ಕಲಬುರಗಿ: ಅಕ್ರಮವಾಗಿ ಮಾರಕಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಯೋರ್ವನನ್ನು ಬಂಧಿಸಿ, ಒಂದು ಆಟಿಕೆ ರಿವಾಲ್ವರ್ ಸೇರಿ 19 ಆಯುಧಗಳನ್ನು ನಗರ ಪೊಲೀಸರು ಬುಧವಾರ ಜಪ್ತಿ ಮಾಡಿದ್ದಾರೆ.
ಇಲ್ಲಿನ ಹಾಗರಗಾ ಕ್ರಾಸ್ ಸಮೀಪದ ಜುಬೇರ್ ಕಾಲೋನಿಯ ನಿವಾಸಿ ಮಹ್ಮದ್ ರಿಹಾನ್ ಖಾನ್ ಎಂಬಾತನೇ ಬಂಧಿತ ಆರೋಪಿ. ಈತ ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಯನ ಬಡಾವಣೆಯ ಸೇತುವೆ ಬಳಿ ಅಕ್ರಮ ಮಾರಕಾಸ್ತ್ರಗಳ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು.
ಅದರಂತೆ ಪೊಲೀಸ್ ಆಯುಕ್ತ ಎನ್.ಸತೀಶಕುಮಾರ, ಉಪ ಆಯುಕ್ತ ಡಿ.ಕಿಶೋರಬಾಬು ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಅಸ್ಲಂಬಾಷಾ, ಪಿಎಸ್‍ಐ ವಾಹಿದ್ ಕೋತ್ವಾಲ್, ಎಎಸ್‍ಐ ನಿಜಲಿಂಗಪ್ಪ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆಗ 2 ರಾಡ್ ಚಾಕು, 1 ಇಗಲ್ ಚಾಕು, 1 ಪರ್ದಾ ಚಾಕು, 1 ಕುಕ್ರಿ ಚಾಕು, 1 ಪಂಚ್, 3 ಬಟನ್ ಚಾಕು, 8 ನೇಪಾಳಿ ಚಾಕು, 1 ಸ್ಟೀಕ್ ಚಾಕು, 1 ಆಟಿಕೆ ರಿವಾಲ್ವರ್ ಪತ್ತೆಯಾಗಿವೆ.
ಈ ಮಾರಕಾಸ್ತ್ರಗಳನ್ನು ಬಾಂಬೆ ಸಿರಾಜ್ ಎಂಬುವವನ ಬಳಿ ಖರೀದಿಸಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದು, ಇಬ್ಬರ ವಿರುದ್ಧವೂ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.