Advertisement

ಸಾವಯವ ಗೊಬ್ಬರ ಬಳಕೆಗೆ ಮುಂದಾಗಿ: ಡಾ.ಕೆ.ಸಂಧ್ಯಾ

06:27 PM Dec 06, 2023 | Team Udayavani |

ಚಿಂತಾಮಣಿ: ರಾಸಾಯನಿಕ ಗೊಬ್ಬರದ ಅಸಮತೋಲನ ಬಳಕೆಯಿಂದ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳು ನಾಶವಾಗುತ್ತಿದ್ದು, ರೈತರು ಹೆಚ್ಚಾಗಿ ಸಾವಯವ ಹಾಗೂ ಹಸಿರೆಲೆ ಗೊಬ್ಬರಗಳ ಬಳಕೆಗೆ ಹೆಚ್ಚು ಒತ್ತು ನೀಡಿ ಮಣ್ಣು ಹಾಗೂ ನೀರನ್ನು ಸಂರಕ್ಷಿಸಬೇಕೆಂದು ಕುರುಬೂರು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಕೆ.ಸಂಧ್ಯಾ ತಿಳಿಸಿದರು.

Advertisement

ತಾಲೂಕಿನ ಕೂತರಾಜನಹಳ್ಳಿಯಲ್ಲಿ ವಿಶ್ವ ಮಣ್ಣು ದಿನಾಚರಣೆ ಪ್ರಯುಕ್ತ ಮರ ಆರೋಗ್ಯಕರ ಹಾಗೂ ಸತ್ವಯುತವಾದ ಮಣ್ಣಿನ ಪ್ರಾಮುಖ್ಯತೆ ಅರಿಯಲು ಹಾಗೂ ಮಣ್ಣಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಒತ್ತು ಕೊಡುವ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ಹಮ್ಮಿಕೊಂಡಿದ್ದ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಣ್ಣಿನ ಫ‌ಲವತ್ತತೆಗೆ ಆದ್ಯತೆ ನೀಡಿ: ಭೂಮಿ ಮೇಲೆ ಜೀವಿ ಸಂಕುಲಗಳು ಮಣ್ಣು ಮತ್ತು ನೀರಿನ ಜೊತೆ‌ಗೆ ಒಂದಕ್ಕೊಂದು ಸಂಕೋಲೆಯಂತಿದೆ. ಶೇ. 95% ರಷ್ಟು ಆಹಾರ ಉತ್ಪಾದನೆಯು ಈ ಎರಡು ಮೂಲಭೂತ ಸಂಪನ್ಮೂಲಗಳಿಂದ ಉಂಟಾಗಿದೆ
ಎಂದ ಅವರು, ರೈತರು ಮಣ್ಣಿನ ಫ‌ಲವತ್ತತೆಗೆ ಹೆಚ್ಚು ಆದ್ಯತೆ ಕೊಡಬೇಕು. ಪ್ರತಿ ವರ್ಷ ಘೋಷವಾಕ್ಯದೊಂದಿಗೆ ಡಿಸೆಂಬರ್‌ 5 ರಂದು ಪ್ರಪಂಚದಾದ್ಯಂತ ವಿಶ್ವ ಮಣ್ಣು ದಿನ ಆಚರಿಸಲಾಗುತ್ತದೆ. ಈ ವರ್ಷ “ಮಣ್ಣು ಮತ್ತು ನೀರು, ಜೀವನದ ಮೂಲ” ಎನ್ನುವ ಘೋಷ ವಾಕ್ಯದಿಂದ ಆಚರಿಸಲಾಗುತ್ತಿದೆ ಎಂದರು.

ಕೃಷಿ ವಿಸ್ತರಣೆ ವಿಜ್ಞಾನಿಗಳಾದ ಡಾ.ತನ್ವೀರ್‌ ಅಹ್ಮದ್‌ ಮಾತನಾಡಿ, ಮಣ್ಣಿನ ಆರೋಗ್ಯ ಮತ್ತು ನಮ್ಮ ಆರೋಗ್ಯ ನೇರ ಸಂಬಂಧ ಹೊಂದಿದೆ ಅನೇಕ ದೈಹಿಕ ಮತ್ತು ಮಾನಸಿಕ ಖಾಯಿಲೆಗಳು ಮಣ್ಣಿನಲ್ಲಿರುವ ಪೋಷಕಾಂಶಗಳ ಕೊರತೆಯ ಪರಿಣಾಮವಾಗಿದೆ. ಹಾಗಾಗಿ ಮಣ್ಣಿನ ಆರೋಗ್ಯ ನಿರ್ವಹಣೆ ತುಂಬಾ ಅಗತ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ರೈತರಿಗೆ ಕಸಿ ಕಟ್ಟಿದ ಸೀಬೆ
ಮತ್ತು ನಿಂಬೆಹಣ್ಣಿನ ಗಿಡಗಳನ್ನು ವಿತರಿಸಲಾಯಿತು ಹಾಗೂ 40 ರೈತರು ಭಾಗಿಯಾಗಿ ಈ ಕಾರ್ಯಕ್ರಮದ ಉಪಯೋಗ ಪಡೆದುಕೊಂಡರು.

ನೂತನ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಿ

Advertisement

ಸಸ್ಯ ಸಂರಕ್ಷಣೆ ವಿಜ್ಞಾನಿಯಾದ ಡಾ.ಸ್ವಾತಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರೈತರು ನೂತನ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹೆಚ್ಚು ಉತ್ಪಾದನೆ ಮಾಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ತಂತ್ರಜ್ಞಾನವನ್ನು ಅಳವಡಿಸಲು ಹಿಂದೇಟು ಹಾಕುತ್ತಿರುವುದು ಒಂದು ವಿಪರ್ಯಾಸ ಸಂಗತಿ. ನೂತನ ಕೃಷಿ ಪದ್ಧತಿಗಳು ಹಾಗೂ ತಂತ್ರಜ್ಞಾನಗಳನ್ನು ಅಳವಡಿಸಿ ಕೃಷಿಯಲ್ಲಿ ಹೊಸ ಕ್ರಾಂತಿ ಮಾಡಬೇಕಾಗಿರುವುದು ಅನಿವಾರ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next