Advertisement
ನರಸಾಪುರದಲ್ಲಿ ಚಾಲನೆ: ಕೋಲಾರ ತಾಲೂಕಿನ ನರಸಾಪುರ ಪಬ್ಲಿಕ್ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಬೋಧನೆ ತರಗತಿಗಳನ್ನು ವಿದ್ಯುಕ್ತವಾಗಿ ಉದ್ಘಾಟಿಸಲು ಶಿಕ್ಷಣ ಇಲಾಖೆಯು ಸಿದ್ಧತೆ ನಡೆಸಿದೆ. ಜಿಪಂ ಸಿಇಒ ಜೆ.ಜಗದೀಶ್ ಸಾಂಕೇತಿಕವಾಗಿ ಮಗುವನ್ನು ಆಂಗ್ಲ ಮಾಧ್ಯಮಕ್ಕೆ ದಾಖಲಾತಿ ಮಾಡಿಕೊಳ್ಳುವ ಮೂಲಕ ಉದ್ಘಾಟಿಸಲಿದ್ದಾರೆ.
Related Articles
Advertisement
ಪೋಷಕರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ: ಆಂಗ್ಲ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸುವಂತೆ ಪೋಷಕರಿಗೆ ಮಾಹಿತಿ ನೀಡುವ ಸಲುವಾಗಿ ಆಯಾ ಶಾಲಾ ವ್ಯಾಪ್ತಿಯಲ್ಲಿ ಜಾಥಾಗಳನ್ನು ನಡೆಸಲಾಗಿದೆ. ಶಾಲೆಯಲ್ಲಿ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಕರಪತ್ರಗಳನ್ನು ಮನೆ ಮನೆಗೂ ಹಂಚಲಾಗಿದೆ. ಪೋಷಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಡಿಡಿಪಿಐ ಕೆ.ರತ್ನಯ್ಯ ವಿವರಿಸುತ್ತಾರೆ.
ಸೌಲಭ್ಯಗಳೇನು?: ಆಂಗ್ಲ ಮಾಧ್ಯಮ ತರಗತಿಗಳಿಗೆ ಸದ್ಯಕ್ಕೆ ವಿಶೇಷ ಸೌಲಭ್ಯಗಳೇನು ಕಲ್ಪಿಸಲಾಗುತ್ತಿಲ್ಲ. ಆದರೂ, ಆಂಗ್ಲ ಮಾಧ್ಯಮ ಬೋಧನೆಯ ಪಠ್ಯ ಪುಸ್ತಕಗಳನ್ನು ಒಂದು ವಾರದೊಳಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳಾದ ಸಮವಸ್ತ್ರ, ಬಿಸಿಯೂಟ, ಪಠ್ಯಪುಸ್ತಕಗಳು ಸಂಪೂರ್ಣ ಉಚಿತವಾಗಿಯೇ ಸಿಗಲಿದೆ. ಆಂಗ್ಲ ಮಾಧ್ಯಮ ಬೋಧನೆಗೆ ಯಾವುದೇ ರೀತಿಯ ಪ್ರತ್ಯೇಕ ಪ್ರವೇಶಾತಿ ಶುಲ್ಕಗಳನ್ನು ಮತ್ತು ಡೊನೇಷನ್ ವಿಧಿಸದೆ ಸಂಪೂರ್ಣ ಉಚಿತವಾಗಿಯೇ ಶಿಕ್ಷಣ ನೀಡಲಾಗುವುದು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ಸುಮಾರು 94 ಸಾವಿರ ಮಕ್ಕಳಿಗೆ ಸ್ಯಾಮಸಂಗ್ ಕಂಪನಿಯಿಂದ ಉಚಿತ ನೋಟ್ಪುಸ್ತಕಗಳನ್ನು ವಿತರಿಸಲಾಗುತ್ತಿದ್ದು, ಇದು ಆಂಗ್ಲ ಮಾಧ್ಯಮ ಮಕ್ಕಳಿಗೂ ಸಿಗಲಿದೆ.
ಎಷ್ಟು ಮಕ್ಕಳಿಗೆ ಪ್ರವೇಶ: ಆರಂಭಿಕವಾಗಿ ಎಲ್ಕೆಜಿಗೆ 30 ಮಕ್ಕಳಿಗೆ ಮತ್ತು ಒಂದನೇ ತರಗತಿಗೆ 30 ಮಕ್ಕಳಿಗೆ ಮಾತ್ರವೇ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಇದನ್ನು ಮೀರಿ ಮಕ್ಕಳು ಆಂಗ್ಲ ಮಾಧ್ಯಮಕ್ಕೆ ಸೇರಲು ಬಂದರೆ ಅಂತ ಶಾಲೆಗಳ ಮುಖ್ಯೋಪಾಧ್ಯಾಯರು ಆಂಗ್ಲ ಮಾಧ್ಯಮಕ್ಕೆ ಪ್ರಸ್ತಾಪನೆ ಕಳುಹಿಸಬಹುದಾಗಿದೆ. ಇದನ್ನು ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳ ಗಮನಕ್ಕೆ ತಂದು ಪರವಾನಗಿ ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ 24 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲಾಗುತ್ತಿದ್ದು, ಪ್ರತಿ ಶಾಲೆಗೂ 30 ರಂತೆ ತಲಾ 720 ಮಂದಿ ಒಂದನೇ ತರಗತಿ, ಎಲ್ಕೆಜಿಗೂ ಪ್ರವೇಶ ಪಡೆಯಲು ಅವಕಾಶವಿದೆ.
ಅಭೂತ ಪೂರ್ವ ಸ್ವಾಗತ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಂಗ್ಲ ಮಾಧ್ಯಮ ತರಗತಿಗಳು ಸಹಕಾರಿಯಾಗಲಿವೆ ಎಂಬ ಭಾವನೆ ಶಿಕ್ಷಕರವಲಯದಲ್ಲಿ ಮೂಡಿದೆ. ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭವಾಗುತ್ತಿರುವುದು ಈ ಭಾಗದ ಖಾಸಗಿ ಶಾಲೆಗಳ ದಾಖಲಾತಿ ಮೇಲೆ ಪರಿಣಾಮ ಬೀರುವುದರಿಂದ ಪೊಷಕರಿಂದ ವಿಪರೀತ ಡೊನೇಷನ್ ವಸೂಲು ಮಾಡುತ್ತಿದ್ದ ಖಾಸಗಿ ಶಾಲಾ ಆಡಳಿತ ಮಂಡಳಿಗಳಲ್ಲಿ ಆತಂಕಕ್ಕೂ ಕಾರಣವಾಗಿದೆ. ಒಟ್ಟಾರೆ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆ ಆರಂಭವಾಗುತ್ತಿರುವುದು ಕೆಲವರ ವಿರೋಧದ ನಡುವೆಯೂ ಪೋಷಕರ ವಲಯದಲ್ಲಿ ಅಭೂತಪೂರ್ವ ಸ್ವಾಗತ ಕಂಡು ಬಂದಿದೆ.
● ಕೆ.ಎಸ್.ಗಣೇಶ್