Advertisement

Karnataka ಹಿಂದಿ ಪ್ರಚಾರ ಸಭೆಗೆ ಆಡಳಿತಾಧಿಕಾರಿ ನೇಮಕ:ಏನಿದು ಗದ್ದುಗೆ ಗುದ್ದಾಟ?

08:50 PM Dec 29, 2023 | Team Udayavani |

ಧಾರವಾಡ : ಕಳೆದ ಐದು ವರ್ಷಗಳಿಂದ ಸಾಕಷ್ಟು ವಾದ-ವಿವಾದಗಳಿಗೆ ಕಾರಣವಾಗಿದ್ದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ (ಕರ್ನಾಟಕ) ಧಾರವಾಡ ಸಂಘದ ಆಡಳಿತ ಮಂಡಳಿಯ ವಿಷಯದಲ್ಲಿ ಇದೀಗ ರಾಜ್ಯ ಸರಕಾರವು ಮಧ್ಯ ಪ್ರವೇಶಿಸಿದ್ದು, ನೂತನ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿದೆ.

Advertisement

ಈ ಆದೇಶ ಹೊರಡಿಸಿದ ಬೆನ್ನಲ್ಲೆ ಧಾರವಾಡದ ಉಪವಿಭಾಗಾಧಿಕಾರಿ ಶಾಲಮ್ ಹುಸೇನ್ ಅವರು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಹಿಂದಿ ಪ್ರಚಾರ ಸಭೆಯ ಆಡಳಿತಾಧಿಕಾರಿಯಾಗಿ ಶುಕ್ರವಾರ ಮಧ್ಯಾಹ್ನವೇ ಅಧಿಕಾರ ಸ್ವೀಕರಿಸಿದ್ದಾರೆ.

ಈ ಆದೇಶದ ದಿನಾಂಕದಿಂದ ಮುಂದಿನ ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಆಡಳಿತಾಧಿಕಾರಿಯು ಕೂಡಲೇ ಸಂಘದ ಪ್ರಭಾರವನ್ನು ವಹಿಸಿಕೊಳ್ಳುವಂತೆ ಸೂಚಿಸಲಾಗಿದೆ. ಇದಲ್ಲದೇ ಉಚ್ಚ ನ್ಯಾಯಾಲಯದ ಆದೇಶದಂತೆ ಹಾಗೂ ಸಂಘದ ಉಪನಿಯಮಗಳ ಅನ್ವಯ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಸಹಕಾರ ಇಲಾಖೆಯ ಸರಕಾರದ ಅಧಿನ ಕಾರ್ಯದರ್ಶಿ ರಂಗನಾಥ.ಜಿ. ಆದೇಶಿಸಿದ್ದಾರೆ.

