Advertisement

ನಿಗಮಗಳ ಸೌಲಭ್ಯಕ್ಕೆ ಬೇಕಿದೆ ಆಡಳಿತಾತ್ಮಕ ಅನುಮೋದನೆ

11:13 PM Feb 10, 2024 | Team Udayavani |

ಉಡುಪಿ: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ಸುಮಾರು 10 ನಿಗಮಗಳ ವಿವಿಧ ಸೌಲಭ್ಯಗಳಿಗೆ ಸಲ್ಲಿಸಿರುವ ಅರ್ಜಿಗಳಲ್ಲಿ ಅಂಗೀಕೃತ ಪ್ರಸ್ತಾವನೆಗೆ ಇನ್ನೂ ಆಡಳಿತಾತ್ಮಕ ಅನುಮೋದನೆಯೇ ದೊರೆತಿಲ್ಲ.

Advertisement

ಸ್ವೋದ್ಯೋಗ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಸ್ವಾವಲಂಬಿ ಸಾರಥಿ, ಗಂಗಾಕಲ್ಯಾಣ, ಕಾಯಕ ಕಿರಣ ಯೋಜನೆ ಹೀಗೆ ವಿವಿಧ ನಿಗಮಗಳಿಂದ ಬ್ಯಾಂಕ್‌ ಮೂಲಕ ಸಾಲಸೌಲಭ್ಯ ಒದಗಿಸುವುದು ಅಥವಾ ನಿಗಮದಿಂದಲೇ ನೇರವಾಗಿ ನೀಡುವ ಸೌಲಭ್ಯಕ್ಕೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ಉಭಯ ಜಿಲ್ಲೆಯ ಫ‌ಲಾನುಭವಿಗಳು ಅರ್ಜಿ ಸಲ್ಲಿಸಿದ್ದರು. ಉಭಯ ಜಿಲ್ಲೆಯ ಜಿ.ಪಂ. ಸಿಇಒಗಳು ಪ್ರತ್ಯೇಕವಾಗಿ ಸಭೆ ನಡೆಸಿ, ಸೌಲಭ್ಯ ಅಂಗೀಕಾರಕ್ಕಾಗಿ ಪ್ರಸ್ತಾವನೆಯನ್ನು ನಿಗಮದ ಕೇಂದ್ರ ಕಚೇರಿಗೆ ಸಲ್ಲಿಸಲು ತೀರ್ಮಾನಿಸಿ, ಎಲ್ಲ ನಿಗಮದ ಸೌಲಭ್ಯಗಳ ಪ್ರಸ್ತಾವನೆಯನ್ನು 2023ರ ಡಿಸೆಂಬರ್‌ನಲ್ಲಿ ಕೇಂದ್ರ ಕಚೇರಿಗೆ ಅನುಮೋದನೆಗಾಗಿ ಕಳುಹಿಸಿಕೊಡಲಾಗಿತ್ತು.ಆದರೆ ಈವರೆಗೂ ನಿಗಮದ ಕೇಂದ್ರ ಕಚೇರಿಯಿಂದ ಅನುಮೋದನೆ ದೊರೆತಿಲ್ಲ.

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ಅರೆಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ, ಕರ್ನಾಟಕ ಒಕ್ಕಲಿಗ ಅಭಿವೃದ್ಧಿ ನಿಗಮ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಡಿ ಲಭ್ಯವಿರುವ ವಿವಿಧ ಸೌಲಭ್ಯಗಳಾದ ಸ್ವೋದ್ಯೋಗ, ಅರಿವು ಸಾಲ ಯೋಜನೆ, ಗಂಗಾಕಲ್ಯಾಣ ಯೋಜನೆಯಡಿ ಉಡುಪಿ ಜಿಲ್ಲೆಯಿಂದ 1,298 ಅರ್ಜಿ ಸಲ್ಲಿಕೆಯಾಗಿತ್ತು. ಇದರಲ್ಲಿ 115 ಅರ್ಜಿ ಅಂಗೀಕರಿಸಲಾಗಿತ್ತು. ದ.ಕ. ಜಿಲ್ಲೆಯಿಂದ 461 ಅರ್ಜಿ ಸ್ವೀಕೃತವಾಗಿದ್ದು, 145 ಅರ್ಜಿ ಅಂಗೀಕರಿಸಲಾಗಿದೆ. ಎರಡು ಜಿಲ್ಲೆಯ ಅಂಗೀಕೃತ ಅರ್ಜಿಯನ್ನು ಆಡಳಿತಾತ್ಮಕ ಅನುಮೋದನೆಗಾಗಿ ಬೆಂಗಳೂರು ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

500ರಲ್ಲಿ 5 ಅಂಗೀಕಾರ
ಉಡುಪಿ ಜಿಲ್ಲೆಯಿಂದ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಸ್ವೋದ್ಯೋಗ ಸಾಲಸೌಲಭ್ಯಕ್ಕೆ 540 ಅರ್ಜಿ ಸಲ್ಲಿಕೆಯಾಗಿದ್ದು, ಅಂಗೀಕಾರಗೊಂಡಿರುವುದು 5 ಮಾತ್ರ. ದ.ಕ.ದ 57ರಲ್ಲಿ 6 ಅಂಗೀಕೃತವಾಗಿವೆ. ವಿಶ್ವಕರ್ಮ ನಿಗಮದ ಸ್ವೋದ್ಯೋಗ ಸಾಲ ಸೌಲಭ್ಯಕ್ಕೆ ಉಡುಪಿಯ 149 ಅರ್ಜಿಯಲ್ಲಿ 3 ಅಂಗೀಕೃತಗೊಂಡರೆ, ದ.ಕ.ದ 71 ಅರ್ಜಿಯಲ್ಲಿ 3 ಅಂಗೀಕೃತವಾಗಿವೆ.

ಹೊಸ ಅಧ್ಯಕ್ಷರು
ಈವರೆಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರೇ ನಿಗಮ ಮಂಡಳಿಗಳ ಅಧ್ಯಕ್ಷರಾಗಿದರು. ಇದೀಗ ರಾಜ್ಯ ಸರಕಾರ ನಿಗಮ ಮಂಡಳಿಗಳಿಗೆ ಹೊಸ ಅಧ್ಯಕ್ಷರ ನೇಮಕ ಮಾಡಿರುವುದರಿಂದ ಈ ಎಲ್ಲ ಅರ್ಜಿಗಳಿಗೆ ಆದಷ್ಟು ಬೇಗ ಆಡಳಿತಾತ್ಮಕ ಅನುಮೋದನೆ ಸಿಗುವ ಸಾಧ್ಯತೆಯಿದೆ. ಆಡಳಿತಾತ್ಮಕ ಅನುಮೋದನೆ ಸಿಗದೇ ಸೌಲಭ್ಯಗಳನ್ನು ವಿತರಿಸಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next