ಬೀದರ: ಬಸ್, ರೈಲ್ವೆ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಬಳಿ ಹಾಗೂ ರಸ್ತೆಗಳಲ್ಲಿರುವ ಬಡ ಹಾಗೂ ನಿರ್ಗತಿಕರ ಹಸಿದ ಹೊಟ್ಟೆಗಳಿಗೆ ಯಾವುದೇ ಪ್ರಚಾರ, ಫಲಾಪೇಕ್ಷೆ ಇಲ್ಲದೆ ಬೀದರನಲ್ಲಿ ಮಹಿಳಾ ವೈದ್ಯರೊಬ್ಬರಿಂದ ಅನ್ನ ದಾಸೋಹ ನಡೆಯುತ್ತಿದೆ. ನವಜೀವನ ಆಸ್ಪತ್ರೆಯ ಡಾ| ಸ್ವಾತಿ ಕಾಮಶೆಟ್ಟಿ ಅನ್ನಪೂರ್ಣೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಸವ ಜಯಂತಿಯಿಂದ ಆರಂಭಗೊಂಡ ಈ ಪವಿತ್ರ ಕಾರ್ಯಕ್ಕಾಗಿಯೇ ಚಿಕಪೇಟ್‌ನ ಶಕುಂತಲಾ, ಸಂಗೀತಾ ಹಾಗೂ ಉಮಾಶ್ರೀ ಹಾಗೂ ಓರ್ವ ಯುವಕ ಅನ್ನದಾಸೋಹ ಕೈಂಕರ್ಯಕ್ಕೆ ಸಾಥ್ ನೀಡುತ್ತಿದ್ದು, “ಯಶಸ್ವಿ’ ದಾಸೋಹ ಎಂಬ ಕೋಣೆಯಲ್ಲಿ ಪ್ರತಿದಿನ 50 ಜನರಿಗೆ ತಯಾರಿಸಿದ್ದ ಒಂದೊತ್ತಿನ ಅನ್ನ ಪೂರೈಸಲಾಗುತ್ತಿದೆ.
ಅಡುಗೆ ಮಾಡಲು ತಂದಿರುವ ಡಿಸೆಬಲ್ ವೇಸ್ಟ್ ಹಾಗೂ ಇನ್ನಿತರ ಉಳಿದ ವಸ್ತುಗಳಿಂದ ಬಯೋಗ್ಯಾಸ್ ತಯಾರಿಸಿ ಅದರಿಂದಲೇ ಕೆಸರಿ ಭಾತ್, ಉಪ್ಪಿಟ್, ಸೀರಾ, ರೊಟ್ಟಿ, ಅನ್ನ, ಆಲೂಭಾತ್, ಜೀರಾ ರೈಸ್, ಶೇಂಗಾ ಚಟ್ನಿ ಹೀಗೆ ಪ್ರತಿನಿತ್ಯ ಒಂದೊಂದು ಬಗೆಯ ಪೋಷಕಾಂಶಭರಿತ ಊಟ ತಯಾರಿಸಿ ತಮ್ಮ ವಾಹನ ಚಾಲಕನಿಂದ ನೀಡುತ್ತಿದ್ದಾರೆ. ಈ ಕಾರ್ಯಕ್ಕೆ ಯಾವುದೇ ಸಂಘ ಸಂಸ್ಥೆಗಳು ಸಹಕರಿಸಿದ್ದರೆ ಮುಂಬರುವ ದಿನಗಳಲ್ಲಿ ಯಶಸ್ವಿ ನ್ಯಾಸ್ ಅಡಿಯಲ್ಲಿ ಹಿರಿಯ ನಾಗರಿಕರಿಗಾಗಿ ಹೆಲ್ಪೇಜ್ ಹೊಂ ತೆರೆಯುವ ಉದ್ದೇಶ ಹೊಂದಲಾಗಿದೆ ಎನ್ನುತ್ತಾರೆ ಡಾ| ಸ್ವಾತಿ.
ಮೂಲತಃ ಮಹಾರಾಷ್ಟ್ರದ ಡಾ| ಸ್ವಾತಿ ಹಾಗೂ ಡಾ| ಯೋಗೇಶ ಕಾಮಶೆಟ್ಟಿ ದಂಪತಿಗಳು ಸುಮಾರು ಏಳು ವರ್ಷಗಳ ಹಿಂದೆ ತೆಲಂಗಾಣಾದ ಗಡಿ ಗ್ರಾಮ ಕರಂಜಿಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರು. ಬೀದರ ಬಸವ ಮಂಟಪದಲ್ಲಿ ನೀಲಾಂಬಿಕೆ ಬಾಲಕಿಯರ ವಸತಿ ನಿಲಯಕ್ಕೆ ವಿದ್ಯುತ್ ಇಲ್ಲದ ಸಮಯದಲ್ಲಿ ಬಾಲಕಿಯರಿಗೆ ಓದಲು ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ದೊಡ್ಡ ಇನ್ವೆಟರ್ ಹಾಗೂ ದೊಡ್ಡ ಫ್ರಿಜ್ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಈಗಾಗಲೇ ಲಾತೂರಿನ ಔಸಾದಲ್ಲಿ ಮೂರು ಜನ ಎಚ್‌ಐವಿ ಪಿಡಿತ ಮಕ್ಕಳನ್ನು ದತ್ತು ಪಡೆದು ಪೋಷಣೆ ಮಾಡುವುದಲ್ಲದೇ ಅವರ ಶಿಕ್ಷಣ ಸೇರಿದಂತೆ ಎಲ್ಲ ಖರ್ಚು ಇವರೇ ನೋಡಿಕೊಳ್ಳುತ್ತಿದ್ದಾರೆ. ಹಸಿದವರ ಹೊಟ್ಟೆ ತುಂಬಿಸುವ ಮಹೋನ್ನತ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.