ಕಲಬುರಗಿ: ಕಳೆದ ಮೂರು ತಿಂಗಳ ಅವಧಿಯಲ್ಲಿ ಮಹಾನಗರ ಪಾಲಿಕೆಗೆ ದಾಖಲೆಯ 12 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಇದು ವರ್ಷದ ಮೊದಲ ತ್ತೈಮಾಸಿಕ ಅವಧಿಯಲ್ಲಿ ಪಾಲಿಕೆ ಇತಿಹಾಸದಲ್ಲಿಯೇ ದಾಖಲೆ ಮೊತ್ತವಾಗಿದೆ.
ಇದೆಲ್ಲ ಆಗಿದ್ದು, ಮನೆ-ಮನೆಗೆ ಹಾಗೂ ವಾಣಿಜ್ಯ ಮಳಿಗೆಗೆ ಹೋಗಿ ತೆರಿಗೆ ಸಂಗ್ರಹ ಮಾಡಿದ್ದರಿಂದ ಸಾಧ್ಯವಾಗಿದೆ. ಈ ಹಿಂದಿನ ಕೆಲ ವರ್ಷಗಳಲ್ಲಿ ವರ್ಷಪೂರ್ತಿಯಾದರೂ ಇಷ್ಟೊಂದು ಮೊತ್ತದ ತೆರಿಗೆ ಸಂಗ್ರವಾಗಿರಲಿಲ್ಲ.
ಕಳೆದ ಏಪ್ರಿಲ್ 1ರಿಂದ ವಿದ್ಯುನ್ಮಾನ ಯಂತ್ರದಿಂದ (ಇಡಿಸಿ) ಪಾಲಿಕೆಯ ಬಿಲ್ ಕಲೆಕ್ಟದಾರರು, ಕಂದಾಯ ಇನ್ಸಪೆಕ್ಟರ್ ಹಾಗೂ ಅಧಿಕಾರಿಗಳು ಮಹಾನಗರದ ಮನೆ-ಮನೆಗೆ ಹೋಗಿ ತೆರಿಗೆ ಸಂಗ್ರಹಿಸುತ್ತಿರುವ ಕಾರ್ಯಕ್ಕೆ ವ್ಯಾಪಕ ಸ್ಪಂದನೆಯಾಗುತ್ತಿದ್ದು, ಹಳೆ ತೆರಿಗೆಯೆಲ್ಲ ಸಂಗ್ರಹವಾಗುತ್ತಿದೆ.
ವರ್ಷಂಪ್ರತಿ ಜನೆವರಿಯಿಂದ ಮಾರ್ಚ್‌ವರೆಗೆ ಶೇ. 70ರಷ್ಟು ತೆರಿಗೆ ಸಂಗ್ರಹವಾಗುತ್ತಿತ್ತು. ಆದರೆ ಈಗ ಮನೆ-ಮನೆಗೆ ತೆರಳಿ ತೆರಿಗೆ ಸಂಗ್ರಹಕ್ಕೆ ಮುಂದಾಗಿದ್ದರಿಂದ ಮೂರು ತಿಂಗಳ ಅವಧಿಯಲ್ಲಿಯೇ 12 ಕೋಟಿ ರೂ. ವಿವಿಧ ನಮೂನೆಯ ತೆರಿಗೆ ಸಂಗ್ರವಾಗಿದೆ. ಈ ವರ್ಷ 25 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. ನಿಗದಿತ ಚಾಲ್ತಿ 25 ಕೋಟಿ ರೂ. ಹಾಗೂ ಬಾಕಿ 12 ಕೋಟಿ ರೂ. ತೆರಿಗೆ ವರ್ಷದ ಆರ್ಥಿಕ ವರ್ಷಾಂತ್ಯಕ್ಕೆ ಸಂಗ್ರಹಿಸಲು ಪಾಲಿಕೆ ಉದ್ದೇಶಿಸಿದೆ. ಒಂದು ವೇಳೆ ಇದೆಲ್ಲ ಸಾಧ್ಯವಾದರೆ ಪಾಲಿಕೆ ಇತಿಹಾಸದಲ್ಲೇ ದಾಖಲೆ ತೆರಿಗೆ ಸಂಗ್ರಹವಾಗುತ್ತದೆ.
