ಹಳಿಯಾಳ: ಕಳೆದ ಐದಕ್ಕೂ ಅಧಿಕ ವರ್ಷಗಳಿಂದ ಹಳಿಯಾಳ ತಾಪಂ ಸಿಬ್ಬಂದಿ ಕೊರತೆ ಅನುಭವಿಸುತ್ತಿದ್ದು ಸರ್ಕಾರದಿಂದ ಮಂಜೂರಾದ 25 ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಕೇವಲ ಮೂವರು ಸಿಬ್ಬಂದಿ ಮಾತ್ರ ಅಲ್ಲದೆ ಇಲಾಖಾ ಮುಖ್ಯಸ್ಥರು ಸೇರಿ 21 ಜನರು ಹೆಚ್ಚುವರಿ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಮಾತ್ರ ರಾಜಕೀಯ ಹಾಗೂ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಕುಸ್ತಿಯ ತವರೂರು, ಭತ್ತದ ಕಣಜ ಎಂದೆಲ್ಲ ಹೆಸರಾಗಿದ್ದ ಹಳಿಯಾಳ ರಾಜಕಾರಣದಲ್ಲೂ ಅಷ್ಟೇ ಪ್ರಸಿದ್ಧಿ ಪಡೆದಿರುವ ಕ್ಷೇತ್ರವಾಗಿದ್ದು ರಾಜ್ಯದ ಪ್ರಭಾವಿ ಶಾಸಕ ಆರ್.ವಿ. ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಕ್ಲೃಕರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಸೇರಿದಂತೆ ಘಟಾನುಘಟಿ ನಾಯಕರು ಇದ್ದರು. ಈವರೆಗೆ ಹಳಿಯಾಳ ತಾಪಂ ಸಿಬ್ಬಂದಿ ಸಮಸ್ಯೆ ನೀಗಿಸಲು ಯಾರು ಇಚ್ಛಾಶಕ್ತಿ ತೋರದೆ ಇರುವುದು ದೌರ್ಭಾಗ್ಯದ ಸಂಗತಿಯಾಗಿದೆ.
ಹಳಿಯಾಳ ತಾಪಂನಲ್ಲಿ ಸರ್ಕಾರದಿಂದ ಮಂಜೂರಾದ ಒಟ್ಟು 25 ಹುದ್ದೆಗಳಿವೆ. ಸದ್ಯ ಕಾರ್ಯನಿರ್ವ ಹಿಸುತ್ತಿರುವವರು- ಓರ್ವ ಕಿರಿಯ ಇಂಜೀನಿಯರ್, ಓರ್ವ ಸಹಾಯಕ ನಿರ್ದೇಶಕರು -ಉದ್ಯೋಗ ಖಾತ್ರಿ ಹಾಗೂ ಒಬ್ಬ ಡಿ ದರ್ಜೆ ನೌಕರ ಮಾತ್ರ. ಕಳೆದ 5ಕ್ಕೂ ಅಧಿಕ ವರ್ಷಗಳಿಂದ ಈ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಈ ಬಗ್ಗೆ ಅರಿವಿರುವ ಅಧಿಕಾರದಲ್ಲಿದ್ದ ಯಾವುದೇ ಜನಪ್ರತಿನಿಧಿಗಳು ತಾ.ಪಂ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಸಿಬ್ಬಂದಿ ಕೊರತೆಯ ಬಗ್ಗೆ ಜಿಲ್ಲಾಡಳಿತದ ಗಮನಕ್ಕಿದ್ದರೂ ಹುದ್ದೆ ಭರ್ತಿ ಮಾಡಲು ಜಿಲ್ಲಾಡಳಿತವು ಮುಂದೆ ಬರುತ್ತಿಲ್ಲ ಎನ್ನಲಾಗುತ್ತಿದೆ.
ತಾಪಂನಲ್ಲಿ ಅಭಿವೃದ್ಧಿ ವಿಭಾಗ, ಲೆಕ್ಕ ವಿಭಾಗ ಹಾಗೂ ಯೋಜನಾ ವಿಭಾಗ ಎಂದು ಮೂರು ವಿಭಾಗಗಳಿದ್ದು ಒಟ್ಟೂ 25 ಹುದ್ದೆಗಳಿದ್ದು ಇವುಗಳಲ್ಲಿ ಮೂವರನ್ನು ಬಿಟ್ಟರೆ ತಾಪಂ ಇಓ ಸೇರಿದಂತೆ 21 ಜನರು ವಿವಿಧ ಇಲಾಖೆಗಳಿಂದ ಹೆಚ್ಚುವರಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ತಾಪಂ ಇಒ ಡಾ| ಮಹೇಶ ಕುರಿಯವರ ಅವರದ್ದು ಪಶು ವೈದ್ಯ ಮತ್ತು ಪಶು ಸಂಗೋಪನಾ ಇಲಾಖೆ ಮಾತೃ ಇಲಾಖೆಯಾಗಿದ್ದು ಅವರು ಕೂಡ ಕಳೆದ ಒಂದೂವರೆ ವರ್ಷದಿಂದ ಹಳಿಯಾಳ ತಾಪಂ ಇಓ ಆಗಿ ಹೆಚ್ಚುವರಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಳಿಯಾಳ ತಾಪಂಗೆ ಅನಿರ್ಬಂಧಿತ-ಶಾಸನ ಬದ್ಧ ಅನುದಾನ 1 ಕೋಟಿ ಹಾಗೂ 13 ಲಕ್ಷ ರೂ. ಮುದ್ರಾಂಕ ಶುಲ್ಕವೆಂದು ಪ್ರತಿವರ್ಷ ಸರ್ಕಾರದಿಂದ ಅನುದಾನ ಬರುತ್ತದೆ. ಮಾತ್ರವಲ್ಲದೇ ವಿವಿಧ ಯೋಜನೆಗಳ ಹೆಸರಿನಲ್ಲಿಯೂ ಲಕ್ಷಾಂತರ ರೂ. ಅನುದಾನ ಹರಿದು ಬರುತ್ತದೆ. ತಾಲೂಕಿನ ಅಭಿವೃದ್ಧಿ ದೃಷ್ಠಿಯಿಂದ ಆಡಳಿತಾತ್ಮಕವಾಗಿ ಸರಿಯಾಗಿದ್ದರೇ ಮಾತ್ರ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಇರುತ್ತದೆ ಎಂಬುದು ಅಷ್ಟೇ ಸತ್ಯವಾಗಿರುವುದರಿಂದ ಸಿಬ್ಬಂದಿ ನೇಮಕ ಶೀಘ್ರ ಆಗಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಆದರೆ ಇದಕ್ಕೆ ಆಡಳಿತದಲ್ಲಿರುವವರು ಮಾತ್ರ ತಲೆ ಕೆಡಿಸಿಕೊಳ್ಳದಿರುವುದು ಬೇಸರದ ಸಂಗತಿಯಾಗಿದೆ.
-ಯೋಗರಾಜ ಎಸ್.ಕೆ