Advertisement

ಕುಟುಂಬ ಯೋಜನೆಯ ಅಳವಡಿಕೆ ಜನಾಂದೋಲನವಾಗಲಿ: ಡಾ.ಕೆ.ಸುಧಾಕರ್‌

03:56 PM Jul 11, 2022 | Team Udayavani |

ಬೆಂಗಳೂರು: ಭಾರತದ ಜನಸಂಖ್ಯೆ 140 ಕೋಟಿಗೆ ಸಮೀಪಲ್ಲಿದ್ದರೂ, ಯುವಜನರ ಸಂಖ್ಯೆ ಹೆಚ್ಚಿರುವುದು ದೇಶಕ್ಕೆ ಲಾಭದಾಯಕ. ಆದರೂ ಜನಸಂಖ್ಯೆ ಏರಿಕೆಗೆ ಮಿತಿ ಹೇರಲು ಕುಟುಂಬ ಯೋಜನೆಯ ಅಳವಡಿಕೆ ಜನಾಂದೋಲನದಂತೆ ನಡೆಯಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಕರೆ ನೀಡಿದರು.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆದ ʼವಿಶ್ವ ಜನಸಂಖ್ಯಾ ದಿನಾಚರಣೆʼಯಲ್ಲಿ ಮಾತನಾಡಿದ ಸಚಿವರು, ವೈದ್ಯಕೀಯ ಆವಿಷ್ಕಾರ ಹಾಗೂ ಉತ್ಕೃಷ್ಟ ಆರೋಗ್ಯ ಸೇವೆಗಳಿಂದಾಗಿ ಜನರ ಗರಿಷ್ಠ ವಯೋಮಿತಿ 65-70 ಕ್ಕೆ ತಲುಪಿದೆ. ಮುಂದುವರಿದ ದೇಶಗಳಲ್ಲಿ 80 ವರ್ಷ ವಯಸ್ಸಿನವರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಜಪಾನ್‌, ಇಟಲಿ, ಸ್ಪೇನ್‌ ಮೊದಲಾದ ದೇಶಗಳಲ್ಲಿ ಹಿರಿಯ ನಾಗರಿಕರು ಹೆಚ್ಚಿದ್ದು, ಯುವಜನರ ಸಂಖ್ಯೆ ಕಡಿಮೆಯಾಗಿದೆ. ಆದರೆ ಭಾರತದಲ್ಲಿ ಶೇ.60 ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇಂತಹ ಯುವಜನರು ದೇಶದ ಶಕ್ತಿಯಾಗಿದ್ದಾರೆ. ಜನಸಂಖ್ಯೆ ಹೆಚ್ಚಿದ್ದರೂ, ಯುವಜನರು ಹೆಚ್ಚಿರುವುದರಿಂದ ದೇಶಕ್ಕೆ ಲಾಭವಾಗಿದೆ. ಜಗತ್ತಿನಲ್ಲಿ ಭಾರತ ಮೂರನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿದೆ. ಅತಿ ಹೆಚ್ಚು ಗ್ರಾಹಕರನ್ನು ದೇಶ ಹೊಂದಿರುವುದರಿಂದ ಬಹುರಾಷ್ಟ್ರೀಯ ಕಂಪನಿಗಳು ಇತ್ತ ಕಡೆ ನೋಡುತ್ತಿವೆ ಎಂದರು.

