ಕೇಂಬ್ರಿಡ್ಜ್: ಹೊಸ ರಾಜಕೀಯ ಪಕ್ಷ ಹುಟ್ಟು ಹಾಕಿರುವ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅವರು “ಕೇಸರಿ’ ವರ್ಣದಿಂದ ದೂರವಿದ್ದರೆ ಮಾತ್ರ ತಮ್ಮ ರಾಜಕೀಯ ಪಕ್ಷ ಅವರೊಂದಿಗೆ ಕೈ ಜೋಡಿಸುತ್ತದೆ ಎಂದು ಮತ್ತೂಬ್ಬ ತಮಿಳು ಸೂಪರ್‌ಸ್ಟಾರ್ ಕಮಲ್ ಹಾಸನ್ ಹೇಳಿದ್ದಾರೆ. ಹಾರ್ವರ್ಡ್ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ್ದ ಭಾರತೀಯರ ವಾರ್ಷಿಕ ಸಮ್ಮೇಳನದಲ್ಲಿ ವಿದ್ಯಾರ್ಥಿಗಳೊಂದಿಗೆ ಅವರು ಸಂವಾದ ನಡೆಸುವಾಗ ಈ ವಿಚಾರ ತಿಳಿಸಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “”ರಜನಿ ಪಕ್ಷ ಹಾಗೂ ತಮ್ಮ ಪಕ್ಷಗಳ ಧ್ಯೇಯ, ಉದ್ದೇಶ ಹಾಗೂ ಪ್ರಣಾಳಿಕೆಗಳಲ್ಲಿ ಸಾಮ್ಯತೆಯಿದ್ದರೆ ಖಂಡಿತವಾಗಿಯೂ ಕೈಜೋಡಿಸುತ್ತೇವೆ. ಆದರೆ, ಅವರ ಪಕ್ಷ ಕೇಸರಿಮಯ ಆಗದಿದ್ದಲ್ಲಿ ಮಾತ್ರ ನನ್ನ ಪಕ್ಷ ರಜನಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಆಲೋಚಿಸುತ್ತದೆ” ಎಂದರು.
“”ಹೊಂದಾಣಿಕೆ ಏನಿದ್ದರೂ ಚುನಾವಣೆಗೆ ಮುನ್ನವೇ ಹೊರತು, ಅನಂತರವಲ್ಲ ಎಂದ ಅವರು, ಚುನಾವಣೆಯಲ್ಲಿ ಜನರ ತೀರ್ಮಾನಕ್ಕೆ ನಾನು ಬದ್ಧ. ಜನರ ಮಧ್ಯೆಯೇ ನಿಂತು ಮುಂದಿನ ಚುನಾವಣೆ ವರೆಗೆ ಕಾಯುತ್ತೇನೆ. ರಾಜಕೀಯದವರ ಜತೆಗಿರುವುದಕ್ಕಿಂತ ಜನರ ಜತೆಯಿರುವುದೇ ನನಗಿಷ್ಟ” ಎಂದರು. ಇತ್ತೀಚೆಗೆ, ದಿಲ್ಲಿ ಸಿಎಂ ಕೇಜ್ರಿವಾಲ್ ಅವರು ತಮ್ಮನ್ನು ಭೇಟಿ ಮಾಡಿ, ಆಮ್ ಆದ್ಮಿ ಪಾರ್ಟಿ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಚರ್ಚಿಸಿದ್ದನ್ನು ಸ್ಮರಿಸಿದ ಅವರು, ಕೇಜ್ರಿವಾಲ್ ಹೊರತಾಗಿಯೂ ತಾವು ಇತರರೊಂದಿಗೆ ಹೊಂದಾಣಿಕೆಗೆ ಸಿದ್ಧ ಎಂದರು.
ಪ್ರತಿ ಜಿಲ್ಲೆಯಿಂದ ಒಂದು ಹಳ್ಳಿ ದತ್ತು
ತಮಿಳುನಾಡಿನಲ್ಲಿರುವ ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಖೇದ ವ್ಯಕ್ತಪಡಿಸಿದ ಅವರು, ತಮಿಳುನಾಡಿನ ಪ್ರತಿ ಜಿಲ್ಲೆಯಲ್ಲಿ ಒಂದೊಂದು ಹಳ್ಳಿಯನ್ನು ದತ್ತು ಪಡೆದು, ಅವುಗಳನ್ನು ವಿಶ್ವದ ಶ್ರೇಷ್ಠ ಹಳ್ಳಿಗಳ ನ್ನಾಗಿ ಮಾರ್ಪಡಿಸುವುದಾಗಿ ತಿಳಿಸಿದರು. ತಮಿಳುನಾಡಿನಲ್ಲಿ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ. ಇಂದಿನ ಸ್ಥಿತಿಗತಿಗಳಿಗೆ ಸವಾಲೆಸೆದು ಹೊಸ ರಾಜಕೀಯ ಮನ್ವಂತರಕ್ಕೆ ನಾಂದಿ ಹಾಡಬೇಕಿದೆ ಎಂದು ಅವರು ತಿಳಿಸಿದರು.