ಹುಬ್ಬಳ್ಳಿ: ಕಿಮ್ಸ್‌ನಲ್ಲಿ ಎಂಬಿಬಿಎಸ್ ಸೀಟ್‌ಗಳ ಸಂಖ್ಯೆ 150ರಿಂದ 200ಕ್ಕೆ ಹೆಚ್ಚಿದೆ. ಹೆಚ್ಚುವರಿ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಿಮ್ಸ್ ನೂತನ ಆಡಳಿತ ಭವನವನ್ನೇ ಬೋಧನೆ ಹಾಗೂ ಪರೀಕ್ಷಾ ಕೇಂದ್ರವಾಗಿ ಪರಿವರ್ತಿಸುವ ಮೂಲಕ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಲಾಗಿದೆ.
ಅಂದಾಜು 17 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ನೂತನ ಆಡಳಿತ ಭವನವನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೋಧನೆ, ತರಬೇತಿ ಹಾಗೂ ಪರೀಕ್ಷೆಗೆ ಬಳಸಲು ಕಿಮ್ಸ್ ನಿರ್ದೇಶಕರು ನಿರ್ಧರಿಸಿದ್ದಾರೆ. ಕಿಮ್ಸ್‌ನ ಮುಖ್ಯ ಕಟ್ಟಡದಲ್ಲಿ ತಲಾ 75 ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದಾದ ಎರಡು ಟ್ಯುಟೋರಿಯಲ್‌ಗಳು ಮಾತ್ರ ಇವೆ. ಆದರೆ 200 ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಲು ಮೂರನೇ ಟ್ಯುಟೋರಿಯಲ್ ಅವಶ್ಯಕತೆಯಿತ್ತು. ಅಲ್ಲದೆ ಕಿಮ್ಸ್‌ನ ಮುಖ್ಯ ಕಟ್ಟಡದಲ್ಲಿ ಈಗಾಗಲೇ ನಿರ್ದೇಶಕರ, ಪ್ರಾಂಶುಪಾಲರ, ಆಡಳಿತಾಧಿಕಾರಿ ಚೇಂಬರ್ ಹಾಗೂ ಸಿಬ್ಬಂದಿ ಕಚೇರಿಯಿದ್ದು, ಅವನ್ನೇ ಮುಂದುವರಿಸಿಕೊಂಡು ಹೋಗಲು ನಿರ್ದೇಶಕರು ಮುಂದಾಗಿದ್ದಾರೆ.
ಅಗತ್ಯಕ್ಕೆ ತಕ್ಕಂತೆ ಪರಿವರ್ತನೆ: ವಿದ್ಯಾರ್ಥಿಗಳಿಗೆ ಬಳಕೆಯಾಗುವಂತೆ ಆಡಳಿತ ಭವನವನ್ನು ಅಗತ್ಯ ರೀತಿಯಲ್ಲಿ ಪರಿವರ್ತಿಸಲಾಗಿದೆ. ಅಲ್ಲಿ ಎಲ್ಲ ವಿಭಾಗದ ಟ್ಯುಟೋರಿಯಲ್ಸ್ ರೂಮ್, ವಿದ್ಯಾರ್ಥಿಗಳ ರೂಮ್, ವಿದ್ಯಾರ್ಥಿಗಳ ವಿಶ್ರಾಂತಿ ಕೊಠಡಿ ಹಾಗೂ ಒಂದೇ ಬಾರಿಗೆ 375 ವಿದ್ಯಾರ್ಥಿಗಳಿಗೆ ಬೋಧನೆ ಮಾಡಬಹುದಾದಂತಹ ಲೆಕ್ಚರ್ ಹಾಲ್ ಹಾಗೂ 400 ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಬಹುದಾದಂತಹ ಎರಡು ಪ್ರತ್ಯೇಕ ಪರೀಕ್ಷಾ ಕೊಠಡಿ ರೂಪಿಸಲಾಗಿದೆ.
