Advertisement

ಪಠ್ಯದೊಂದಿಗೆ ಸಂಸ್ಕಾರ-ಸಂಸ್ಕೃತಿ ಅಳವಡಿಸಿಕೊಳ್ಳಿ

01:25 PM Dec 19, 2017 | Team Udayavani |

ಬೀದರ: ವಿದ್ಯಾರ್ಥಿಗಳು ಜೀವನದಲ್ಲಿ ಪಠ್ಯದ ಜೊತೆಗೆ ಸಂಸ್ಕಾರ ಹಾಗೂ ಸಂಸ್ಕೃತಿ ಅಳವಡಿಸಿಕೊಂಡು ಹೆತ್ತವರು ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ವಿಧೇಯತೆ ತೋರಬೇಕೆಂದು ಗೈಡ್‌ನ‌ ರಾಜ್ಯ ಮುಖ್ಯ ಆಯುಕ್ತೆ ಗೀತಾ ನಟರಾಜ್‌ ಹೇಳಿದರು. ನಗರದ ಕಿಶನಲಾಲ್‌ ಪಾಂಡೆ ಔಷಧ ಮಹಾವಿದ್ಯಾಲಯದಲ್ಲಿ ಭಾರತ ಸ್ಕೌಟ್ಸ್‌ ಮತ್ತು ಗೈಡ್‌ ಜಿಲ್ಲಾ ಘಟಕ ವಿಭಾಗ ಮಟ್ಟದ ರೇಂಜರ್‌ಗಳಿಗಾಗಿ ಆಯೋಜಿಸಿದ್ದ ಪ್ರೇರಣಾ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಅವರು, ತಂದೆ, ತಾಯಿಗಳು ನಮ್ಮ ನಿಜವಾದ ದೈವಗಳು. ನಮ್ಮನ್ನು ಜಗತ್ತಿಗೆ ಧಾರೆ ಎರೆದ ಕಾರಣಕ್ಕಾಗಿಯೇ ಈ ಹಂತಕ್ಕೆ ತಲುಪಿದೆವು. ಪಾಲಕರ ಪರಿಶ್ರಮ ಅಳತೆಗೋಲಿನಿಂದ ಅಳೆಯಲಿಕ್ಕಾಗದು. ಅವರಿಗೆ ಗೌರವ ತೋರಿ, ಪ್ರಾಮಾಣಿಕ ಸೇವೆ ಮಾಡಿದಲ್ಲಿ ಜೀವನ ಸಾರ್ಥಕವಾಗುವುದು ಎಂದರು.

Advertisement

ವಿದ್ಯೆ ಮಾತ್ರವಲ್ಲ, ನೈಸರ್ಗಿಕ ಸಂಪತ್ತನ್ನು ಮಿತ ಬಳಕೆ ಮಾಡುವುದೂ ನಮ್ಮ ಧರ್ಮ. ಪೋಲಾಗುತ್ತಿರುವ ವಿದ್ಯುತ್‌,
ಹಾಳಾಗುತ್ತಿರುವ ನೀರು, ಮಲಿನವಾಗುತ್ತಿರುವ ಗಾಳಿಯ ಶುಚಿತ್ವ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ದೇಶಭಕ್ತರ ಹಾಗೂ ಮಹಾನ್‌ ಸಾಧಕರ ಅನುಸರಣೆ ನಮ್ಮ ಜೀವನದಲ್ಲಿ ಹೊಸ ಪ್ರೇರಣೆ ಹಾಗೂ ಪ್ರೋತ್ಸಾಹ ನೀಡಬಲ್ಲದು ಎಂದರು.

