Advertisement

ಬಳ್ಪ: ಮುಂದುವರಿದ ಆಪರೇಶನ್‌ ಚಿರತೆ

11:27 PM Jan 03, 2020 | Team Udayavani |

ಸುಬ್ರಹ್ಮಣ್ಯ: ಇಲ್ಲಿಗೆ ಸಮೀಪದ ಬಳ್ಪದಲ್ಲಿ ಕೃಷಿಕ ಮತ್ತು ಇಬ್ಬರು ಅರಣ್ಯಾಧಿಕಾರಿಗಳ ಮೇಲೆ ಗುರುವಾರ ದಾಳಿ ನಡೆಸಿದ್ದ ಚಿರತೆಗಾಗಿ ಶೋಧ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಯಿತು. ಚಿರತೆಗೆ ಅರಿವಳಿಕೆ ನೀಡಿ ಸೆರೆಹಿಡಿಯುವ ಪ್ರಯತ್ನಕ್ಕೆ ಸಿದ್ಧತೆ ಮಾಡಲಾಗಿತ್ತಾದರೂ ಸಂಜೆ ತನಕವೂ ಚಿರತೆಯ ಸುಳಿವು ದೊರಕಲಿಲ್ಲ.

Advertisement

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಪಶುವೈದ್ಯ ಡಾ| ಮುಜೀಬ್‌ ರೆಹಮಾನ್‌ ನೇತೃತ್ವದ ರಂಜನ್‌, ಅಕ್ರಂ, ನಂಜುಂಡ, ವೆಂಕಟೇಶ ಮತ್ತು ಇತರ ಸಿಬಂದಿ ಸಹಿತ 10 ಮಂದಿಯ ತಂಡ ಬಳ್ಪ ಗ್ರಾಮಕ್ಕೆ ಶುಕ್ರವಾರ ಬೆಳಗ್ಗೆ ಆಗಮಿಸಿತ್ತು.

ನಾಗರಹೊಳೆ ಪಶು ವೈದ್ಯಾಧಿಕಾರಿ ಮತ್ತು ಸುಬ್ರಹ್ಮಣ್ಯ, ಪಂಜ ವಲಯಗಳ ಅರಣ್ಯಾಧಿಕಾರಿಗಳ ಜಂಟಿ ತಂಡಗಳು ಘಟನೆ ನಡೆದ ಕುಳ, ಆಲ್ಕಬೆ, ಕಲ್ಲೇರಿ, ಎಣ್ಣೆಮಜಲು ಮುಂತಾದ ಕಡೆಗಳ ಮೀಸಲು ಅರಣ್ಯಕ್ಕೆ ತೆರಳಿ ಚಿರತೆ ಶೋಧ ಕಾರ್ಯ ನಡೆಸಿದರು. ಅರಿವಳಿಕೆ ಮದ್ದು ಸಹಿತ ಬಂದೂಕು, ಬೋನು, ಬಲೆ ಮತ್ತು ಶಸ್ತ್ರಾಸ್ತ್ರಗಳ ಜತೆ ತಂಡವು ಕಾಡಿನಲ್ಲಿ ಸಾಕಷ್ಟು ದೂರ ಹುಡುಕಾಟ ನಡೆಸಿದರೂ ಚಿರತೆಯ ಸುಳಿವು ಲಭ್ಯವಾಗಿಲ್ಲ.

ಶೋಧ ಕಾರ್ಯವನ್ನು ಸ್ಥಳೀಯರ ಸಹಕಾರ ಪಡೆದು ಶನಿವಾರವೂ ಮುಂದುವರಿಸುವುದಾಗಿ ಡಾ| ಮುಜೀಬ್‌ ರೆಹಮಾನ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ದಾಳಿ ನಡೆಸಿದ ಬಳಿಕ ಗುರುವಾರ ನಡುರಾತ್ರಿ ತನಕವೂ ಚಿರತೆ ಸ್ಥಳೀಯವಾಗಿ ಓಡಾಟ ನಡೆಸಿರುವುದು ಅರಣ್ಯ ಇಲಾಖೆ ಸಿಬಂದಿಯ ಗಮನಕ್ಕೆ ಬಂದಿತ್ತು. ಚಿರತೆ ಕಾಲಿನಲ್ಲಿ ಉಳಿದಿದ್ದ ಉರುಳಿನ ತುಂಡು ಬೇರ್ಪಟ್ಟು ಕಳಚಿ ಬಿದ್ದಿರುವುದು ಶೋಧದ ವೇಳೆ ಪತ್ತೆಯಾಗಿದೆ. ಹೀಗಾಗಿ ಬಂಧನದಿಂದ ಮುಕ್ತಗೊಂಡ ಚಿರತೆ ದಟ್ಟ ಕಾಡಿನೊಳಗೆ ತೆರಳಿರುವ ಸಾಧ್ಯತೆಗಳಿವೆ ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಮುಂಜಾಗ್ರತೆಯ ಕ್ರಮವಾಗಿ ಅರಣ್ಯಾಧಿಕಾರಿಗಳು ಸ್ಥಳದಲ್ಲೇ ಪಾಳಿಯಲ್ಲಿ ಕಾವಲು ಕಾಯುತ್ತಿದ್ದಾರೆ.

