Advertisement

ಶಾಸಕರು, ರಾಜೀವ್‌ಗಾಂಧಿ ವಿವಿಯಿಂದ ಚಿಕ್ಕಬಳ್ಳಾಪುರ ಸರಕಾರಿ ಶಾಲೆಗಳ ದತ್ತು ಸ್ವೀಕಾರ:ಸುಧಾಕರ್

04:36 PM Sep 12, 2020 | keerthan |

ಚಿಕ್ಕಬಳ್ಳಾಪುರ: ಜಿಲ್ಲೆಯ ಸರಕಾರಿ ಶಾಲೆಗಳನ್ನು ಶಾಸಕರು, ಮಂತ್ರಿಗಳು, ಐಟಿ ಬಿಟಿ ಕಂಪನಿಗಳು ಹಾಗೂ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ದತ್ತು ಪಡೆದು ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿ ಪಡಿಸಲು ಒಪ್ಪಿರುವುದು ಸ್ವಾಗತಾರ್ಹ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

Advertisement

ಜಿಲ್ಲಾ ಪಂಚಾಯತ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿ ಶಾಸಕರು ಆಯಾ ಜಿಲ್ಲೆಯಲ್ಲಿನ ಮೂರು ಸರಕಾರಿ ಶಾಲೆ ದತ್ತು ಪಡೆಯಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಮಂತ್ರಿಯಾಗಿ ನಾನು ಈಗಾಗಲೇ ಐದು ಶಾಲೆಗಳನ್ನು ಆಯ್ಕೆ ಮಾಡಿದ್ದೇನೆ. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ 5 ಶಾಲೆಗಳನ್ನು ದತ್ತು‌ಪಡೆಯಲು ತೀರ್ಮಾನಿಸಿರುವುದು ಸ್ವಾಗತಾರ್ಹ. ಶಾಸಕರು ಹಾಗೂ ಮಂತ್ರಿಗಳು ಮಾತ್ರವಲ್ಲದೇ ವಿಧಾನಪರಿಷತ್ ಸದಸ್ಯರು ಸಹ ಶಾಲೆಗಳನ್ನು ದತ್ತು ಪಡೆಯಲಿ ಎಂದು ಸಲಹೆ ನೀಡಿದರು.

ದೇಶದಲ್ಲಿ ಜಾತಿ ಪದ್ಧತಿ, ಭ್ರಷ್ಟಾಚಾರ, ಅಜ್ಞಾನ, ಹಸಿವನ್ನು ನೀಗಿಸಲು ಶಿಕ್ಷಕರಿಂದ ಮಾತ್ರ ಸಾಧ್ಯ. ಮಕ್ಕಳಲ್ಲಿ ಚಿಕ್ಕ ವಯಸ್ಸಲ್ಲೇ ಜಾತಿ ಪದ್ಧತಿ ತೊಲಗಿಸುವ ಜವಾಬ್ದಾರಿ ನಿಮ್ಮದು. ಶಿಕ್ಷಣದಿಂದ ಮಾತ್ರ ದೇಶದ ಹಾಗೂ ವ್ಯಕ್ತಿಯ ವಿಕಾಸ ಅಗತ್ಯ.‌ ಶಿಕ್ಷಣ- ಶಿಕ್ಷಕರು ದೇಶದ ಎರಡು ಕಣ್ಣುಗಳಿದ್ದಂತೆ. ಅವರಿಗೆ ಗೌರವ ಸಲ್ಲಿಸುವುದು ನಮ್ಮ‌ ಜವಾಬ್ದಾರಿ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಆಗಾಗ ಟ್ವೀಟ್ ಮಾಡದಿದ್ದರೆ ಕಾಂಗ್ರೆಸ್‌ನವರೇ ಮರೆಯುತ್ತಾರೆ: ಸೋಮಶೇಖರ್ ವ್ಯಂಗ್ಯ

ಸಮಾಜಕ್ಕೆ ಶಿಕ್ಷಕರ ಕೊಡುಗೆ ಅಸಾಧಾರಣ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 20ನೇ ಸ್ಥಾನದಲ್ಲಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಶಿಕ್ಷಕರ ಶ್ರಮದಿಂದ ಈ ವರ್ಷ ಮೊದಲ ಸ್ಥಾನಕ್ಕೆ ತಂದು ನಿಲ್ಲಿಸಲಾಗಿದೆ ಈ ಸಾಧನೆ ಪ್ರತಿವರ್ಷ ಮರುಕಳಿಸಬೇಕು ಎಂದರು.

Advertisement

ಯಾವುದಾದರೊಂದು ವೃತ್ತಿಗೆ ನಿವೃತ್ತಿ‌ ಇಲ್ಲವೆಂದರೆ ಅದು ಶಿಕ್ಷಕರಿಗೆ ತಂದೆ ತಾಯಿ ಜನ್ಮ ನೀಡಿದರೆ ಶಿಕ್ಷಕರು ಜೀವನ ನೀಡುತ್ತಾರೆ. ಮಕ್ಕಳ ಸಂಪೂರ್ಣ ವಿಕಾಸ ಶಿಕ್ಷಕರಿಂದ ಮಾತ್ರ ಸಾಧ್ಯ. ಆ ಕಾಲದಿಂದಲೂ ಶಿಕ್ಷಕರಿಗೆ ವಿಶೇಷ ಸ್ಥಾನಮಾನವಿದೆ ಎಂದು ಬಣ್ಣಿಸಿದರು.

ಶಿಕ್ಷಕರಾದವರು ಎಂದಿಗೂ ಕಲಿಕೆ ನಿಲ್ಲಿಸಬಾರದು.  ಹುಟ್ಟಿನಿಂದ ಸಾವಿನ ವರೆಗೂ ಕಲಿಕೆ ಬಹಳ ಮುಖ್ಯ. ಪ್ರತಿಯೊಬ್ಬ ಶಿಕ್ಷಕರು ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಆವಿಷ್ಕಾರವನ್ನು ಮೈಗೂಡಿಸಿಕೊಳ್ಳಬೇಕು. ಪೀಳಿಗೆಗೆ ತಕ್ಕಂತೆ ಶಿಕ್ಷಣದ ಪದ್ಧತಿ ಬದಲಿಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಪ್ರೇರಣಾ ಶಕ್ತಿಯಾಗಬೇಕು. ನನ್ನ ಜೀವನದಲ್ಲಿ ಅನೇಕ ಶಿಕ್ಷಕರು ಬಂದು ಹೋದರು, ಆದೆ ಕೆಲವೇ ಶಿಕ್ಷಕರು ನನ್ನ ಮನದಲ್ಲಿ ಗಟ್ಟಿಯಾಗಿ ಉಳಿದಿದ್ದಾರೆ. ಹಾಗೇ ನೀವು ಸಹ, ಪೋಷಕರ ನಂತರ ಮಕ್ಕಳ‌ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬೇಕು ಎಂದು ಕಿವಿ‌ಮಾತು ಹೇಳಿದರು.

ನನ್ನ ಮೊದಲ ಆದ್ಯತೆ ಜಿಲ್ಲೆಯನ್ನು ವಿಕಾಸ ಮಾಡುವುದು. ಹೊಸ ಜಿಲ್ಲೆಯಾಗಿರುವುದರಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ‌ ಮಾಡಲು ಸಾಕಷ್ಟು ಅವಕಾಶವಿದೆ. ಈ‌ ನಿಟ್ಟಿನಲ್ಲಿ ಈಗಾಗಲೇ 600 ಕೋಟಿ ವೆಚ್ಚದಲ್ಲಿ 700 ಹಾಸಿಗೆಯ ವೈದ್ಯಕೀಯ ಕಾಲೇಜನ್ನು ನಿರ್ಮಿಸಲಾಗುತ್ತಿದ್ದು, 24 ತಿಂಗಳೊಳಗೆ ಲೋಕಾಪರ್ಣೆಗೊಳ್ಳಲಿದೆ ಎಂದರು.

ಮಾದರಿ ಗುರು ಭವನ ನಿರ್ಮಾಣ: ಬಹುದಿನಗಳ ನಿರೀಕ್ಷೆಯಂತೆ ಗುರು ಭವನ‌ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಬಳಿ ಶಂಕು ಸ್ಥಾಪನೆ ಆಗಿದೆ. ಈ ಭವನವನ್ನು ಇಡೀ ರಾಜ್ಯದಲ್ಲಿ ಮಾದರಿಯಂತೆ ನಿರ್ಮಾಣ ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ 40 ಜನ ನಿವೃತ್ತ ಶಿಕ್ಷಕರು ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next