ಭಾರತದಲ್ಲಿ ಜನಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದೆ. ಜಗತ್ತಿನ ಜನಸಂಖ್ಯೆ 500 ಕೋಟಿಯಿಂದ 800 ಕೋಟಿಗೆ ತಲುಪಿದೆ. ಭಾರತದ ಜನಸಂಖ್ಯೆ 1.4 ಬಿಲಿಯನ್‌ಗೆ ತಲುಪಿದೆ. ಇದರಿಂದಾಗಿ ಸಮಾಜಕ್ಕೆ, ಪರಿಸರಕ್ಕಾಗುವ ದುಷ್ಪರಿಣಾಮವೇನು ಎಂದು ಕೂಡ ಆಲೋಚಿಸಬೇಕಿದೆ. ಹಾಗೆಯೇ ಸೂಕ್ಷ್ಮವಾಗಿ ಅವಲೋಕಿಸಿ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಹಿಂದೆ ಭಾರತದ ಕುಟುಂಬಗಳಲ್ಲಿ ಮೂರು ನಾಲ್ಕು ಮಕ್ಕಳಿರುತ್ತಿದ್ದರು. ಕಾಲಕ್ರಮೇಣ ಅವಿಭಕ್ತ ಕುಟುಂಬ ಪದ್ಧತಿ ಮರೆಯಾಗುತ್ತಿದೆ ಎಂದರು.

ಕಡಿಮೆ ಮಕ್ಕಳಿದ್ದರೆ ಪ್ರಗತಿ: ಕುಟುಂಬದಲ್ಲಿ ಹೆಚ್ಚು ಮಕ್ಕಳಿದ್ದರೆ ಖರ್ಚು ಹೆಚ್ಚುತ್ತದೆ. ನಾಲ್ಕು ಮಕ್ಕಳ ಬದಲು ಇಬ್ಬರಿದ್ದರೆ ಅವರಿಗೆ ಉತ್ತಮ ಶಿಕ್ಷಣ, ಆರೋಗ್ಯ ಸೌಲಭ್ಯವನ್ನು ನೀಡಬಹುದು. ನೈಸರ್ಗಿಕ ಸಂಪನ್ಮೂಲ ಹಿಂದೆ ಇದ್ದಷ್ಟೇ ಇರುತ್ತದೆ. ಹಾಗೆಯೇ ಭೌಗೋಳಿಕ ವಿಸ್ತೀರ್ಣ ಕೂಡ ಅಷ್ಟೇ ಇರುತ್ತದೆ. ಹಿಂದಿಗಿಂತ ದೇಶದ ಜನಸಂಖ್ಯೆ 6-7 ಪಟ್ಟು ಹೆಚ್ಚಿದ್ದರೂ, ಭೂಮಿ, ನೀರು ಮೊದಲಾದ ಸಂಪನ್ಮೂಲಗಳೇನೂ ಹೆಚ್ಚಾಗುವುದಿಲ್ಲ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭೂ ಕುಸಿತ, ಭಾರಿ ಮಳೆ ಸೇರಿದಂತೆ ವಿವಿಧ ಬಗೆಯ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಇದಕ್ಕೆ ಜನಸಂಖ್ಯೆ ಏರಿಕೆ ಕೂಡ ಕಾರಣ ಎಂದರು.

ಹಿಂದೆ ಆರೋಗ್ಯ ಸೌಲಭ್ಯಗಳು ಕಡಿಮೆ ಇದ್ದಿದ್ದರಿಂದ ಆತಂಕ ಇತ್ತು. ಆದರೆ ಇಂದು ಆರೋಗ್ಯ ಸೌಲಭ್ಯಗಳು ಉತ್ತಮವಾಗಿರುವುದರಿಂದ ಆ ಆತಂಕ ಈಗಿಲ್ಲ. ಹಿಂದಿಗಿಂತಲೂ ಜೀವನ ಗುಣಮಟ್ಟ ಈಗ ಹೆಚ್ಚಿದೆ. ಆದ್ದರಿಂದ ಸಣ್ಣ ಸಂಸಾರವಿದ್ದರೆ ಆರ್ಥಿಕತೆ ಉತ್ತಮವಾಗಿರುತ್ತದೆ. ಈ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕಿದೆ. ಕುಟುಂಬ ಯೋಜನೆಯ ಜಾರಿಯಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಕುರಿತು ಇನ್ನಷ್ಟು ಜಾಗೃತಿ ಕಾರ್ಯ ನಡೆಯಬೇಕು ಎಂದು ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next