Advertisement

ಸಡಗರ, ಸಂಭ್ರಮದ ರಂಜಾನ್‌

11:26 AM Jun 17, 2018 | Team Udayavani |

ಬೆಂಗಳೂರು: ಪವಿತ್ರ ರಂಜಾನ್‌ ಹಬ್ಬವನ್ನು ನಗರದ ಮುಸ್ಲಿಂ ಬಾಂಧವರು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು. ಮಿಲ್ಲರ್ ರಸ್ತೆ, ಚಾಮರಾಜಪೇಟೆ, ಮೈಸೂರು ರಸ್ತೆ, ಜಗಜೀವನರಾಂ ನಗರ, ಶಿವಾಜಿನಗರ, ಜೆ.ಸಿ.ನಗರ, ನಾಗವಾರ, ರಾಮಕೃಷ್ಣ ಹೆಗಡೆ ನಗರ, ಜಯನಗರ, ಕೆಂಗೇರಿ, ಬನ್ನೇರುಘಟ್ಟ ರಸ್ತೆಯ ಗುರಪ್ಪನಪಾಳ್ಯ ಸೇರಿದಂತೆ ಹಲವೆಡೆ ಈದ್ಗಾ ಮೈದಾನಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.

Advertisement

ಮೈಸೂರು ರಸ್ತೆಯ ಹಳೇ ಗುಡ್ಡದಹಳ್ಳಿ ಬಳಿಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ಮಿಲ್ಲರ್ ರಸ್ತೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಪಾಲ್ಗೊಂಡಿದ್ದರು. 

ಕೆಲವೆಡೆ ಈದ್ಗಾ ಮೈದಾನ ಪೂರ್ತಿ ಭರ್ತಿಯಾಗಿ ಅಕ್ಕಪಕ್ಕದ ರಸ್ತೆಗಳಲ್ಲೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದು ಕಂಡುಬಂತು. ಸ್ನೇಹಿತರು, ಬಂಧುಗಳೆಲ್ಲಾ ಒಂದೆಡೆ ಸೇರಿ ಸಂಭ್ರಮ, ಸಡಗರಗಳೊಂದಿಗೆ ರಂಜಾನ್‌ ಆಚರಿಸಿದರು. ಹಲವರು ಮನೆಯಲ್ಲೇ ಔತಣ ಕೂಟ ಏರ್ಪಡಿಸಿ ಬಂಧುಗಳು, ಸ್ನೇಹಿತರನ್ನು ಆಹ್ವಾನಿಸಿ ಸಾಮೂಹಿಕ ಭೋಜನ ಸವಿದರು.

ವಿಶೇಷ ಖಾದ್ಯಗಳು, ಒಣ ಹಣ್ಣುಗಳು, ತರಹೇವಾರಿ ಖರ್ಜೂರಗಳನ್ನು ಹಂಚಿ ಖುಷಿ ಪಟ್ಟರು. ಕೆಲವರು ನಗರದ ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ತೆರಳಿ ಕುಟುಂಬದವರೊಂದಿಗೆ ವಿಶೇಷವಾಗಿ ಹಬ್ಬ ಆಚರಿಸಿದರು. ರಂಜಾನ್‌ ಹಿನ್ನೆಲೆಯಲ್ಲಿ ಮಾಲ್‌ಗ‌ಳು, ಸೂಪರ್‌ ಮಾರ್ಕೆಟ್‌ಗಳಲ್ಲೂ ಖರೀದಿ ಭರಾಟೆ ಜೋರಾಗಿತ್ತು.

