Advertisement

ಬರ ನಿರ್ವಹಣೆಯಲ್ಲಿ ಆಡಳಿತ ವಿಫಲ: ರಾಜಕೀಯ ನಿವೃತ್ತಿ ಚಿಂತನೆಗೆ ಮುಂದಾದ ಕಾಂಗ್ರೆಸ್ ಶಾಸಕ

11:26 AM Nov 11, 2023 | keerthan |

ವಿಜಯಪುರ: ರಾಜ್ಯದ ಬರ ನಿರ್ವಹಣೆಯಲ್ಲಿ ರಾಜ್ಯ-ಕೇಂದ್ರ ಸರ್ಕಾರಗಳು ವಿಫಲವಾಗಿವೆ. ಜನತೆಗೆ ಉತ್ತರದಾಯಿ ಆಗಬೇಕಿರುವ ನಾವು ಜನರ ಸಮಸ್ಯೆಗೆ ಉತ್ತರ ಹೇಳಲಾಗದ ಸ್ಥಿತಿಯಲ್ಲಿದ್ದೇವೆ. ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ನಿವೃತ್ತಿ ಪಡೆಯುವ ದುಸ್ಥಿತಿ ಎದುರಾಗಿದೆ ಎಂದು ಕಾಂಗ್ರೆಸ್ ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಆಗ್ರಹಿಸಿದರು.

Advertisement

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆತ್ಮವಂಚನೆ ಮಾಡಿಕೊಂಡು ಕೆಲಸ ಮಾಡುವ ಅಗತ್ಯವಿಲ್ಲ. ಆತ್ಮ ವಂಚನೆ ರಾಜಕೀಯ ಮಾಡುವುದಕ್ಕಿಂತ ರಾಜಕೀಯ ನಿವೃತ್ತಿ ಘೋಷಿಸುವ ದುಸ್ಥಿತಿ ಎದುರಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಭೀಕರ ಬರ ಎದುರಿಸುತ್ತಿರುವ ವಿಜಯಪುರ ಜಿಲ್ಲೆಗೆ ತುರ್ತಾಗಿ ಕಂದಾಯ ಸಚಿವರು ಭೇಟಿ ನೀಡಿ, ಪರಿಹಾರ ಮಾರ್ಗೋಪಾಯ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲೇ ಹೆಚ್ಚು ಭೀಕರ ಬರ ಎದುರಿಸುತ್ತಿರುವ ವಿಜಯಪುರ ಜಿಲ್ಲೆ. ಆದರೆ ಕಂದಾಯ, ಕೃಷಿ ಸಚಿವರು ಅನ್ಯ ಜಿಲ್ಲೆಗಳಿಗೆ ಭೇಟಿ ನೀಡಿದರೂ ವಿಜಯಪುರ ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ಸಚಿವರನ್ನೇ ಭೇಟಿ ನೀಡಿ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಮಹಾರಾಷ್ಟ್ರ- ಕರ್ನಾಟಕ ರಾಜ್ಯಗಳು ಕುಡಿಯುವ ನೀರಿನ ವಿಷಯದಲ್ಲಿ ಮಾನವೀಯ ನೆಲೆಯಲ್ಲಿ ಜಲಾಶಯಗಳಲ್ಲಿ ನೀರು ಸಂಗ್ರಹ, ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದರು.

Advertisement

ಬೆಳಗಾವಿ ಅಧಿವೇಶನದಲ್ಲಿ ಬರ ಹಾಗೂ ನೆರೆ ವಿಷಯಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರದ ಮಟ್ಟದ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತೇನೆ. ಸತತವಾಗಿ ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳು ಸತತವಾಗಿ ನೆರೆ, ಬರ ಸಂಕಷ್ಟಕ್ಕೆ ತುತ್ತಾಗುತ್ತಿರುವ ವಿಜಯಪುರ ಜಿಲ್ಲೆ ಸೇರಿದಂತೆ ಶಾಶ್ವತ ಪರಿಹಾರ ಕ್ರಮಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಕೆಲವೇ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಲಿವೆ. ಜಿಲ್ಲೆಯ ಬಹುತೇಕ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಕಾಲುವೆ ನೀರು ಆಧರಿಸಿವೆ. ಜಲಾಶಯಗಳಲ್ಲಿ ಸಂಗ್ರಹ ಇರುವ ನೀರಿನ‌ ನಿರ್ವಹಣೆ ಹಾಗೂ ಸಮರ್ಪಕ ಬಳಕೆ ವಿಷಯದಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

ನೀರಾವರಿಯ ಹಲವು ಯೋಜನೆಗಳು ಇಂಡಿ ತಾಲೂಕಿಗೆ ಸೌಲಭ್ಯ ಕಲ್ಪಿಸಿದ್ದರೂ ಕಾಲುವೆ ಕೊನೆ ಭಾಗಕ್ಕೆ ಪ್ರಾಮಾಣಿಕವಾಗಿ ನೀರು ತಲುಪಿಸುವಲ್ಲಿ ಆಡಳಿತ ಯಂತ್ರ ವಿಫಲವಾಗುತ್ತಿದೆ.  ಜಿಲ್ಲೆಯಲ್ಲಿ 9 ಏತ ನೀರಾವರಿ ಯೋಜನೆಗಳಿದ್ದರೂ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ ಎಂದು ಹರಿಹಾಯ್ದರು.

ನೈಜ ಸ್ಥಿತಿಯನ್ನು ಜನರ ಮುಂದೆ ಇಡಬೇಕಿದೆ. ಹಿಂದಿನ ಸರ್ಕಾರದ ಆರ್ಥಿಕ ನಿರ್ವಹಣೆಯ ಪರಿಣಾಮ ಸಮಸ್ಯೆ ಎದುರಾಗಿದೆ. ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಲು ಸರ್ಕಾರ ತುರ್ತಾಗಿ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಭೀಕರ ಬರದ ಸಂಕಷ್ಟಕ್ಕೆ ಸ್ಪಂದಿಸಿ, ನೆರವಿಗೆ ಬರಬೇಕಿತ್ತು. ಕೇಂದ್ರ ಕೂಡ ಜನರ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಸಿಡುಕಿದರು.

ನೆರೆ-ಬರ ಸಂದರ್ಭದಲ್ಲಿ ಶಾಸ್ವತ ಪರಿಹಾರ ಕಂಡುಕೊಳ್ಳಬೇಕು, ಬರ ನಿರ್ವಹಣೆಯಲ್ಲಿ ಸರ್ಕಾರ, ಸಚಿವರು ಬದ್ಧತೆ ತೋರಬೇಕು ಎಂದು ಆಗ್ರಹಿಸಿದರು

Advertisement

Udayavani is now on Telegram. Click here to join our channel and stay updated with the latest news.

Next