ಬಳುಕುವ ಬಳ್ಳಿಯಂಥ ದೇಹ,ಕೆನೆಗಟ್ಟಿದ ಗಟ್ಟಿ ಹಾಲಿನ ಬಣ್ಣ, ನೀಳವಾದ ಕೇಶರಾಶಿ, ಕೋಲು ಮುಖದಲ್ಲಿ ಚಿತ್ತ ಸೆಳೆಯುವಕಂಗಳು, ಮನಸ್ಸಿನ ಸಮುದ್ರವನ್ನುಕಡೆದು ಪ್ರೇಮಾಮೃತ ಹೊಮ್ಮಿಸುವಂಥ ನೋಟ…. ಇವು ವಿಶ್ವಸುಂದರಿ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಭಾರತದ ಅಡ್ಲೈನ್ ಕ್ಯಾಸ್ಟಲಿನೊ ಅವರ ಸಂಕ್ಷಿಪ್ತ ಸೌಂದರ್ಯ ವಿಶ್ಲೇಷಣೆ!
ವರ್ಷ ಇಪ್ಪತ್ತಾಗಿತ್ತು…. ವಿಶ್ವ ಸುಂದರಿ ಜಾತ್ರೆಯಲ್ಲಿ ಭಾರತದ ಬೆಡಗಿಯೊಬ್ಬಳು ಟಾಪ್ 5ರಲ್ಲಿಕಾಣಿಸಿಕೊಂಡು…2001ರಲ್ಲಿ ಸೆಲೀನಾ ಜೆಟ್ಲಿ ಅವರು ಈ ಕಿರೀಟ ಗೆದ್ದ ನಂತರ ಇಲ್ಲಿಯವರೆಗೆ ಟಾಪ್ 5ರಲ್ಲಿ ಯಾವ ಭಾರತೀಯ ಸುಂದರಿಯೂ ಸ್ಥಾನ ಗಳಿಸಿರಲಿಲ್ಲ. ಆ ಬರವನ್ನು ಉಡುಪಿ ಜಿಲ್ಲೆಯ ಉದ್ಯಾವರ ಮೂಲದವರಾದ ಅಡ್ಲೈನ್ ಕ್ಯಾಸ್ಟಲಿನೋ ನೀಗಿದ್ದಾರೆ.
ಸೌಂದರ್ಯ-ಬುದ್ಧಿವಂತಿಕೆಯ ಸಮ್ಮಿಶ್ರಣ: ನಿಮಗೆ ತಿಳಿದಿರಲಿ. ಟಾಪ್ 5ರಲ್ಲಿಕಾಣಿಸಿಕೊಳ್ಳುವುದು ತಮಾಷೆಯ ವಿಚಾರವಲ್ಲ. ಏಕೆಂದರೆ, ಅಲ್ಲಿ ಸೌಂದರ್ಯಕ್ಕಷ್ಟೇ ಅಂಕಗಳು ಸಿಗೋದಿಲ್ಲ. ಸೌಂದರ್ಯದ ಜೊತೆಗೆ ಬುದ್ಧಿವಂತಿಕೆಯೂ ಬೇಕು. ಸೌಂದರ್ಯ ಮತ್ತು ಬುದ್ಧಿವಂತಿಕೆ ಎರಡೂ ಒಂದೇ ಹೆಣ್ಣಿನಲ್ಲಿ ಇರುವುದು ಅಪರೂಪ ಅಂತ ಷೇಕ್ಸ್‌ಪಿಯರ್ ಹೇಳಿದ್ದನ್ನು ವಿಶ್ವ ಸುಂದರಿ ಸ್ಪರ್ಧೆಯ ಆಯೋಜಕರು ಸೀರಿಯಸ್ಸಾಗಿ ತೆಗೆದು ಕೊಂಡಿದ್ದಾರೇನೋ ಗೊತ್ತಿಲ್ಲ. ಆದರೆ, ಇಂಥದ್ದೊಂದು ಪರೀಕ್ಷೆ ಅಲ್ಲಿ ಪ್ರತಿ ವರ್ಷವೂ ನಡೆಯುತ್ತದೆ.
ಇದನ್ನೂ ಓದಿ:ಮೆಕ್ಸಿಕೋದ ಆ್ಯಂಡ್ರಿಯಾ ಮೆಝಾಗೆ 2020ರ ವಿಶ್ವಸುಂದರಿ ಪಟ್ಟ
ಸ್ಪರ್ಧೆಯ ಅಂತಿಮ ಚರಣದಲ್ಲಿ ತೀರ್ಪುಗಾರರು ಕೇಳುವ ಪ್ರಶ್ನೆಗಳಿಗೆ ಸ್ಪರ್ಧಾಳುಗಳು,ಕ್ಷಣದಲ್ಲೇ ಯೋಚಿಸಿ ಜಾಣತನದಿಂದ ಉತ್ತರಿಸಬೇಕು. ಅದೇ ಅಲ್ಲಿರುವ ನಿಜವಾದ ಚಾಲೆಂಜ್… ಅಲ್ಲಿ ಯಾವುದೇ ಗಿಲೀಟಿನ ಉತ್ತರಗಳಿಗೆ, ಹಾರಿಕೆಯ ಉತ್ತರಗಳಿಗೆ ಅಥವಾ ಅತಿ ಬುದ್ಧಿವಂತಿಕೆಯ ಉತ್ತರಗಳಿಗೆ ಅವಕಾಶವಿಲ್ಲ. ಆ ನಿಟ್ಟಿನಲ್ಲಿ ಅಡ್ಲೈನ್ ತೋರಿದ ಜಾಣ್ಮೆ ಈಗ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿದೆ.