Advertisement

ಸುಧಾರಿತ ಪೊಲೀಸ್‌ ಗಸ್ತು ವ್ಯವಸ್ಥೆ: ಎಸ್‌ಪಿ ಮಾಹಿತಿ 

08:30 AM Jul 28, 2017 | |

ಶನಿವಾರಸಂತೆ: ಪೊಲೀಸ್‌ ಸುಧಾರಿತ ಗಸ್ತು ಯೋಜನೆಯಿಂದ ಸಾರ್ವಜನಿಕರು ಮತ್ತು ಪೊಲೀಸ್‌ರ ನಡುವೆ ಬಾಂಧವ್ಯ ವೃದ್ಧಿಯಾಗುವುದರ ಜೊತೆಯಲ್ಲಿ ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ಕಾಪಾಡಬಹುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಧಿಕಾರಿ ಪಿ. ರಾಜೇಂದ್ರಪ್ರಸಾದ್‌ ಅಭಿಪ್ರಾಯ ಪಟ್ಟರು.
 
ಅವರು ಸ್ಥಳೀಯ ಆರ್‌ವಿ ಕಲ್ಯಾಣ ಮಂಟಪದಲ್ಲಿ ಶನಿವಾರಸಂತೆ ಪೊಲೀಸ್‌ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಸುಧಾರಿತ ಗಸ್ತು ವ್ಯವಸ್ಥೆ ಕುರಿತು ಗಸ್ತು ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 
ಪೊಲೀಸ್‌ ಇಲಾಖೆ ಪೊಲೀಸ್‌ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಹತ್ತಿರ ತರುವ ಉದ್ದೇಶದಿಂದ ಸುಧಾರಿತ ಗಸ್ತು ಯೋಜನೆಯನ್ನು ಜಾರಿಗೊಳಿಸಿದೆ, ಇದರಿಂದ ಪೊಲೀಸ್‌ ಇಲಾಖೆ ಬಲಗೊಳ್ಳುತ್ತದೆ ಹಾಗೂ ಪೊಲೀಸ್‌ ಇಲಾಖೆಯ ಬಲವರ್ದನೆಗೆ ಗಸ್ತು ಸದಸ್ಯರ ಸಹಕಾರ ಪೂರಕವಾಗುತ್ತದೆ ಎಂದರು. 
ಗಸ್ತು ಸದಸ್ಯರು ಗ್ರಾಮದಲ್ಲಿ ನಡೆಯುವ ಅನೈತಿಕ ಚಟುವಟಿಕೆ, ಚಿಕ್ಕಪುಟ್ಟ ವ್ಯಾಜ್ಯ ಇನ್ನು ಮುಂತಾದ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ, ಪ್ರತಿಯೊಂದು ಬೀಟ್‌ನಲ್ಲಿ ಒಬ್ಬ ಎಎಸ್‌ಐ ಅಧಿಕಾರಿಯಾಗಿ, ಒಬ್ಬ ಪೊಲೀಸ್‌ ಪೇದೆ ಕರ್ತವ್ಯ ನಿರ್ವಹಿಸುತ್ತಾರೆ, ಈ ಪೊಲೀಸ್‌ ಸಿಬಂದಿಗಳಿಗೆ ಗಸ್ತು ಸದಸ್ಯರು ಸಹಕಾರ ನೀಡುತ್ತಾರೆ ಎಂದರು. 

Advertisement

ಸುಧಾರಿತ ಗಸ್ತಿನಲ್ಲಿ 150 ಬೀಟ್‌ 
ಕೊಡಗು ಜಿಲ್ಲೆಯಲ್ಲಿ ಒಟ್ಟು 20 ಪೊಲೀಸ್‌ ಠಾಣೆಗಳಿದ್ದು ಸುಧಾರಿತ ಗಸ್ತು ವ್ಯವಸ್ಥೆಯಡಿಯಲ್ಲಿ ಇದೀಗ 150 ಬೀಟ್‌ಗಳಿದ್ದು ಇಲ್ಲಿ ಪ್ರತಿಯೊಂದು ಬೀಟ್‌ಗಳಲ್ಲಿ ಪೊಲೀಸ್‌ ಸಿಬಂದಿಗಳಿಗೆ ಗಸ್ತು ಸದಸ್ಯರು ಸಹಕಾರ ನೀಡುತ್ತಿದ್ದಾರೆ ಈ ನಿಟ್ಟಿನಲ್ಲಿ ಸುಧಾರಿತ ಗಸ್ತು ವ್ಯವಸ್ಥೆಗೆ ಸಾರ್ವಜನಿಕರು ಕೈಜೋಡಿಸಬೇಕು, ಸಮಾಜದಲ್ಲಿ, ಅನೈತಿಕ ಚಟುವಟಿಕೆ ಮತ್ತು ಅಹಿತಕರ ಘಟನೆಗಳು ನಡೆಯದಂತೆ, ಸಂಚಾರ ವ್ಯವಸ್ಥೆ ಸುಗುಮವಾಗಲು ಹಾಗೂ ಚಿಕ್ಕಪುಟ್ಟ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಪೊಲೀಸ್‌ ಇಲಾಖೆಗೆ ಸಹಕಾರ ನೀಡಬೇಕೆಂದರು.