ಭಾರತ ಸ್ಕೌಟ್ಸ್‌ ಮತ್ತು ಗೈಡ್‌ ಸಂಸ್ಥೆ ಸುಮಾರು 110 ವರ್ಷಗಳ ಇತಿಹಾಸ ಹೊಂದಿದೆ. 5 ಖಂಡಗಳಲ್ಲಿ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 228 ಮಿಲಿಯನ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ಗಳು ಸೇವೆ ಸಲ್ಲಿಸುತ್ತಿರುವರು. ಮಕ್ಕಳಲ್ಲಿ ಸಾಮಾಜಿಕ, ಭೌತಿಕ, ಅಧ್ಯಾತ್ಮಿಕ ಹಾಗೂ ನೈತಿಕ ಮೌಲ್ಯಗಳನ್ನು ಬಿತ್ತಲು ಈ ಸಂಸ್ಥೆ ಸಹಕಾರಿಯಾಗಲಿದ್ದು, ಇಲ್ಲಿ ಜರುಗುವ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ತಾಳ್ಮೆ, ಸಹಕಾರ, ಸದ್ಗುಣ, ಸದಾಚಾರ, ಏಕತೆ, ಸೌಹಾರ್ದತೆ ಗಟ್ಟಿಗೊಳ್ಳಲು ಸಹಕರಿಸುತ್ತವೆ ಎಂದು
ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಮುಖ್ಯ ಆಯುಕ್ತೆ ಗುರಮ್ಮ ಸಿದ್ದಾರೆಡ್ಡಿ ಮಾತನಾಡಿ, ಭಾರತ ಸ್ಕೌಟ್ಸ್‌,
ಗೈಡ್‌ನಿಂದ ಜರುಗುವ ಜಾಂಬುರಿಯಂತಹ ಕಾರ್ಯಕ್ರಮಗಳು, ಪ್ರೇರಣಾ ಶಿಬಿರಗಳು ಮಕ್ಕಳಲ್ಲಿ ಸಾಹಸ, ಧೈರ್ಯ, ಶೌರ್ಯ, ಶಕ್ತಿ, ಯುಕ್ತಿ, ಸಹೃದಯಿಗಳಾಗಿ ಹೊರಹೊಮ್ಮಲು ಪ್ರೇರೆಪಿಸುತ್ತವೆ ಎಂದರು.

ನಾವು ನಮ್ಮ ಪಾಲಕರು ಹಾಗೂ ಶಿಕ್ಷಕರನ್ನು ಮೊದಲು ಪ್ರೇರಕರಾಗಿ ಸ್ವೀಕರಿಸಬೇಕು. ಸಮಾಜ ಸುಧಾರಕರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ನಮಿಸಬೇಕು. ಸಮಾಜದಲ್ಲಿ ನೊಂದು, ಬೆಂದು ಬದುಕುವ ಶೋಷಿತರ ಬಗ್ಗೆ ಕಾಳಜಿ ವಹಿಸಿ, ಸಮಾಜ ಘಾತುಕ ಶಕ್ತಿಗಳ ವಿರುದ್ಧ ಬಡಿದೇಳಬೇಕು ಎಂದು ಕಿವಿ ಮಾತು ಹೇಳಿದರು.

Advertisement

ಎನ್‌.ಕೆ. ಛಾಯಾ, ಬಿ.ಡಿ. ಶಾಂತಾ, ರಾಮಲತಾ, ಮಂಜುಳಾ ಹಾಗೂ ಇತರರು ಮಾತನಾಡಿದರು. ಕೆ.ಎಸ್‌. ಚಳಕಾಪುರೆ,
ರಾಚಯ್ಯ, ಜಯಶೀಲಾ, ರಜನಿ ಗಂಧಾ, ಸೂಸಾನಾ ಸೇರಿದಂತೆ ಸ್ಕೌಟ್ಸ್‌ ಮತ್ತು ಗೈಡ್ಸ್‌ ತರಬೇತಿದಾರರು. ಕಲಬುರಗಿ, ರಾಯಚೂರು, ಯಾದಗಿರಿ, ಬೀದರ ಜಿಲ್ಲೆಗಳ ರೇಂಜರ್ ಹಾಗೂ ಗೈಡ್ಸ್‌ಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next