಳನ್ನು ನಾಶಪಡಿಸಲಾಗಿದೆ. ಪಾಲಿಕೆಯ ಎಂಪಿಡಬ್ಲ್ಯು ಸಿಬಂದಿ, ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿವಿಧ ನರ್ಸಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳು ಸೇರಿ ಒಟ್ಟು 70 ಜನರನ್ನು ಆರು ವಿಭಾಗಗಳಾಗಿ ವಿಂಗಡಿಸಿ ನಗರದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಡೆಂಗ್ಯೂ ಮತ್ತು ಜ್ವರ ಹೆಚ್ಚು ಕಾಣಿಸಿಕೊಂಡಿರುವ ಹಾಗೂ ಸಂಭಾವ್ಯ ಪ್ರದೇಶಗಳನ್ನು ಆದ್ಯತೆಯಾಗಿಟ್ಟುಕೊಂಡು ರಾಸಾಯನಿಕ ಸಿಂಪಡಣೆ ಕಾರ್ಯ ನಡೆಸಲಾಗುತ್ತಿದೆ.

ಹೊಸದಾಗಿ ಇನ್ನೂ ನಾಲ್ಕು ಫಾಗಿಂಗ್‌ ಯಂತ್ರಗಳು

ಮನಪಾ ವ್ಯಾಪ್ತಿಯಲ್ಲಿ ಡೆಂಗ್ಯೂ, ಮಲೇರಿಯಾ ಪ್ರಕರಣಗಳು ಹೆಚ್ಚಾ ಗುತ್ತಿದ್ದು, ಸೊಳ್ಳೆಗಳ ನಾಶಕ್ಕಾಗಿ ಫಾಗಿಂಗ್‌ ಕಾರ್ಯಾಚರಣೆಯನ್ನು ಚುರುಕು ಗೊಳಿಸಲಾಗುತ್ತಿದೆ. ಪಾಲಿಕೆ ಅಧೀನದಲ್ಲಿ ನಾಲ್ಕು ಫಾಗಿಂಗ್‌ ಯಂತ್ರಗಳಿದ್ದವು. ಕೆಲವು ದಿನಗಳ ಹಿಂದೆ ಮತ್ತೆ ನಾಲ್ಕು ಫಾಗಿಂಗ್‌ ಯಂತ್ರಗಳನ್ನು ಖರೀದಿಸಲಾಗಿತ್ತು. ಫಾಗಿಂಗ್‌ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಇನ್ನೆರಡು ದಿನಗಳ ಒಳಗಾಗಿ ಮತ್ತೆ ನಾಲ್ಕು ಫಾಗಿಂಗ್‌ ಯಂತ್ರಗಳನ್ನು ತರಿಸಿಕೊಳ್ಳಲಾಗುತ್ತಿದ್ದು, ಒಟ್ಟು 12 ಫಾಗಿಂಗ್‌ ಯಂತ್ರಗಳ ಮೂಲಕ ರೋಗ ಹರಡುವ ಸೊಳ್ಳೆಗಳ ನಾಶಕ್ಕಾಗಿ ಬಳಸಲಾಗುತ್ತದೆ.

Advertisement

ಸಾಂಕ್ರಾಮಿಕ ರೋಗ ಹರಡುವ ಜೀವಿಗಳಿಗೆ ಆಸ್ಪದ ನೀಡುವ ಅಂಗಡಿ – ಮನೆ, ನಿರ್ಮಾಣ ಹಂತದ ಕಟ್ಟಡಗಳ ವಿರುದ್ಧ ಕಾರ್ಯಾಚರಣೆ ನಡೆಸಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ರವಿವಾರ ಸ್ವಚ್ಛತೆ ಕಾಪಾಡದ ಹಿನ್ನೆಲೆಯಲ್ಲಿ ವಿವಿಧ ಖಾಸಗಿ ಕಟ್ಟಡ ಸಹಿತ ಇತರೆ ಕಟ್ಟಡಗಳ ಮಾಲಕರಿಗೆ 85,000 ರೂ. ದಂಡ ವಿಧಿಸಿದ್ದಾರೆ.

ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದನ್ನು ನಿಯಂತ್ರಿಸಲು ಜಿಲ್ಲಾಡಳಿತ, ಪಾಲಿಕೆ, ಆರೋಗ್ಯ ಇಲಾಖೆ ಕಠಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದಕ್ಕಾಗಿ ಅಧಿಕಾರಿಗಳ ರಜಾದಿನವಾದ ರವಿವಾರವೂ ಕರ್ತವ್ಯ ನಿರ್ವ ಹಿಸಿದ್ದಾರೆ. ಸಮೀಕ್ಷೆ, ಸ್ವಚ್ಛತೆ, ದಂಡ ವಸೂಲಾತಿ ಸಹಿತ ಡೆಂಗ್ಯೂ ಕಾರ್ಯಾಚರಣೆಯಲ್ಲಿ ಅಧಿಕಾರಿ ಗಳು ಸಕ್ರೀಯರಾಗಿ ಕಾರ್ಯ ನಿರ್ವಹಿಸಿದರು.

ಡೆಂಗ್ಯೂ ಬಗ್ಗೆ ಎಚ್ಚರಿಕೆ ವಹಿಸಿ

ಹೆಚ್ಚುತ್ತಿರುವ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ತೀವ್ರ ಜ್ವರ, ಹಣೆಭಾಗ ಮತ್ತು ಕೀಲುಗಳಲ್ಲಿ ನೋವು, ವಾಕರಿಕೆ ಹಾಗೂ ವಾಂತಿ ಇದ್ದಲ್ಲಿ ತತ್‌ಕ್ಷಣ ಆಸ್ಪತ್ರೆಯನ್ನು ಸಂಪರ್ಕಿಸಬೇಕು. ಹಗಲು ಹೊತ್ತು ಸೊಳ್ಳೆ ಕಚ್ಚದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಆದಕ್ಕಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳು ಉತ್ಪತ್ತಿಯಾಗುವ ಸ್ಥಳಗಳನ್ನು ನಾಶಪಡಿಸಬೇಕು. ಡೆಂಗ್ಯೂ ಬಂದ ಬಳಿಕ ವೈದ್ಯರಿಂದ ಸೂಕ್ತ ಔಷಧಗಳನ್ನು ಪಡೆದುಕೊಳ್ಳುವುದರ ಜತೆಗೆ ಸರಿಯಾಗಿ ವಿಶ್ರಾಂತಿ ಅಗತ್ಯವಿದೆ. ಹೆಚ್ಚು ನೀರು ಕುಡಿಯಬೇಕು.
– ಡಾ| ನಿತೀಶ್‌ ಭಂಡಾರಿ, ವೈದ್ಯರು
Advertisement

Udayavani is now on Telegram. Click here to join our channel and stay updated with the latest news.

Next