ಬೆಂಗಳೂರು: ಶುಕ್ರವಾರ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ನಿಂಗಮ್ಮ ಅವರಿಗಾಗಿ ಶೋಧ ಕಾರ್ಯ ಸೋಮವಾರವೂ ಮುಂದುವರಿದಿದ್ದು, ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಬೆಳಗ್ಗೆ 8 ಗಂಟೆಗೆ ಕುಂಬಳಗೋಡು ಸೇತುವೆಯಿಂದ ಹುಡುಕಾಟ ಆರಂಭಿಸಿದ ಅಗ್ನಿಶಾಮಕ ಮತ್ತು ಬಿಬಿಎಂಪಿಯ 50ಕ್ಕೂ ಹೆಚ್ಚು ಸಿಬ್ಬಂದಿ, ಬೈರಮಂಗಲ ಕೆರೆಯವರೆಗೂ ಶೋಧ ನಡೆಸಿದರು. ಈ ವೇಳೆ ತಾಳಗುಪ್ಪ ಬಳಿ ಕಾಲುವೆ ಪಕ್ಕದ ತೆಂಗಿನ ತೋಟದ ಬಳಿ ಅಪರಿಚಿತ ಮೃತದೇಹ ಪತ್ತೆಯಾಗಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಎಲ್ಲರೂ ಅಲ್ಲಿಗೆ ದೌಡಾಯಿಸಿದರು.
ಆದರೆ, ಮೃತದೇಹವು ಪುರುಷನದ್ದಾಗಿದ್ದರಿಂದ ಬಿಡದಿ ಠಾಣೆಯ ಪೊಲೀಸರು ಮಹಜರು ನಡೆಸಿ ಶವ ಸಾಗಿಸಿದರು. ನಂತರ ಶೋಧ ಕಾರ್ಯ ಮುಂದುವರಿಸಿದ ಸಿಬ್ಬಂದಿ, ಸುಮಾರು 9 ಕಿ.ಮೀ. ದೂರ ಹುಡುಕಾಟ ನಡೆಸಿದರು. ಆದರೆ, ನಿಂಗಮ್ಮ ಅವರ ಸುಳಿವು ಸಿಗದ ಹಿನ್ನೆಲೆಯಲ್ಲಿ ಸೋಮವಾರ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.
ಈಜಿಪುರದಲ್ಲಿ ಕಟ್ಟಡ ಕುಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಈಜಿಪುರದಲ್ಲಿ ರಕ್ಷಣಾ ಕಾರ್ಯಕ್ಕೆ ತೆರಳಿದವು. ಪರಿಣಾಮ ಅಗ್ನಿಶಾಮಕ ಹಾಗೂ ಬಿಬಿಎಂಪಿ ಸಿಬ್ಬಂದಿ ಸೋಮವಾರ ಶೋಧ ಕಾರ್ಯ ನಡೆಸಿದರು.
ನಿಂಗಮ್ಮ ಅವರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದು, ಶೋಧ ಕಾರ್ಯಕ್ಕೆ ಕೈಜೋಡಿಸುವಂತೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿಗೆ ಮನವಿ ಮಾಡಿಕೊಳ್ಳಲಾಗಿದೆ. ಸುಮ್ಮನಹಳ್ಳಿ ಸೇತುವೆಯಿಂದ ಭೈರಮಂಗಲ ಕೆರೆಯವರೆಗೆ ಮತ್ತೂಮ್ಮೆ ಹುಡುಕಾಟ ನಡೆಸಲಾಗುವುದು ಎಂದು ಪಾಲಿಕೆಯ ಬೃಹತ್ ಮಳೆನೀರುಗಾಲುವೆಯ ಮುಖ್ಯ ಎಂಜಿನಿಯರ್ ಬೆಟ್ಟೇಗೌಡ ತಿಳಿಸಿದ್ದಾರೆ.