ಕಕ್ಕೇರಾ: ದಾಸ ಸಾಹಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಮನುಷ್ಯನ ಅಂತರಂಗ ಶುದ್ಧಿಯಾಗುತ್ತದೆ ಎಂದು ಕನಕ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಸಾಹಿತಿ ಸ್ವಾಮಿರಾವ್ ಕುಲಕರ್ಣಿ ಹೇಳಿದರು. ಹುಣಸಿಹೊಳೆ ಕಣ್ವಮಠದಲ್ಲಿ ನಡೆದ ವಿದ್ಯಾಭಾಸ್ಕರ್ ಶ್ರೀಪಾದಂಗಳ ತೃತೀಯ ಮಹಾಸಮಾರಾಧನೆ ಎರಡನೇ ದಿನದ ಕಾರ್ಯಕ್ರಮದದಲ್ಲಿ ಅವರು ಮಾತನಾಡಿ, ನಮ್ಮ ನಾಡಿನ ದಾಸ ಪರಂಪರೆಯಲ್ಲಿ ಇಲ್ಲಿಯವರೆಗೂ ಇಪ್ಪತ್ತೆರಡು ಜನ ಮಹಿಳೆಯರು ದಾಸ ಸಾಹಿತ್ಯಗಳಾಗಿ ದಾಸ ಪರಂಪರೆಯನ್ನು ಎತ್ತಿ ಹಿಡದಿದ್ದಾರೆ. ಮಹಿಳೆಯರು ಕೂಡ ಸಂಸ್ಕಾರ-ಸಂಸ್ಕೃತಿ ಎರಡನ್ನು ಉಳಿಸಿ ಬೆಳೆಸಿಕೊಂಡು ಬದುಕಿ ತೋರಿಸಿದ್ದಾರೆ ಎಂದು ಹೇಳಿದರು.
ಈ ಭಾಗದ ದಾಸವರೇಣ್ಯರು ನಾಡಿನ ದಾಸ ಸಾಹಿತ್ಯ ಸಂಸ್ಕೃತಿಯ ಜೀವಂತ ನದಿಯಾಗಿದ್ದಾರೆ. ಮನುಷ್ಯನ ಸರ್ವರೋಗಕ್ಕೂ ದಾಸರ ಹಾಡುಗಳು ದಿವ್ಯ ಔಷ ಧಿಗಳಾಗಿವೆ. ಹೀಗಾಗಿ ದಾಸ ಸಾಹಿತ್ಯ ಎಂದೆಂದಿಗೂ ಎಲ್ಲರಿಗೂ ಬಾಳು ಬೆಳಗುವ ಸಾಧನಗಳಾಗಿವೆ ಎಂದು ದಾಸ ಪರಂಪರೆ ಬಿಚ್ಚಿಟ್ಟರು.
ಡಾ| ಶೀಲಾದಾಸ ಯಾಜ್ಞವಲ್ಕರ ಕುರಿತು ಮಾತನಾಡಿ, ಮಹಿಳೆಯರು ಕೂಡ ಅಮೋಘ ಸಾಧನೆಯತ್ತ ಸಾಗುವ ಮೂಲಕ ಉನ್ನತವಾದ ಅಧ್ಯಯನಶೀಲರಾಗಬೇಕಿದೆ. ದಾಸ ಸಾಹಿತ್ಯವನ್ನು ಮಹಿಳೆಯರು ಅಪ್ಪಿಕೊಂಡು ದಾಸ ಸಾಹಿತ್ಯವನ್ನು ಉಳಿಸಿ ಬೆಳೆಸಿದಾಗ ದಾಸ ಸಾಹಿತ್ಯ ಮತ್ತಷ್ಟು ಗಟ್ಟಿಗೊಳಿಸಬಹುದು. ಹೀಗಾಗಿ ಮಹಿಳೆಯರು ದಾಸ ಸಾಹಿತ್ಯದ ಕಡೆಗೆ ಒಲವು ತೋರಿ ಸುಸಂಸ್ಕೃತ ಬದುಕು ನಡೆಸಬೇಕು ಎಂದು ಸಲಹೆ ನೀಡಿದರು. ಈ ವೇಳೆ ಸುರೇಖಾ ಕುಲಕರ್ಣಿ ಮಾತನಾಡಿದರು.
ಪುಸ್ತಕ ಬಿಡುಗಡೆ: ಚಂದುಬಾಯಿ ನಾಯಕ ಅವರು ಬರೆದಿರುವ ಕೀರ್ತನ ಕಲಶ, ಸುರೆಖಾ ಕುಲಕರ್ಣಿ ಅವರ ಕಾದಂಬರಿಕಾರನ ಕಾದಂಬರಿ ಗ್ರಂಥಗಳನ್ನು ಶ್ರೀ ವಿದ್ಯಾವಾರಿ ತೀರ್ಥ ಶ್ರೀಪಾದಂಗಳ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಯಾಜ್ಞವಲ್ಕ ಕೃಪಾ ಪತ್ರಿಕೆ ಸಂಪಾದಕ ಕೈವಾರ ಕೃಷ್ಣಮೂರ್ತಿ, ಅಖೀಲ ಭಾರತ ಕಣ್ವ ಪರಿಷತ್ ಮಾಜಿ ಅಧ್ಯಕ್ಷ ನಾಸಿಕ್‌ನ ಪ್ರಲ್ಹಾದ ಕುಲಕರ್ಣಿ, ಬೆಂಗಳೂರಿನ ಶುಕ್ಲಯಜು: ಟ್ರಸ್ಟ್ ಅಧ್ಯಕ್ಷೆ ವತ್ಸಲಾ ನಾಗೇಶ ಇದ್ದರು.