ರಾಯಬಾಗ: ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ಇದು ದೇಶಕ್ಕೆ ಮಾರಕವಾಗಿದ್ದು, ಇನ್ನು ಮುಂದೆ ರೈತರು ಗೋ ಕೃಪಾ ಕೃಷಿ ವಿಧಾನ ಅಳವಡಿಸಿಕೊಂಡು ಭೂಮಿ ಸತ್ವವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ರಾಸಾಯನಿಕ ಮುಕ್ತ ಬೆಳೆ ಬೆಳೆಯಬೇಕೆಂದು ಕೊಲ್ಹಾಪೂರ ಕನ್ಹೇರಿ ಸಿದ್ದಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀ ಹೇಳಿದರು.
ಬುಧವಾರ ರಾಯಬಾಗ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಸ್ಟೇಷನ್ ಹಿಲ್‌ದ ಅಭಾಜಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಪ್ಯಾನಪನೇಲಾ ಶುಗರ್ ಉದ್ಘಾಟನೆ ಸಮಾರಂಭ ಹಾಗೂ ಸಾವಯವ ಕೃಷಿ ಉತ್ಸವ ಮತ್ತು ದೇಶಿ ತಳಿ ಹಸುಗಳ ಸಂವರ್ಧನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ಕಬ್ಬು ಬೆಳೆಯುವ ರೈತರಿಗೆ ಅನುಕೂಲವಾಗುವಂತೆ ವರ್ಷದ 12 ತಿಂಗಳು ನಡೆಯುವ ರಾಸಾಯನಿಕ ಮುಕ್ತ ಬೆಲ್ಲದ ಘಟಕ ಪ್ರಾರಂಭಿಸುತ್ತಿರುವ ವಿವೇಕರಾವ್ ಪಾಟೀಲ ಅವರ ಪ್ರಯತ್ನ ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ವಿಷಯುಕ್ತ ಸಕ್ಕರೆ ಬದಲಾಗಿ ರಾಸಾಯನಿಕ ಮುಕ್ತ ಸಾವಯವ ಬೆಲ್ಲ ತಿನ್ನುವುದರಿಂದ ಮನುಷ್ಯನ ಎಲುವುಗಳು ಗಟ್ಟಿಯಾಗುತ್ತವೆ. ರೈತರು ಸಾವಯವ ಕೃಷಿ ಮಾಡಲು ಹೆಚ್ಚಿನ ಒತ್ತು ನೀಡಬೇಕು. ಜೊತೆಗೆ ಪ್ರತಿಯೊಬ್ಬ ರೈತನ ಮನೆಯಲ್ಲಿ ದೇಶಿ ಹಸು ಇರುವಂತೆ ನೋಡಿಕೊಳ್ಳಬೇಕು. ದೇಶಿ ಹಸುವಿನ ಸಗಣಿ ಮತ್ತು ಗೋಮೂತ್ರವನ್ನು ಮಿಶ್ರಣ ಮಾಡಿ ಭೂಮಿಗೆ ಹಾಕಿದರೆ, ಮಣ್ಣಿನಲ್ಲಿ ಜೀವಸತ್ವಗಳು ಹೆಚ್ಚಾಗಿ, ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಎಂದರು.
ನಮ್ಮ ದೇಶ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ದೇಶದ ರೈತರು ಸಾವಯವ ಕೃಷಿ ಮಾಡುವುದರೊಂದಿಗೆ ಸ್ವಾವಲಂಬಿಯಾಗಿ, ಸ್ವಾಭಿಮಾನಿಯಾಗಿ ಬದುಕಬೇಕು. ಇದರಿಂದ ದೇಶದ ಅಭಿವೃದ್ಧಿ ಜೊತೆಗೆ ದೇಶದ ಜನರ ಆರೋಗ್ಯ ಕೂಡ ಉತ್ತಮಗೊಳ್ಳುತ್ತದೆ ಎಂದರು.
ಬೆಳಗಾವಿ ಜಿಲ್ಲಾ ಕೆಎಂಎಫ್ ಅಧ್ಯಕ್ಷ ವಿವೇಕರಾವ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ| ವರ್ಷಾ ಪಾಟೀಲ, ಕೆಎಂಎಫ್ ಎಂಡಿ ಶ್ರೀನಿವಾಸ ಜಿ., ನಿರ್ದೇಶಕರಾದ ಎಸ್.ಎಸ್.ಮುಗಳಿ, ಅಪ್ಪಾಸಾಬ ಐತವಾಡೆ, ಕಲ್ಲಪ್ಪ ಗಿರಿನ್ನವ್ವರ, ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಬಾಬುರಾವ ವಾಘಮೋಡೆ, ಬಸಪ್ಪ ನನದಿ, ಎಸ್.ಆರ್.ಜಯಕುಮಾರ, ವಿ.ಕೆ. ಜೋಶಿ ಹಾಗೂ ಮುತ್ತೇಶ್ವರ ಸ್ವಾಮಿಜಿ, ಶಿವಶಂಕರ ಸ್ವಾಮಿಜಿ, ಶಿವಬಸವ ಸ್ವಾಮೀಜಿ ಇದ್ದರು.
ರೈತರಿಗೆ ಉಚಿತವಾಗಿ ಗೋ ಕೃಪಾಮೃತ ಹಂಚಲಾಯಿತು. ದೇಶಿ ತಳಿ ಹಸು ಮತ್ತು ಹೋರಿಗಳ ಪ್ರದರ್ಶನ ಹಾಗೂ ಸಾವಯವ ಕೃಷಿ ಮತ್ತು ಗೋ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು.