Advertisement

ಮುಂದುವರಿದ ಅಂಚೆ ನೌಕರರ ಮುಷ್ಕರ

02:14 PM Jun 01, 2018 | Team Udayavani |

ಪಾಂಡವಪುರ: ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಅಂಚೆ ನೌಕರರು ಪಟ್ಟಣದ ಕೇಂದ್ರ ಅಂಚೆ ಕಚೇರಿ ಮುಂದೆ ಗುರುವಾರ ಮುಷ್ಕರ ನಡೆಸಿದರು.

Advertisement

ಅಖೀಲ ಬಾರತ ಗ್ರಾಮೀಣ ಅಂಚೆ ನೌಕರರ ಸಂಘ ಪಾಂಡವಪುರ ಹಾಗೂ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದ ನೇತೃತ್ವದಲ್ಲಿ ಮುಷ್ಕರ ನಡೆಸುತ್ತಿರುವ ಅಂಚೆ ನೌಕರರು, ಕಮಲೇಶ ಚಂದ್ರ ನೇತೃತ್ವದ ಏಕ ಸದಸ್ಯ ಸಮಿತಿಯ ಧನಾತ್ಮಕ ಶಿಪಾರಸುಗಳ ಅನುಮೋದನೆಗೆ ಒತ್ತಾಯಿಸಿ ಶ್ರೀರಂಗಪಟ್ಟಣ ಉಪವಿಭಾಗಕ್ಕೆ ಸೇರಿದ ಎಲ್ಲಾ ಶಾಖಾ ಕಚೇರಿಯ ಅಂಚೆ ನೌಕರರು ಪಟ್ಟಣದ ಕೇಂದ್ರ ಅಂಚೆ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ಮುಷ್ಕರದ ವೇಳೆ ಅಂಚೆ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆಯೇ ಹಲವು ಬಾರಿ ಪ್ರತಿಭಟನೆ, ಧರಣಿ, ಸಾಂಕೇತಿಕ ಉಪವಾಸ ಸತ್ಯಾಗ್ರಹಗಳನ್ನು ನಡೆಸಲಾಗಿದೆ. ಆದರೆ ಕೇಂದ್ರ ಸರ್ಕಾರ ಯಾವುದೇ ಕ್ರಮ ವಹಿಸದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಅನುಷ್ಠಾನಗೊಂಡು ಎರಡೂವರೆ ವರ್ಷ ಕಳೆದಿದ್ದರೂ ಅಂಚೆ ಸೇವಕರಿಗೆ ಅದರ ಲಾಭ ದೊರೆತಿಲ್ಲ. ಕೇವಲ 7- 8ಸಾವಿರ ಸಂಬಳ ಜೀವನ ನಡೆಸಲು ಸಾಕಾಗುತ್ತಿಲ್ಲ. 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಅಷ್ಟೇ ಮೊತ್ತದ ಪಿಂಚಣಿದಾರರಿಗೆ 7ನೇ ವೇತನ ಆಯೋಗದ ಶಿಪಾರಸನ್ನು 8 ತಿಂಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಆದರೆ ಕೇವಲ 2.42 ಲಕ್ಷವಿರುವ ಗ್ರಾಮೀಣ ಡಾಕ್‌ ನೌಕರರ ವೇತನ ಮಾತ್ರ ಪರಿಷ್ಕರಣೆಗೊಂಡಿದೆ. ಇಷ್ಟಾದರೂ ಸಹ ಧನಾತ್ಮಕ ಶಿಪಾರಸುಗಳ ಅನುಮೋದನೆ ಈವರೆಗೆ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಗೌರವಾಧ್ಯಕ್ಷ ಈ.ಎನ್‌.ಸುರೇಶ್‌, ಅಧ್ಯಕ್ಷೆ ಹರಿಣಿ, ಉಪಾಧ್ಯಕ್ಷ ಆರ್‌.ಎನ್‌.ನಿಂಗೇಗೌಡ, ಕಾರ್ಯದರ್ಶಿ ಎ.ಆರ್‌.ಹರೀಶ್‌, ಖಜಾಂಚಿ ರೇಖಾ, ಸದಸ್ಯರಾದ ರಮೇಶ್‌, ಶ್ವೇತಾ, ಆಶಾ, ವನಿತಾ, ಚಂದ್ರಬಾಯಿ, ಬಿ.ವಿ.ವಿಜಯ, ಪುಟ್ಟರಾಜು, ಪ್ರಸನ್ನಕುಮಾರ್‌ಎಸ್‌.ರವಿಕುಮಾರ್‌ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ಅಂಚೆ ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಿ ತಾಲೂಕು ರೈತಸಂಘದ ಅಧ್ಯಕ್ಷ ಎ.ಎಲ್‌.ಕೆಂಪೂಗೌಡ ಮುಷ್ಕರದಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next