Advertisement

ಭಗವಾನ್‌ ಬೊಂಬೆಯಾಟ ಶುರು

12:30 AM Jan 04, 2019 | |

ಹಿರಿಯ ನಿರ್ದೇಶಕ ಭಗವಾನ್‌ (ದೊರೆ-ಭಗವಾನ್‌) ಸುಮಾರು ಎರಡು ದಶಕಗಳ ಬಳಿಕ ಮತ್ತೂಂದು ಚಿತ್ರ ನಿರ್ದೇಶಿಸಿದ್ದಾರೆ. ಅದು “ಆಡುವ ಗೊಂಬೆ’. ಹೌದು, ಭಗವಾನ್‌ ಅವರ ಚಿತ್ರ ಬದುಕಿನಲ್ಲಿ ಅವರು ನಿರ್ದೇಶಿಸುತ್ತಿರುವ 50ನೇ ಚಿತ್ರವಿದು. ಈ ವಾರ ತೆರೆಗೆ ಬರುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನ ಮಾಧ್ಯಮ ಮುಂದೆ ಬಂದಿದ್ದ ಭಗವಾನ್‌ ಮತ್ತು ತಂಡ, “ಗೊಂಬೆ’ಯ ಆಟ-ಪಾಠ ಅನುಭವಗಳನ್ನು ತೆರೆದಿಟ್ಟರು.

Advertisement

“ನನ್ನ ಚಿತ್ರ ಬದುಕಿನಲ್ಲಿ ಇದೊಂದು ವಿನೂತನ, ವಿಭಿನ್ನ, ವಿಶೇಷ ಚಿತ್ರ’ ಎನ್ನುತ್ತಲೇ ಮಾತಿಗಿಳಿದ ನಿರ್ದೇಶಕ ಭಗವಾನ್‌, “ಸುಮಾರು 22 ವರ್ಷದ ನಂತರ ಈ ಚಿತ್ರವನ್ನು ನಿರ್ದೇಶಿಸುವ ಅವಕಾಶವನ್ನು ನನ್ನ ಶಿಷ್ಯಂದಿರು ಕಲ್ಪಿಸಿಕೊಟ್ಟರು. ಅವರಿಂದಾಗಿ ಮತ್ತೆ ಚಿತ್ರವನ್ನು ನಿರ್ದೇಶಿಸುವಂತಾಯಿತು. ಈ ಚಿತ್ರದಲ್ಲಿ ಹಿರಿಯರು ಮತ್ತು ಕಿರಿಯರು ಎಲ್ಲರೊಂದಿಗೂ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಈಗಿನ ತಲೆಮಾರಿಗೆ ಹೇಳಿ ಮಾಡಿಸಿದ ಕಥೆ ಚಿತ್ರದಲ್ಲಿದೆ. ಹಣೆಬರಹ ಅಥವಾ ವಿಧಿಯಾಟ ಎನ್ನುವುದು ನಮ್ಮ ಜೀವನದಲ್ಲಿ ಹೇಗೆಲ್ಲಾ ಆಟ ಆಡಿಸಬಹುದು ಎನ್ನುವುದೇ ಚಿತ್ರದ ಕಥಾಹಂದರ. ಈಗಿನ ಚಿತ್ರಗಳಲ್ಲಿ ಇರುವಂತೆ ಡ್ಯಾನ್ಸ್‌, ಫೈಟ್ಸ್‌, ಕುಡಿತ ಈ ಥರದ ಯಾವ ಅಂಶಗಳೂ ಈ ಚಿತ್ರದಲ್ಲಿಲ್ಲ. ಆದರೆ ಮನರಂಜನೆಗೆ ಏನೆಲ್ಲ ಬೇಕೋ, ಅದೆಲ್ಲವೂ ಚಿತ್ರದಲ್ಲಿದೆ. ಇಲ್ಲಿ ಸಾಕಷ್ಟು ತಿರುವುಗಳಿವೆ. ಪ್ರತಿ ದೃಶ್ಯ-ಸನ್ನಿವೇಶಗಳೂ ನೋಡುಗರಿಗೆ ಕುತೂಹಲ ಹುಟ್ಟಿಸುತ್ತದೆ. ಯಾವುದೇ ಗಿಮಿಕ್‌ ಇಲ್ಲದೆ ಚಿತ್ರ ಮಾಡಿದ್ದೇವೆ’ ಎಂದರು ಭಗವಾನ್‌. 

