Advertisement

ಹಾಲು ಕಲಬೆರಕೆ ಜಾಮೀನು ರಹಿತ ಅಪರಾಧವಾಗಲಿದೆ !

03:02 PM Mar 14, 2018 | |

ಮುಂಬಯಿ: ರಾಜ್ಯದಲ್ಲಿ ಇನ್ನು ಹಾಲು ಕಲಬೆರಕೆ ಮಾಡಿದರೆ, ದೀರ್ಘ‌ಕಾಲದ ವರೆಗೆ ಜೈಲಿನಲ್ಲಿ ಉಳಿಯಬೇಕಾಗುತ್ತದೆ! ಜೀವಕ್ಕೆ ಮಾರಕವಾಗಿರುವ ಹಾಲು ಕಲಬೆರಕೆ ಪ್ರವೃತ್ತಿ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಮುಂದಾ ಗಿರುವ ಮಹಾರಾಷ್ಟ್ರ ಸರಕಾರವು, ರಾಜ್ಯದಲ್ಲಿ ಹಾಲು ಕಲಬೆರಕೆಯನ್ನು ಜಾಮೀನು ರಹಿತ ಅಪರಾಧದ ಶ್ರೇಣಿಯಲ್ಲಿ ಇರಿಸಲು ಹಾಗೂ ಇದರ ಅಡಿಯಲ್ಲಿ ಅಪರಾಧಿಗಳಿಗೆ ಮೂರು ವರ್ಷಗಳ ತನಕ ಜೈಲು ಶಿಕ್ಷೆಯನ್ನು ವಿಧಿಸಲು ಚಿಂತನೆ ನಡೆಸಿದೆ.

Advertisement

ಹಾಲು ಕಲಬೆರಕೆಯ ಶಿಕ್ಷೆಯನ್ನು ಮೂರು ವರ್ಷಕ್ಕೆ ಹೆಚ್ಚಿಸಿದಲ್ಲಿ, ಆರೋಪಿಗಳಿಗೆ ಜಾಮೀನು ಪಡೆಯಲು ಯಾವುದೇ ಅವಕಾಶ ಸಿಗುವುದಿಲ್ಲ ಎಂದು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗಿರೀಶ್‌ ಬಾಪಟ್‌ ಅವರು ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಅವರು ಕೆಳಮನೆಯಲ್ಲಿ ಬಿಜೆಪಿ ಶಾಸಕ ಅಮೀತ್‌ ಸತಮ್‌ ಹಾಗೂ ಇತರರು ಗಮನ ಸೆಳೆವ ಸೂಚನೆಯ ಮೂಲಕ ಹಾಲು ಕಲಬೆರಕೆ ವಿಷಯದ ಬಗ್ಗೆ ಬೆಳೆಸಿದ ಚರ್ಚೆಗೆ ಪ್ರತಿಕ್ರಿಯಿಸುತ್ತಿದ್ದರು.