ಈ ಮೊದಲು ತೆರಿಗೆ ತುಂಬಲು ಪಾಲಿಕೆಗೆ ಬರಬೇಕಿತ್ತು. ಪಾಲಿಕೆಗೆ ಹೋದರೆ ಸರದಿ ಸಾಲು ಹೆಚ್ಚಿನ ಸಂಖ್ಯೆಯಲ್ಲಿರುತ್ತಿತ್ತು. ಚಲನ್ ತುಂಬಬೇಕು. ಒಮ್ಮೊಮ್ಮೆ ಸರತಿ ಸಾಲಿನಲ್ಲಿ ನಿಂತು ವಾಪಸ್ಸು ಬಂದಿದ್ದೆವು. ಆದರೆ ಪಾಲಿಕೆಯು ಮನೆಗೆ ಬಂದು ತೆರಿಗೆ ಪಡೆಯುತ್ತಿರುವುದು ಉತ್ತಮ ಹಾಗೂ ಅನುಕೂಲವಾಗಿದೆ ಎನ್ನುತ್ತಾರೆ ಲಾಲಗೇರಿ ಕ್ರಾಸ್‌ನ ನಿವಾಸಿ ವಿವೇಕ ಪಾಟೀಲ ಹಾಗೂ ಇನ್ನಿತರರು.
20 ಬಿಲ್ ಕಲೆಕ್ಟದಾರರು, ಐದು ಕಂದಾಯ ಇನ್ಸಪೆಕ್ಟರ್ ಹಾಗೂ ಮೂವರು ಅಧಿಕಾರಿಗಳು ಮನೆ-ಮನೆಗೆ ಹೋಗಿ ತೆರಿಗೆ ಸಂಗ್ರಹದಲ್ಲಿ ಕಾರ್ಯನಿರತವಾಗಿದ್ದಾರೆ. ಪಾಲಿಕೆ ಆಯುಕ್ತರಾದ ಫೌಜಿಯಾ ತರನ್ನುಮ್ ಅವರ ಆಸಕ್ತಿ ಹಾಗೂ ಹೊಸ ತಂತ್ರಜ್ಞಾನ ಬಳಕೆಯಿಂದ ಇದೆಲ್ಲ ಸಾಧ್ಯವಾಗಿದೆ.
ತೆರಿಗೆ ಹಣ ನೌಕರರ ವೇತನಕ್ಕೆ: ತೆರಿಗೆ ಸಂಗ್ರಹದಿಂದ ಬಂದಿರುವ ಹಣವನ್ನು ಪಾಲಿಕೆ ನೌಕರರ ವೇತನಕ್ಕೆ ಬಳಸಲಾಗಿದೆ. ಹೀಗಾಗಿ ಎರಡ್ಮೂರು ತಿಂಗಳಿಗೊಮ್ಮೆ ಆಗುತ್ತಿದ್ದ ವೇತನ ಈಗ ಕಾಲ-ಕಾಲಕ್ಕೆ ಆಗುವಂತಾಗಿದೆ. ತೆರಿಗೆ ಹೀಗೆ ಸಂಗ್ರಹವಾದರೆ ಮತ್ತಷ್ಟು ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು. ಆಶ್ಚರ್ಯವೆನಂದರೆ ಪಾಲಿಕೆ ಚುನಾಯಿತ ಆಡಳಿತಾವಧಿ ಕಳೆದ ಏಪ್ರಿಲ್ ತಿಂಗಳಿನ ಮೊದಲ ವಾರದಲ್ಲಿಯೇ ಮುಕ್ತಾಯವಾಗಿದೆ. ಪ್ರಾದೇಶಿಕ ಆಯುಕ್ತರು ಆಡಳಿತಾಧಿಕಾರಿಗಳಾಗಿದ್ದಾರೆ. ಈ ಅವಧಿಯಲ್ಲಿಯೇ ಹೆಚ್ಚಿನ ತೆರಿಗೆ ಸಂಗ್ರಹವಾಗಿರುವುದು ಗಮನಾರ್ಹವಾಗಿದೆ.
•ಹಣಮಂತರಾವ ಭೈರಾಮಡಗಿ