ಕಿಮ್ಸ್‌ನಲ್ಲಿ ಅಂದಾಜು 16.90 ಕೋಟಿ ವೆಚ್ಚದಲ್ಲಿ ನೂತನವಾಗಿ ಅಡ್ಮಿನಿಸ್ಟ್ರೇಶನ್ ಬ್ಲಾಕ್ ನಿರ್ಮಿಸಲು ಆರಂಭಿಸಲಾಗಿತ್ತು. ಆದರೆ ಕಾರಣಾಂತರಗಳಿಂದ 2011ರಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. 2015ರಲ್ಲಿ ಡಾ| ಡಿ.ಡಿ. ಬಂಟ್ ಅವರು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಕಾಮಗಾರಿ ಗುತ್ತಿಗೆದಾರರು, ಗೆಜೆಟೆಡ್ ಅಧಿಕಾರಿಗಳು ಹಾಗೂ ಇನ್ನಿತರೆ ಕಟ್ಟಡಗಳ ಗುತ್ತಿಗೆದಾರರೊಂದಿಗೆ ಚರ್ಚಿಸಿ, ಅವರೆಲ್ಲರಿಗೆ ಮನವರಿಕೆ ಮಾಡಿ 2011ರಲ್ಲಿನ ಎಂಒವಿ ಪ್ರಕಾರ ನಿರ್ಮಿಸಿಕೊಡಬೇಕೆಂದು ಹೇಳಿದ್ದರಿಂದ ಅದಕ್ಕೆ ಅವರು ಒಪ್ಪಿಕೊಂಡು ಅಡ್ಮಿನಿಸ್ಟ್ರೇಶನ್ ಬ್ಲಾಕ್ ನಿರ್ಮಿಸಿಕೊಟ್ಟಿದ್ದಾರೆ. ಇದರಿಂದಾಗಿ ಅಂದಾಜು 7-8 ಕೋಟಿ ರೂ. ಉಳಿತಾಯವಾಗಿದೆ.
ದೆಹಲಿಯಿಂದ ಎಂಸಿಐನ ವಿಶೇಷ ತಂಡ ಕಿಮ್ಸ್‌ಗೆ ಬಂದು 200 ಎಂಬಿಬಿಎಸ್ ಸೀಟ್‌ಗಳಿಗೆ ಅವಶ್ಯವಾದ ಮೂರು ಟ್ಯುಟೋರಿಯಲ್ಸ್ ಹಾಗೂ ಇನ್ನಿತರೆ ಮೂಲಸೌಲಭ್ಯಗಳನ್ನು ಪರಿಶೀಲಿಸಿ ಮಂಜೂರಾತಿ ನೀಡಿದೆ. ಎಂಸಿಐ ಕಿಮ್ಸ್‌ಗೆ 200 ಎಂಬಿಬಿಎಸ್ ಸೀಟ್‌ಗಳ ಪರವಾನಗಿಯನ್ನು 2018-19ನೇ ಸಾಲಿಗೆ ಕೊಡುವುದನ್ನು ಒಂದು ವರ್ಷ ಮುಂಚಿತವಾಗಿಯೇ ನೀಡಿದೆ. ಈಗಾಗಲೇ ಅಡ್ಮಿನಿಸ್ಟ್ರೇಶನ್ ಬ್ಲಾಕ್‌ನಲ್ಲಿ ಪರಿವರ್ತನೆಗೊಳಿಸಲಾದ ಪ್ರತಿ ಕೊಠಡಿಗಳಲ್ಲಿ 75 ಚೇರ್, ಎಲ್‌ಸಿಡಿ, ಟೀಚಿಂಗ್ ಮಟಿರಿಯಲ್ಸ್ ಅಳವಡಿಸಲಾಗಿದೆ ಹಾಗೂ ಎರಡು ವರ್ಷದಿಂದ ನಿರಂತರವಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಕಿಮ್ಸ್‌ಗೆ ಹೆಚ್ಚುವರಿಯಾಗಿ 50 ಎಂಬಿಬಿಎಸ್ ಸೀಟ್‌ಗಳು ಲಭ್ಯವಾದವು. ಅಡ್ಮಿನಿಸ್ಟ್ರೇಶನ್ ಬ್ಲಾಕ್‌ನ್ನು ಕಿಮ್ಸ್‌ಗೆ ಹಸ್ತಾಂತರ ಮಾಡಿಕೊಂಡಿಲ್ಲ. ಆದರೆ ಪರಸ್ಪರ ಹೊಂದಾಣಿಕೆ ಮೂಲಕ ಆ ಬ್ಲಾಕ್‌ನಲ್ಲಿ ಬೋಧನೆ, ತರಬೇತಿ, ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಡಾ| ದತ್ತಾತ್ರೇಯ ಡಿ. ಬಂಟ್,
ನಿರ್ದೇಶಕರು, ಕಿಮ್ಸ್
ಶಿವಶಂಕರ ಕಂಠಿ