ಸದ್ಯಕ್ಕೆ ರಾಜ್ಯದಲ್ಲಿ ಹಾಲು ಕಲಬೆರಕೆಯು  ಗರಿಷ್ಠ 6 ತಿಂಗಳ ಜೈಲು ಶಿಕ್ಷೆಯನ್ನು ಒಳಗೊಂಡಿರುವ ಒಂದು ಜಾಮೀನು ಸಹಿತ ಅಪರಾಧವಾಗಿದ್ದು, ಇದನ್ನು ಜಾಮೀನು ರಹಿತ ಅಪರಾಧವನ್ನಾಗಿ ಪರಿಗಣಿಸಲು ರಾಜ್ಯ ಸರಕಾರವು ಪೊಲೀಸ್‌ ಮಹಾನಿರ್ದೇಶಕರು ಹಾಗೂ ಕಾನೂನು ಮತ್ತು ನ್ಯಾಯಾಂಗ ಇಲಾಖೆಯೊಂದಿಗೆ ಚರ್ಚೆ ನಡೆಸಿದೆ ಎಂದು ಬಾಪಟ್‌ ತಿಳಿಸಿದರು.ಶಿಕ್ಷೆಯ ಅವಧಿಯು ಮೂರು ವರ್ಷಗಳ ವರೆಗೆ ವಿಸ್ತರಿಸಲ್ಪಟ್ಟರೆ, ಆರೋಪಿಗಳಿಗೆ ಜಾಮೀನು ಪಡೆಯಲು ಯಾವುದೇ ಅವಕಾಶ ಸಿಗುವುದಿಲ್ಲ ಎಂದು ತಿಳಿಸಿದ ಎಫ್‌ಡಿಎ ಸಚಿವ ಬಾಪಟ್‌ ಅವರು, ಇದಕ್ಕೆ ಸಂಬಂಧಪಟ್ಟ ಕಾನೂನುವೊಂದನ್ನು  ಸರಕಾರವು ಶೀಘ್ರದಲ್ಲೇ ಜಾರಿಗೆ ತರಲಿದೆ ಎಂದರು.

ಇಂತಹ ಅಪರಾಧಗಳಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಬೇಕೆಂದು ಸದನದಲ್ಲಿ ಹಲವು ಮಂದಿ ಸದಸ್ಯರು ಒತ್ತಾಯಿಸಿದರು. ಆದರೆ, ಸಚಿವರು  ಜೀವಾವಧಿ ಶಿಕ್ಷೆಯನ್ನು ಒಳಗೊಂಡ ಕಾನೂನನ್ನು ಜಾರಿಗೆ ತರುವಲ್ಲಿ ಹಲವು ತೊಡಕುಗಳನ್ನು ಉಲ್ಲೇಖೀಸಿದರು. ಪ್ರಸ್ತುತ ಹಾಲಿನ ಕಲಬೆರಕೆಯನ್ನು ಪರೀಕ್ಷಿಸಲು ರಾಜ್ಯದಲ್ಲಿ ಮೂರು ಮೊಬೈಲ್‌ ವ್ಯಾನ್‌ಗಳಿಗೆವೆ ಎಂದು ತಿಳಿಸಿದ ಬಾಪಟ್‌ ಅವರು, ಈ ಪರೀಕ್ಷೆಗಳನ್ನು ನಿಯಮಿತವಾಗಿ ನಡೆಸಲಾಗುವುದಿಲ್ಲ ಎಂಬುದನ್ನು ಒಪ್ಪಿಕೊಂಡರು.ಆದಾಗ್ಯೂ, ನಿಯಮಿತ ಪರೀಕ್ಷೆಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಲಾಗುವುದು ಎಂದವರು ಸದನಕ್ಕೆ ಭರವಸೆಯನ್ನು ನೀಡಿದರು.ಆರಂಭದಲ್ಲಿ ಬಿಜೆಪಿ ಶಾಸಕ ಸತಮ್‌ ಅವರು, ಮುಂಬಯಿಯಲ್ಲಿ ಸಿಗುವ ಶೇ. 30ಕ್ಕೂ ಅಧಿಕ ಹಾಲು ಕಲಬೆರಕೆಯಿಂದ ಕೂಡಿದ್ದಾಗಿದೆ ಎಂದು ಪ್ರತಿಪಾದಿಸಿದರು.ಮೊಬೈಲ್‌ ವ್ಯಾನ್‌ಗಳು ಹಾಗೂ ಸಿಬಂದಿಗಳ ಕೊರತೆಯಿಂದಾಗಿ ಮುಂಬಯಿಗೆ ತರಿಸಲಾಗುವ ಹಾಲುಗಳ ಅನಿರೀಕ್ಷಿತ ಪರೀಕ್ಷೆ ನಡೆಸಲಾಗುತ್ತಿಲ್ಲ ಎಂದವರು ತಿಳಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next