Advertisement

ಅಡಲ್ಟ್ಸ್ಇನ್ ದಿ ರೂಂ: ಒಮ್ಮೆ ನೋಡಿ

08:58 AM Mar 01, 2020 | Mithun PG |

ಬೆಂಗಳೂರು: ಕಾಸ್ತಾ ಗವ್ರಾಸ್ ನಿರ್ದೇಶಿಸಿದ ‘ಅಡಲ್ಟ್ಸ್ ಇನ್ ದಿ ರೂಂ’. ಈ ಸಿನಿಮಾ ಈಗಾಗಲೇ ಈ ಚಿತ್ರೋತ್ಸವದಲ್ಲಿ  ಫೆ. 27 ರಂದು ಪ್ರದರ್ಶನಗೊಂಡಿತ್ತು. ಅದರ ಮರು ಪ್ರದರ್ಶನ ಮಾ. 3 ರಂದು ಇದೆ.(ಸ್ಕ್ರೀನ್-4, ಪ್ರದರ್ಶನ ಸಮಯ: ಸಂಜೆ 7:40ನಿಮಿಷಕ್ಕೆ. ಒರಿಯನ್ ಮಾಲ್)

Advertisement

ಕಾಸ್ತಾ ಗವ್ರಾಸ್ ಗ್ರೀಸ್‌ನ ಚಲನಚಿತ್ರ ನಿರ್ದೇಶಕ. ಅವನ ಝೆಡ್ ಸಿನಿಮಾ ರಾಜಕೀಯ ಹಿನ್ನೆಲೆಯ ಚಿತ್ರ ಬಹಳಷ್ಟು ಚರ್ಚೆಗೊಳಗಾಗಿತ್ತು. ಅದರ ನಿರೂಪಣೆಯ ಶೈಲಿ, ಕಥಾನಕವನ್ನು ಬಿಚ್ಚಿಡುವ ಕ್ರಮವೂ ಸೇರಿದಂತೆ ಎಲ್ಲ ತಾಂತ್ರಿಕ ಅಂಶಗಳಿಂದಲೂ ಬಹಳ ಗಮನ ಸೆಳೆದಿತ್ತು. ಇಂದಿಗೂ ಕಾಸ್ತಾ ಗವ್ರಾಸ್ ಅವರನ್ನು ಗುರುತಿಸುವುದು ಝೆಡ್ ಚಿತ್ರದಿಂದಲೇ.

ಅವರ ಹೊಸ ಚಿತ್ರ ‘ಅಡಲ್ಟ್ಸ್ ಇನ್ ದಿ ರೂಂ’ 2019 ರಲ್ಲಿ ರೂಪುಗೊಂಡ ಚಿತ್ರ. ಬ್ರೆಕ್ಸಿಟ್ ನ (ಬ್ರಿಟನ್ ಯುರೋ ಒಕ್ಕೂಟದಿಂದ ಹೊರಬರುವ ಪ್ರಕ್ರಿಯೆ) ನೆನಪಿನಲ್ಲಿರುವಾಗಲೇ, ಇದಕ್ಕೆ ಮೊದಲು ಆದದ್ದು ಗ್ರೆಕ್ಸಿಟ್. ಗ್ರೀಕ್ ರಾಷ್ಟ್ರ ಹೊರಬಂದು, ಆರ್ಥಿಕ ದಿವಾಳಿಯಾಗಿ ಹೊರಬರುವ ಸ್ಥಿತಿಯ ಹಿನ್ನೆಲೆಯಲ್ಲಿನ ಕಥೆ. ಇದನ್ನು ಬರೆದದ್ದು ಆಗ ಗ್ರೀಕ್‌ನ ಆರ್ಥಿಕ ಸಚಿವರಾಗಿದ್ದ ಯಾನಿಸ್ ವರೊಪಕೀಸ್. ಅವರ ಪುಸ್ತಕದ ಶೀರ್ಷಿಕೆಯು ಮತ್ತು ಸಿನಿಮಾದ ಶೀರ್ಷಿಕೆಯು ಒಂದೇ.