ನಟ ಸಂಚಾರಿ ವಿಜಯ್‌, “2018ರಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ನಾನು ಅಭಿನಯಿಸಿದ್ದ “ನಾತಿಚರಾಮಿ’ ಕೊನೆ ಚಿತ್ರವಾಗಿತ್ತು. 2019ರಲ್ಲಿ ಮೊದಲು ಬಿಡುಗಡೆಯಾಗುವ ಚಿತ್ರಗಳಲ್ಲಿ ಮತ್ತೆ ನಾನು ಅಭಿನಯಿಸಿರುವ “ಆಡುವ ಗೊಂಬೆ’ ಚಿತ್ರವಿದೆ. ಕಲಾವಿದನಿಗೆ ಸಹಜವಾಗಿಯೇ ಇದು ಖುಷಿ ನೀಡುವಂಥದ್ದು. ನನ್ನ ಪ್ರಕಾರ, “ಆಡುವ ಗೊಂಬೆ’ “ಕಸ್ತೂರಿ ನಿವಾಸ’ದ ಮುಂದುವರೆದ ಭಾಗ. ಚಿತ್ರದಲ್ಲಿ ಏನೆಲ್ಲಾ ಮನರಂಜನೆ, ಸಂದೇಶ, ಚಿಂತನೆಗಳಿದ್ದವೊ, ಅದೆಲ್ಲವೂ ಈ ಚಿತ್ರದಲ್ಲೂ ಇದೆ. ಈಗಿನ ಸಮಾಜಕ್ಕೆ ಒಪ್ಪುವ ಕಥೆಯನ್ನು ಅಷ್ಟೇ ಚೆನ್ನಾಗಿ ಚಿತ್ರ ರೂಪದಲ್ಲಿ ತೆರೆಗೆ ತಂದಿದ್ದಾರೆ ಹಿರಿಯ ನಿರ್ದೇಶಕ ಭಗವಾನ್‌’ ಎಂದು ಚಿತ್ರವನ್ನು ಬಣ್ಣಿಸಿದರು. 

ಚಿತ್ರದ ಬಗ್ಗೆ ಮಾತನಾಡಿದ ನಟಿ ಸುಧಾ ಬೆಳವಾಡಿ, “ನಿರ್ದೇಶಕರು ಆರಂಭದಲ್ಲಿ ಹೇಳಿದ 45 ನಿಮಿಷದ ಕಥೆ, ಅದನ್ನು ಹೇಳಿದ ರೀತಿ ಎರಡೂ ಸೊಗಸಾಗಿತ್ತು. ಕಥೆ ಕೇಳುತ್ತಿದ್ದಂತೆ ಚಿತ್ರಕ್ಕೆ ಸಿಕ್ಕ ಅವಕಾಶವನ್ನು ಒಪ್ಪಿಕೊಂಡೆ. ಈ  ವಯಸ್ಸಲ್ಲೂ ಅವರ ಶ್ರದ್ಧೆ, ಪ್ರಾಮಾಣಿಕತೆ ಈಗಿನವರಿಗೆ ಅನುಕರಣೀಯ. ಅವರನ್ನು ನೋಡಿ ಕಲಿಯುವುದು ಸಾಕಷ್ಟಿದೆ. ಹಣೆ ಬರಹವೇ ನಾಯಕ ಎನ್ನುವುದನ್ನು ಇಡೀ ಚಿತ್ರ ಒಂದೇ ಸಾಲಿನಲ್ಲಿ ಹೇಳುತ್ತದೆ. ಮ್ಯಾನ್‌ ಪ್ರಪೋಸಸ್‌, ಗಾಡ್‌ ಡಿನ್ಪೋಸಸ್‌ ಅನ್ನುವಂತೆ ಎಲ್ಲವು ಚಿತ್ರದಲ್ಲಿ ಅಡಗಿದೆ’ ಎಂದರು. 

“ಕಸ್ತೂರಿ ನಿವಾಸ ಕ್ರಿಯೇಷನ್ಸ್‌’ ಬ್ಯಾನರ್‌ನಲ್ಲಿ ಎ.ಶಿವಪ್ಪ ಹಾಗೂ ಕೆ. ವೇಣುಗೋಪಾಲ್‌ ಈ ಚಿತ್ರ ನಿರ್ಮಿಸಿದ್ದಾರೆ. ಅನಂತನಾಗ್‌, ಸುಧಾ ಬೆಳವಾಡಿ, ಸಂಚಾರಿ ಜಯ್‌, ರಿಶಿತಾ ಮಲಾ°ಡ್‌, ನಿರೋಷ ಶೆಟ್ಟಿ, ದಿಶಾ ಕೃಷ್ಣಯ್ಯ ಮುಂತಾದವರು ನಟಿಸಿದ್ದಾರೆ. ಹಾಡುಗಳಿಗೆ ಹೇಮಂತ್‌ ಕುಮಾರ್‌ ಸಂಗೀತ ಸಂಯೋಜನೆ, ತ್ರಿಭುವನ್‌ ನೃತ್ಯ ಸಂಯೋಜನೆಯಿದೆ. ಈ ಚಿತ್ರಕ್ಕೆ ಜಬೇಜ್‌ ಕೆ ಗಣೇಶ್‌ ಅವರ ಛಾಯಾಗ್ರಹಣ ಮತ್ತು ಶಿವಪ್ರಸಾದ್‌ ಯಾದವ್‌ ಸಂಕಲನವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next