ಅನಂತರ ನಡೆದ ಚರ್ಚೆಯಲ್ಲಿ ಪೊಲೀಸ್‌ ಇಲಾಖೆಯ ನ್ಯೂನತೆಗಳು, ಪಟ್ಟಣದ ಟ್ರಾಫಿಕ್‌ ಸಮಸ್ಯೆ, ಪಾರ್ಕಿಂಗ್‌ ಸಮಸ್ಯೆ, ಮರಳಿನ ಸಮಸ್ಯೆ, ಮಧ್ಯಪಾನ ವ್ಯಸನಿಗಳಿಂದ ಪಟ್ಟಣದಲ್ಲಿ ಆಗುತ್ತಿರುವ ಸಮಸ್ಯೆ ಇನ್ನುಮುಂತಾದ ಸಮಸ್ಯೆಗಳ ಬಗ್ಗೆ ಎಸ್‌ಪಿ ಯೊಂದಿಗೆ ಸಾರ್ವಜನಿಕರು ಚರ್ಚಿಸಿದರು. 

ಪಟ್ಟಣದಲ್ಲಿ 5 ಕಾಲೇಜುಗಳಿದ್ದು ಕೆಲವು ಸಾರ್ವಜ ನಿಕ ಯುವಕರು ಕಾಲೇಜಿನ ಹುಡುಗಿಯಿರಿಗೆ ಚುಡಾಯಿಸಿ ತೊಂದರೆ ಕೊಡುವುದು, ಕೆಲವು ಕಾಲೇಜು ಹುಡುಗರು ಸೇರಿದಂತೆ ಸಾರ್ವಜನಿಕ ಯುವಕರು ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸುವುದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರ ಕುರಿತು ಸಾರ್ವಜನಿಕರು ಎಸ್‌ಪಿ ಮುಂದೆ ದೂರಿದರು.
 
ಬಡವರ್ಗದ ಜನರು ಮನೆಕಟ್ಟಲು ಮರಳಿನ ಅಗತ್ಯ ಇರುತ್ತದೆ. ಇಂತಹ ಸಂದರ್ಭದಲ್ಲಿ ಚಿಕ್ಕಪುಟ್ಟ ವಾಹನದಲ್ಲಿ ಮರಳನ್ನು ಮನೆಗೆ ತರಲು ಸಾಗಾಟ ಮಾಡುವ ಸಂದರ್ಭದಲ್ಲಿ ಪೊಲೀಸರು ತೊಂದರೆ ಕೊಡುತ್ತಾರೆ. ನಾವು ಹೇಗೆ ಮರಳು ಇಲ್ಲದೆ ಮನೆ ಕಟ್ಟುವುದು ಎಂದು ಎಂದು ರೈತ ಸಂಘದ ಮುಖಂಡ ಸೋಮಣ್ಣ ಪ್ರಸ್ತಾಪಿಸಿದಾಗ ಇದಕ್ಕೆ ಉತ್ತರಿಸಿದ ಎಸ್‌ಪಿ ಪೊಲೀಸ್‌ ಇಲಾಖೆ ಜಿಲ್ಲಾಧಿಕಾರಿಗಳ ಆದೇಶವನ್ನಷ್ಟೆ ಪಾಲಿಸುತ್ತಿದೆ. ಆದರೆ ಪೊಲೀಸರು ಮರಳು ದಂಧೆ ಕೋರರ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next