ಸಿನಿಮಾ 124 ನಿಮಿಷಗಳುಳ್ಳದ್ದು. ಇದು ಗ್ರೀಕ್ ಆರ್ಥಿಕ ದಿವಾಳಿಗೆ ಒಳಗಾಗುವ ಸ್ಥಿತಿಯಲ್ಲಿದ್ದಾಗ ಅಸ್ತಿತ್ವಕ್ಕೆ ಬಂದ ಹೊಸ ಸರಕಾರ ಇಡೀ ಯುರೋ ಒಕ್ಕೂಟವನ್ನು ಎದುರು ಹಾಕಿಕೊಳ್ಳುವ ಹೊತ್ತಿನದ್ದು. ಇಡೀ ಕಥೆ ಸಾಗುವುದು ಕೆಲವು ಸಭೆಗಳಲ್ಲಿ ಮಾತ್ರ. ಆದರೆ, ಈ ಚಿತ್ರದ ಮೂಲಕ ನಿರ್ದೇಶಕ ಕಟ್ಟಿಕೊಡಲು ಪ್ರಯತ್ನಿಸುವುದು ಒಂದು ಘಟನೆಯ ಹಿಂದಿರಬಹುದಾದ ರಾಜಕೀಯ, ಮೇಲುಗೈ ಸಾಧಿಸುವ ಹಪಾಹಪಿತನ, ದೇಶಗಳ ದೇಶಗಳ ನಡುವಿನ ದ್ವೇಷ, ಇಡೀ ಜಗತ್ತನ್ನು ತಮ್ಮ ಹಣದ ಸಂಪತ್ತಿನಿಂದ ಅಧೀನವಾಗಿಸಿಟ್ಟುಕೊಳ್ಳಬೇಕೆನ್ನುವ ಲಾಲಸೆ ಎಲ್ಲವೂ ಬಯಲುಗೊಳ್ಳುತ್ತದೆ.

ಸಿನಿಮಾದ ಗತಿ ಎಲ್ಲೂ ನಿಮಗೆ ಒಣ ರಾಜಕೀಯ ಸಂಭಾಷಣೆ ಎನಿಸುವುದೆ ಇಲ್ಲ. ಪ್ರತಿ ಸಂಭಾಷಣೆಯಲ್ಲೂ ಚುರುಕುತನ ಕಾಪಾಡಿಕೊಂಡ ಕಾರಣದಿಂದ ಅದನ್ನು ಅನುಸರಿಸಲೂ ಇಷ್ಟವಾಗುತ್ತದೆ. ಗ್ರೀಕ್ ಹೊರತುಪಡಿಸಿ ಉಳಿದೆಲ್ಲಾ ರಾಷ್ಟ್ರಗಳಿಗೆ ಅದೊಂದು (ಗ್ರೆಕ್ಸಿಟ್) ಬರೀ ಸುದ್ದಿಯಷ್ಟೇ. ಆದರೆ ಆ ದೇಶದ ಜನರಿಗೆ ಅದೊಂದು ಬೆಳವಣಿಗೆ. ಇಂಥದೊಂದು ಮಹತ್ವದ (ಒಂದು ರಾಷ್ಟ್ರದ ಆರ್ಥಿಕ ಅಸ್ತಿತ್ವ) ಪ್ರಶ್ನೆಯ ಹಿಂದಿನ ಎಲ್ಲ ಹಿನ್ನೆಲೆ ತಿಳಿಯುವುದು ಈ ಚಿತ್ರದಿಂದಲೇ.

Advertisement

ಇಡೀ ಚಿತ್ರದಲ್ಲಿ ಕೆಲವೆಡೆ ಕೊಂಚ ವೈಭವೀಕರಣ ಇದೆ ಎನಿಸಬಹುದಾದರೂ ನಂಬಲರ್ಹ ಸಾಧ್ಯತೆ ಇರುವುದು ಸ್ವತಃ ಫೈನಾನ್ಸ್ ಮಿನಿಸ್ಟರ್ ಬರೆದ ಪುಸ್ತಕದಿಂದಲೇ ಎನ್ನುವುದು. ಆಯಾ ಸಂದರ್ಭಕ್ಕೆ ಬಳಸುವ ಸಂಗೀತದ ಗತಿಯೂ ಒಂದು ಘಟನೆಯನ್ನು ನಡೆಯತ್ತಿರುವ ಬೆಳವಣಿಗೆಯೆಂಬ ತಾಜಾತನವನ್ನು ತುಂಬುತ್ತದೆ.

ರಾಜಕೀಯ ಘಟನೆ ಹಿನ್ನೆಲೆಯ ಚಿತ್ರವಾದ ಕಾರಣ, ಸಂಭಾಷಣೆ ತುಸು ಹೆಚ್ಚೆ ಎನಿಸಬಹುದು. ಕಾಸ್ತಾ ಗವ್ರಾಸ್ ಸಹ ಕೊಂಚ ಸಂಭಾಷಣಾ ಪ್ರಿಯ.

ಗ್ರೀಕ್‌ನಲ್ಲೇ ಚಿತ್ರೀಕರಣಗೊಂಡ ಕಾಸ್ತಾ ಗವ್ರಾಸ್ ನ ಮೊದಲ ಚಿತ್ರವೂ ಇದು ಎನ್ನುವುದು ವಿಶೇಷ.

-ರೂಪರಾಶಿ

Advertisement

Udayavani is now on Telegram. Click here to join our channel and stay updated with the latest news.

Next