ಸಾಮಾನ್ಯವಾಗಿ ಕೈಕೊಟ್ಟು ಹೋದ ಹುಡುಗಿ ಬಗ್ಗೆ, ಲವ್ ಫೇಲ್ಯೂರ್ ಆದ ಹುಡುಗರ ಬಗ್ಗೆ ಕಥೆ ಹೇಳುವ ಲೆಕ್ಕವಿಲ್ಲದಷ್ಟು ಸಿನಿಮಾಗಳನ್ನು ನೀವು ನೋಡಿರುತ್ತೀರಿ. ವರ್ಷಕ್ಕೆ ಡಜನ್‌ಗಟ್ಟಲೆ ಬರುವ ಇಂಥ ಚಿತ್ರಗಳನ್ನು ನೋಡಿ ರೋಸಿ ಹೋಗಿರುವ ಪ್ರೇಕ್ಷಕರಿಗೆ, ಫಾರ್ ಎ ಚೇಂಜ್ ಅನ್ನುವಂತೆ, ಹುಡುಗಿಗೆ ಕೈ ಕೊಟ್ಟು ಹೋದ ಹುಡುಗನ ಕಥೆ ಹೇಳಿದ್ರೆ ಹೇಗಿರುತ್ತದೆ? ಇದು ಈ ವಾರ ತೆರೆಗೆ ಬಂದಿರುವ “ಗಂಟುಮೂಟೆ’ಯಲ್ಲಿರುವ ಗುಟ್ಟಿನ ವಿಷಯ!
ಗಾಂಧಿನಗರದಲ್ಲಿ ಮಾಮೂಲಿಯಾಗಿ ಹುಡುಗರ ಆಯಾಮದಲ್ಲಿ ಹೇಳುತ್ತಾ ಬಂದಿರುವ ಕಥೆಯನ್ನ, ಈ ಚಿತ್ರದಲ್ಲಿ ಹುಡುಗಿಯ ಆಯಾಮದಲ್ಲಿ ಹೇಳಿದ್ದಾರೆ ನಿರ್ದೇಶಕಿ ರೂಪಾ ರಾವ್. ಹಾಗಾಗಿ ಆಯಾಮ ಬದಲಾದರೂ ಪ್ರೇಕ್ಷಕರು ನೋಡುವ ಕಥಾವಸ್ತುವಿನಲ್ಲಿ ಯಾವುದೇ ಬದಲಾವಣೆ ಇಲ್ಲ! ಹಾಗಂತ “ಗಂಟುಮೂಟೆ’ ಮಹಿಳಾ ಪ್ರಧಾನ ಚಿತ್ರ ಅಂತಾನೋ, ಹೆಣ್ಣು ಮಕ್ಕಳ ಶೋಷಣೆ ಬಗ್ಗೆ ಹೇಳುವಂಥ ಚಿತ್ರನೋ ಅಂದುಕೊಳ್ಳುವಂತಿಲ್ಲ.
ಇಲ್ಲಿ ಹರೆಯದ ವಯಸ್ಸಿನ ಹಸಿ-ಬಿಸಿ ಬಯಕೆಗಳಿವೆ, ತುಮುಲ-ತೊಳಲಾಟವಿದೆ. ಅವೆಲ್ಲದರ ಜೊತೆ ಪುಟಿದೇಳುವ ಉತ್ಕಟ ಪ್ರೀತಿಯೂ ಇದೆ. ಅದೆಲ್ಲವನ್ನೂ ಹುಡುಗಿಯೊಬ್ಬಳು ತನ್ನ ಕಣ್ಣಿನಲ್ಲೇ ಹೇಳುತ್ತಾ ಹೋಗುತ್ತಾಳೆ. ಕೆಲವೊಮ್ಮೆ ಮೌನ ಮಾತಾದರೆ, ಮತ್ತೆ ಕೆಲವೊಮ್ಮೆ ಪಿಸು ಮಾತುಗಳೇ ಮೌನವನ್ನು ಅಲಂಕರಿಸಿ ಬಿಡುತ್ತವೆ. ಅದೆಲ್ಲವನ್ನು ಅನುಭವಕ್ಕೆ ತಂದುಕೊಳ್ಳುವ ಮನಸ್ಸಿದ್ದರೆ “ಗಂಟುಮೂಟೆ’ಯಲ್ಲಿ ಏನಿದೆ ಅಂಥ ನೋಡುವ ಪ್ರಯತ್ನ ಮಾಡಬಹುದು.
