ಬೆಂಗಳೂರು: ಹೆಣ್ಣು ಮಕ್ಕಳು ಸ್ವಯಂಪ್ರೇರಿತರಾಗಿ, ಸ್ವಇಚ್ಛೆಯಿಂದ ಸಮಾಜದಲ್ಲಿ ತಲೆ ಎತ್ತಿ ನಿಲ್ಲಬೇಕಾದರೆ ಶಿಕ್ಷಣ ಅತಿ ಅಗತ್ಯ ಎಂದು ಬಂಜೆತನ ತಜ್ಞೆ ಡಾ.ಕಾಮಿನಿರಾವ್ ಅಭಿಪ್ರಾಯಪಟ್ಟರು. ಅವರು ಕಾಮಿನಿ ಕೇರ್ ಫೌಂಡೇಷನ್ ವತಿಯಿಂದ ನಗರದ ಸುಮಂಗಲಿ ಸೇವಾಶ್ರಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಶ್ರಮದ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳ ಪ್ರಗತಿಗೆ ಶಿಕ್ಷಣ ಅತಿ ಮುಖ್ಯ. ಇಂದು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಿವೆ. ಇಂಥ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವಲ್ಲಿ ಸರ್ಕಾರಗಳು,
ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಮುಂದಾಗಬೇಕಾಗಿದೆ. ಹೆಣ್ಣು ಮಕ್ಕಳು ಸ್ವಯಂಪ್ರೇರಿತರಾಗಿ, ಸ್ವಇಚ್ಛೆಯಿಂದ ಸಮಾಜದಲ್ಲಿ ತಲೆ ಎತ್ತಿ ನಿಲ್ಲಬೇಕು. ಹೆಣ್ಣು ಮಕ್ಕಳು ತಮ್ಮ ರಕ್ಷಣೆಗಾಗಿ ಹೋರಾಡುವ ಬದ್ಧತೆಯನ್ನು ಕಂಡುಕೊಳ್ಳಬೇಕಾದ ದುಃಸ್ಥಿತಿ ಎದುರಾಗಿರುವುದು ದುಃಖಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ, ಪೌಷ್ಟಿಕ ಆಹಾರ ಹಾಗೂ ಉತ್ತಮ ಪರಿಸರ ಅಗತ್ಯವಾಗಿದೆ. ಅದನ್ನು ಕಾಮಿನಿ ಕೇರ್ ಫೌಂಡೇಷನ್ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳ ಆಸಕ್ತಿಗನುಸಾರವಾಗಿ ಫೌಂಡೇಷನ್ ಎಲ್ಲ ರೀತಿಯ ಸಹಕಾರ ನೀಡಲು ಬದ್ಧವಾಗಿದೆ ಎಂದು ಹೇಳಿದರು.
ಸಂಸ್ಥೆಯ ಪೂಜಾ ಸಿದ್ಧಾರ್ಥರಾವ್ ಮಾತನಾಡಿ, ನಮ್ಮ ಸೇವೆ ಅನಾಥ ಮಕ್ಕಳಿಗಷ್ಟೇ ಸೀಮಿತವಾಗಿಲ್ಲ. ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳ ಶಿಕ್ಷಣ ಪ್ರಗತಿಗೂ ಸಹಕಾರ ನೀಡಲಾಗುತ್ತದೆ. ಮುಂದೆಯೂ ಆಸಕ್ತ ಕ್ಷೇತ್ರಗಳಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸುವ ಮಕ್ಕಳಿಗೆ ನೆರವಾಗಲಿದೆ ಎಂದರು.