ಜೈಪುರ: ತಿಂಗಳು ಪೂರ್ತಿ ಕೆಲಸ ಮಾಡಿಯೂ ವೇತನ ಮಾತ್ರ ಸಮಯಕ್ಕಿಂತ ಹಿಂದುಮುಂದಾಗುವ ಈ ಕಾಲದಲ್ಲಿ ರಾಜಸ್ಥಾನ ಸರ್ಕಾರ ತನ್ನ ಉದ್ಯೋಗಿಗಳಿಗೆ ಬಂಪರ್ ಆಫರ್ ನೀಡಿದೆ. ಇನ್ನು ಮುಂದೆ ರಾಜಸ್ಥಾನದ ಸರ್ಕಾರಿ ಉದ್ಯೋಗಿಗಳು ತಮ್ಮ ವೇತನವನ್ನು ಮುಂಗಡವಾಗಿಯೇ ಪಡೆದುಕೊಳ್ಳಲಿದ್ದಾರೆ.
ಹೌದು, ರಾಜ್ಯ ಸರ್ಕಾರದ ಗಳಿಕೆ ಸಂಬಳ ಮುಂಗಡ ಪಡೆ ಯೋಜನೆಯ ಅನ್ವಯ ಇನ್ನು ಮುಂದೆ ಸರ್ಕಾರಿ ಉದ್ಯೋಗಿಗಳು ಈ ಸೌಲಭ್ಯವನ್ನು ಹೊಂದಲಿದ್ದಾರೆ. ಮೇ .31ರಂದು ಸರ್ಕಾರ ಘೋಷಿಸಿದ್ದ ಈ ಯೋಜನೆ ಜೂನ್‌ನಿಂದ ಆರಂಭಗೊಂಡಿದ್ದು, ಈ ಮೂಲಕ ದೇಶದಲ್ಲಿ ಸರ್ಕಾರಿ ಉದ್ಯೋಗಿಗಳ ವೇತನ ಮುಂಗಡ ಪಡೆಯುವ ನೀತಿ ಜಾರಿಗೊಳಿಸಿರುವ ಮೊದಲ ರಾಷ್ಟ್ರವೆಂಬ ಖ್ಯಾತಿಗೆ ರಾಜಸ್ಥಾನ ಪಾತ್ರವಾಗಿದೆ.
ಇನ್ನು ವೇತನ ಮುಂಗಡ ಪಡೆಯಲು ಕೆಲವು ಷರತ್ತುಗಳು ಕೂಡ ಇವೆ. ಅದೇನಂದರೆ ಸರ್ಕಾರಿ ಉದ್ಯೋಗಿಯು ತಿಂಗಳಲ್ಲಿ ತನಗೆ ಅಗತ್ಯ ಬಿದ್ದಾಗ ಮುಂಗಡ ಪಡೆಯಬಹುದು. ಆದರೆ, ಮಂಗಡ ಮೊತ್ತವು ಉದ್ಯೋಗಿಯ ಮಾಸಿಕ ವೇತನದ ಶೇ.50ರ ಮಿತಿಯನ್ನು ಮೀರುವಂತಿಲ್ಲ. ಉದ್ಯೋಗಿಯು ತಿಂಗಳ 21 ದಿನಕ್ಕೂ ಮುಂಚೆಯೇ ಮುಂಗಡ ಪಡೆದಿದ್ದಲ್ಲಿ, ಅವರ ವೇತನದಲ್ಲಿನ ಅಷ್ಟೇ ಪ್ರಮಾಣವನ್ನು ಆ ಮಾಸಿಕ ವೇತನದಲ್ಲಿ ಕಡಿತಗೊಳಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.