ಪರಮೇಶ್ವರ್‌ ಭಾಗಿ: ವಸಂತನಗರದ ಮಿಲ್ಲರ್ ರಸ್ತೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಮಹಮ್ಮದ್‌ ಪೈಗಂಬರರು ವಿಶ್ವಕ್ಕೆ ಭಾತೃತ್ವದ ಸಂದೇಶ ನೀಡಿದ್ದಾರೆ. ಆ ಸಂದೇಶ ಸೂರ್ಯ, ಚಂದ್ರರು ಇರುವವರೆಗೂ ಪ್ರಸ್ತುತವಾಗಿರುತ್ತದೆ. ಅದರಂತೆ ನಾವೆಲ್ಲಾ ಸಹೋದರರಂತೆ ಬಾಳಬೇಕು. ಹೊಡೆದಾಡುವ ಬದಲು, ಸಂತೋಷ, ಶಾಂತಿಯಿಂದ ಸಹಬಾಳ್ವೆ ನಡೆಸಬೇಕು ಎಂಬುದನ್ನು ಮಹಮ್ಮದ್‌ ಪೈಗಂಬರರು ಕಲಿಸಿ ಹೋಗಿದ್ದಾರೆ. ಅವರು ತೋರಿರುವ ಮಾರ್ಗದಲ್ಲೇ ನಾವು ಬದುಕಬೇಕು ಎಂದು ಹೇಳಿದರು.

Advertisement

ಸರ್ಕಾರ ನಿಮ್ಮೊಂದಿಗಿದೆ: “ರಾಜ್ಯದ ಗೃಹ ಸಚಿವ ಹಾಗೂ ಉಪಮುಖ್ಯಮಂತ್ರಿಯಾಗಿ ತಮ್ಮಲ್ಲೆರ ಪರವಾಗಿ ಸರ್ಕಾರದಲ್ಲಿ ಆಡಳಿತ ನಿರ್ವಹಿಸುತ್ತೇನೆ. ನನ್ನ ಹುದ್ದೆಯನ್ನು ನಿಮ್ಮ ಸೇವೆಗೆ ಮುಡುಪಾಗಿಡುತ್ತೇನೆ. ಸರ್ಕಾರ ನಿಮ್ಮೊಂದಿಗೆ ಇರಲಿದೆ. ಎಲ್ಲ ಸಂದರ್ಭದಲ್ಲೂ ನಾವು ನಿಮ್ಮೊಂದಿಗೆ ಇರುತ್ತೇವೆ. ವಿಶ್ವ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸುತ್ತೇನೆ,’ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫ‌ರ್‌ ಷರೀಫ್, ಮೇಯರ್‌ ಆರ್‌.ಸಂಪತ್‌ರಾಜ್‌, ಮಾಜಿ ಸಚಿವ ಆರ್‌.ರೋಷನ್‌ ಬೇಗ್‌, ವಿಧಾನ ಪರಿಷತ್‌ ಸದಸ್ಯರಾದ ಸಿ.ಎಂ.ಇಬ್ರಾಹಿಂ, ರಿಜ್ವಾನ್‌ ಹರ್ಷದ್‌ ಇತರರು ಪಾಲ್ಗೊಂಡಿದ್ದರು.

ಮುತಾಲಿಕ್‌ ವಿಚಾರಣೆಯಾಗಲಿ: ಕಟ್ಟರ್‌ ಹಿಂದುತ್ವವಾದಿ ಪ್ರಮೋದ್‌ ಮುತಾಲಿಕ್‌ ನೆರಳಲ್ಲೇ ಗೌರಿ ಹತ್ಯೆ ನಡೆದಿದೆ. ಮೊದಲು ಮುತಾಲಿಕ್‌ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ಒತ್ತಾಯಿಸಿದರು.

ಮಿಲ್ಲರ್ ರಸ್ತೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬಳಿಕ ಪ್ರತಿಕ್ರಿಯಿಸಿದ ಅವರು, ಪ್ರಮೋದ್‌ ಮುತಾಲಿಕ್‌ ಅವರನ್ನು ವಿಚಾರಣೆಗೆ ಒಳಪಡಿಸಿದರೆ ಗೌರಿ ಹತ್ಯೆ ಪ್ರಕರಣ ಬಗೆಹರಿಯಲಿದೆ. ಕಾಯಿಲೆಗೆ ಮದ್ದು ಕಂಡುಹಿಡಿದರೆ ಸಾಲದು, ಅದಕ್ಕೆ ಕಾರಣವನ್ನೂ ಪತ್ತೆ ಹಚ್ಚಬೇಕು. ಮುತಾಲಿಕ್‌ ಅವರನ್ನು ಮಟ್ಟ ಹಾಕಿದರೆ ಹಿಂದೂ ಭಯೋತ್ಪಾದನೆ ಕಡಿಮೆಯಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next