“ಗಂಟುಮೂಟೆ’ ಚಿತ್ರದ ಕಥೆಯಲ್ಲಿ ಹೊಸತನ ಇಲ್ಲದಿದ್ದರೂ, ನಿರೂಪಣೆಯಲ್ಲಿ ತಾಜಾತನವಿದೆ. 90ರ ದಶಕದ ಹಿನ್ನೆಲೆಯಲ್ಲಿ ಹರೆಯದ ಮನಸ್ಸುಗಳ ಗುಸು-ಗುಸು, ಪಿಸು-ಪಿಸು ಚಿತ್ರವನ್ನು ನೋಡಿಸಿಕೊಂಡು ಹೋಗುತ್ತದೆ. ಕೆಲ ತರ್ಕಕ್ಕೆ ನಿಲುಕದ ಸಂಗತಿಗಳಿದ್ದರೂ, ಅವುಗಳ ಬಗ್ಗೆ ಹೆಚ್ಚು ಚರ್ಚಿಸದೆ ಮುಂದೆ ಹೋಗಬೇಕಾಗುತ್ತದೆ. ಇಲ್ಲದಿದ್ದರೆ “ಗಂಟುಮೂಟೆ’ ನಿಮ್ಮನ್ನು ಬಿಟ್ಟು ಇನ್ನಷ್ಟು ಮುಂದೆ ಹೋಗಿರುತ್ತದೆ.
ನಿರ್ದೇಶಕರು ಇನ್ನಷ್ಟು ವಾಸ್ತವ ಸಂಗತಿಗಳತ್ತ ಗಮನ ಹರಿಸಿದ್ದರೆ, “ಗಂಟುಮೂಟೆ’ ಪ್ರೇಕ್ಷಕರಿಗೆ ಇನ್ನೂ ಹತ್ತಿರವಾಗುವ ಸಾಧ್ಯತೆಗಳಿದ್ದವು. ಇನ್ನು ಇಡೀ ಚಿತ್ರದಲ್ಲಿ ನಟಿ ತೇಜು ಬೆಳವಾಡಿ ತನ್ನ ಅಭಿನಯದಲ್ಲಿ ಇಷ್ಟವಾಗುತ್ತಾರೆ. ಪಾತ್ರಕ್ಕಾಗಿ ತೇಜು ತೆರೆದುಕೊಂಡ ರೀತಿ, ಹಾವ-ಭಾವ ಎಲ್ಲದಕ್ಕೂ ತೇಜು ಫುಲ್‌ಮಾರ್ಕ್ಸ್ ಪಡೆದುಕೊಳ್ಳುತ್ತಾರೆ. ನಟ ನಿಶ್ಚಿತ್ ಕರೋಡಿ ಕೂಡ ಉತ್ತಮ ಅಭಿನಯ ನೀಡಿದ್ದಾರೆ.
ಇತರ ಕಲಾವಿದರು ಅಚ್ಚುಕಟ್ಟಾಗಿ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನು ಚಿತ್ರದ ಛಾಯಾಗ್ರಹಣ ಚೆನ್ನಾಗಿದೆ. ಸಂಕಲನ ಕಾರ್ಯಕ್ಕೆ ಇನ್ನಷ್ಟು ಗಮನ ಕೊಡಬಹುದಿತ್ತು. ಹಾಡುಗಳು ಗುನುಗುವಂತೆ ಇಲ್ಲದಿದ್ದರೂ, ಹಿನ್ನೆಲೆ ಸಂಗೀತ ಅಲ್ಲಲ್ಲಿ ಗಮನ ಸೆಳೆಯುತ್ತದೆ. ಒಟ್ಟಾರೆ ಕೆಲ ಲೋಪ-ದೋಷಗಳನ್ನು ಬದಿಗಿಟ್ಟು ನೋಡುವುದಾದರೆ, “ಗಂಟುಮೂಟೆ’ ಒಂದೊಳ್ಳೆ ಪ್ರಯತ್ನ ಎನ್ನಲು ಅಡ್ಡಿಯಿಲ್ಲ.
ಚಿತ್ರ: ಗಂಟುಮೂಟೆ
ನಿರ್ಮಾಣ: ಸಹದೇವ್ ಕೆಲವಡಿ
ನಿರ್ದೇಶನ: ರೂಪಾರಾವ್
ತಾರಾಗಣ: ತೇಜು ಬೆಳವಾಡಿ, ನಿಶ್ಚಿತ್ ಕರೋಡಿ, ಭಾರ್ಗವ್ ರಾಜು, ಶರತ್ ಗೌಡ, ಸೂರ್ಯ ವಸಿಷ್ಠ, ಶ್ರೀರಂಗ ಮತ್ತಿತರರು.
* ಜಿ.ಎಸ್.ಕಾರ್ತಿಕ ಸುಧನ್