ಏನಿದು ಗದ್ದುಗೆ ಗುದ್ದಾಟ ?
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಧಾರವಾಡದ ವಾರ್ಷಿಕ ಮಹಾಸಭೆಯಲ್ಲಿ 2020 ರಿಂದ ಐದು ವರ್ಷಗಳ ಅವಧಿಗೆ2019 ಡಿ.18ರಂದು ಚುನಾವಣೆ ನಡೆದಿತ್ತು. ಆದರೆ ಈ ಚುನಾವಣೆ ಕೇಂದ್ರ ಸಭಾದ ಉಪನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಚುನಾವಣೆಯನ್ನು ರದ್ದುಪಡಿಸಿ, ಪ್ರಾಂತೀಯ ಸಭಾದ ಸಂಪೂರ್ಣ ಆಡಳಿತವನ್ನು ಕೇಂದ್ರ ಸಭಾ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಸಂಘದ ಪದಾಧಿಕಾರಿಗಳಿಗೆ ಯಾವುದೇ ಆಡಳಿತಾತ್ಮಕ, ಹಣಕಾಸಿನ ಅಧಿಕಾರಗಳನ್ನು ಚಲಾಯಿಸುವ ಹಕ್ಕಿಲ್ಲ ಎಂದು ಆದೇಶಿಸಿತ್ತು. ಅಷ್ಟೇಯಲ್ಲ, ಸಂಘದ ಎಲ್ಲ ಆಡಳಿತವನ್ನು ನೋಡಿಕೊಳ್ಳಲು ವಿಶೇಷ ಕಾರ್ಯದರ್ಶಿಗಳನ್ನಾಗಿ ಪ್ರೊ.ಎಸ್.ಬಿ.ಹಿಂಚಿಗೇರಿ ಹಾಗೂ ಅವರಿಗೆ ಮೂರು ಜನ ಸಲಹೆಗಾರರನ್ನು ನೇಮಿಸಲಾಗಿತ್ತು. ಆದರೆ ಕೇಂದ್ರ ಸಭಾದ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಸಂಘದ ಕೆಲ ಸದಸ್ಯರು ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಹೈಕೋರ್ಟ್ ಪೀಠವು 2022 ಡಿ.16 ರಂದು ಅಂತಿಮ ಆದೇಶ ನೀಡಿ, ಸಂಘದ ಆಡಳಿತ ಮಂಡಳಿಗೆ ನಿಗದಿತ ಕಾಲಾವಧಿಯೊಳಗೆ ಚುನಾವಣೆ ಜರುಗಿಸುವಂತೆ ಸೂಚಿಸಿತ್ತು. ಆದರೆ ಚುನಾವಣೆ ನಡೆಯಲೇ ಇಲ್ಲ.ಇದನ್ನು ಸಂಘದ ಸದಸ್ಯರಾದ ರಾಯಪ್ಪ ಪುಡಕಲಕಟ್ಟಿ ಮತ್ತು ಮಲ್ಲಪ್ಪ ಪುಡಕಲಕಟ್ಟಿ ಅವರು ಪ್ರಶ್ನಿಸಿ, ಹೈಕೋರ್ಟ್ ಆದೇಶ ಪಾಲನೆ ಮಾಡದೇ ಇರುವವರ ವಿರುದ್ಧ ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸಿ, ಆಡಳಿತಾಧಿಕಾರಿ ನೇಮಿಸಲು ಮನವಿ ಮಾಡಿಕೊಂಡಿದ್ದರು.

ಈ ಎಲ್ಲ ಅಂಶಗಳನ್ನು ಪರಿಶೀಲಿಸಿದ ಹೈಕೋರ್ಟ್ ಸಂಘದ ಸದಸ್ಯರ ಹಿತಾಸಕ್ತಿಯಿಂದ, ಸಂಘದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದ್ಯಾ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಮತ್ತು ಸಂಘದ ಹಿತದೃಷ್ಟಿಯಿಂದ ಚುನಾವಣೆ ನಡೆಸಿ, ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರ ಮಾಡಲು ಆಡಳಿತಾಧಿಕಾರಿಯನ್ನು ನೇಮಿಸಿದೆ.

Advertisement

ವಿನಯ್ ಮತ್ತು ಜೋಶಿ ತೆರೆಮರೆ ಗುದ್ದಾಟ
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಅಧಿಕಾರಕ್ಕಾಗಿ ಮಾಜಿ ಸಚಿವ, ಶಾಸಕ ವಿನಯ್ ಕುಲಕರ್ಣಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಬೆಂಬಲಿಗರ ಮಧ್ಯೆ ಕಳೆದ ಮೂರ್‍ನಾಲ್ಕು ವರ್ಷಗಳಿಂದಲೂ ತೆರೆಮರೆಯಲ್ಲೇ ತಿಕ್ಕಾಟವಿತ್ತು. ಆದರೆ ನಂತರ ಸಚಿವ ಜೋಶಿ ಬೆಂಬಲಿಗರಾದ ಈರೇಶ ಅಂಚಟಗೇರಿ ಅವರು ಮಹಾಸಭೆ ಅಧ್ಯಕ್ಷರಾಗಿದ್ದರು. ಇದೀಗ ಸರ್ಕಾರ ಆಡಳಿತಾಧಿಕಾರಿ ನೇಮಿಸಿ ಚುನಾವಣೆಗೆ ಸೂಚಿಸಿದೆ. ಈಗ ಮುಂದೆ ನಡೆಯುವ ಚುನಾವಣೆಯಲ್ಲಿ ಯಾರ ಮೇಲುಗೈ ಎಂಬುದನ್ನು ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next