Advertisement

ಗಾಯಾಳುಗಳು ಚೇತರಿಕೆ
ಚಿರತೆಯ ದಾಳಿಯಿಂದ ಗಾಯಗೊಂಡವರು ಚೇತರಿಸಿಕೊಳ್ಳುತ್ತಿದ್ದು, ಗಂಭೀರ ಗಾಯಗೊಂಡ ಬಾಲಕೃಷ್ಣ ಗೌಡ ಕಾಯರ ಅವರಿಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಶುಕ್ರವಾರದ ಕಾರ್ಯಾಚರಣೆ ವೇಳೆ ಆರ್‌ಎಫ್ಒಗಳಾದ ಗಿರೀಶ್‌, ಮಂಜುನಾಥ್‌, ತ್ಯಾಗರಾಜ್‌, ಮಂಗಳೂರು ಅರಣ್ಯ ಸಂಚಾರಿ ದಳದ ಪ್ರವೀಣ್‌ ಶೆಟ್ಟಿ, ಪುತ್ತೂರು ವಲಯ ಅರಣ್ಯಾಧಿಕಾರಿ ಮೋಹನ್‌ ಕುಮಾರ್‌ ಸೇರಿದಂತೆ ಮೂರು ವಲಯಗಳ ಸುಮಾರು 50 ಸಿಬಂದಿ ಭಾಗವಹಿಸಿದ್ದರು.

ಮಾಸಿಲ್ಲ ದಾಳಿ ಭೀತಿ
ಬಳ್ಪ ಗ್ರಾಮದಲ್ಲಿ ಗುರುವಾರ ಮೂವರ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಚಿರತೆ ಇನ್ನೂ ಪತ್ತೆಯಾಗದೆ ಇರುವುದು ಸ್ಥಳಿಯರಲ್ಲಿ ಆತಂಕ ಮೂಡಿಸಿದೆ. ಮತ್ತೆ ಚಿರತೆ ದಾಳಿಯ ಭೀತಿ ಸ್ಥಳೀಯ ನಿವಾಸಿಗಳನ್ನು ಕಾಡುತ್ತಿದೆ. ಅರಣ್ಯದಂಚಿನ ಕಾಲು ದಾರಿಗಳಲ್ಲಿ ತೆರಳಲು ಗ್ರಾಮಸ್ಥರು ಹಿಂದೇಟು ಹಾಕುತಿದ್ದಾರೆ. ಮಕ್ಕಳು, ಮಹಿಳೆಯರು ಭಯಭೀತರಾಗಿದ್ದಾರೆ. ಹೆತ್ತವರು ಮಕ್ಕಳನ್ನು ಶಾಲೆಗೆ ಬಿಟ್ಟು ಸಂಜೆ ವಾಪಸ್‌ ಕರೆತರುತಿದ್ದಾರೆ. ತೋಟಕ್ಕೆ ತೆರಳಲು ಕೂಡ ಕೃಷಿಕರು ಹಿಂಜರಿಯುತ್ತಿದ್ದಾರೆ. ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ನಡುಗಲ್ಲು: ಚಿರತೆ ಹಾವಳಿ!
ಇದೇವೇಳೆ ನಾಲ್ಕೂರು ಗ್ರಾಮದಲ್ಲೂ ಚಿರತೆ ಹಾವಳಿ ಕಂಡು ಬಂದಿದೆ. ಸ್ವಲ್ಪ ಸಮಯಗಳಿಂದ ಚಿರತೆ ಮರಕತ, ಉಜಿರಡ್ಕ ಚಾರ್ಮಾತ ಮುಂತಾದ ಕಡೆಗಳಲ್ಲಿ ಸ್ಥಳಿಯರಿಗೆ ಕಾಣಸಿಕ್ಕಿದೆ. ಹಗಲು ಹೊತ್ತಲ್ಲೇ ಕಂಡುಬಂದಿದ್ದು, ಶಾಲಾ ಮಕ್ಕಳು ಮತ್ತು ಊರಿನವರು ಭಯದಲ್ಲೇ ಓಡಾಡುವ ಸನ್ನಿವೇಶ ಇದೆ ಎಂದು ಸ್ಥಳಿಯ ನಿವಾಸಿ ವಿಜಯ್‌ ಕುಮಾರ್‌ ಚಾರ್ಮಾತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next