Advertisement

ಹೊಂದಾಣಿಕೆ ರಾಜಕೀಯ ಕೆಟ್ಟ ಬೆಳವಣಿಗೆ

01:36 PM Aug 07, 2017 | Team Udayavani |

ಮೈಸೂರು: ಇತ್ತೀಚಿನ ದಿನಗಳಲ್ಲಿ ರಾಜಕೀಯದಲ್ಲಿ ಸಾಮಾಜಿಕ ಬದ್ಧತೆ ಮರೆಯಾಗಿ ಹೊಂದಾಣಿಕೆಯ ರೂಪ ಪಡೆಯುತ್ತಿರುವುದು ಅತ್ಯಂತ ಕೆಟ್ಟ ಬಳವಣಿಗೆಯಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ವಿಷಾದ ವ್ಯಕ್ತಪಡಿಸಿದರು.

Advertisement

ನಗರದ ಅಶೋಕಪುರಂನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶ್ರೀನಿವಾಸ ಪ್ರಸಾದ್‌ ಅಭಿಮಾನಿ ಬಳಗದಿಂದ ಭಾನುವಾರ ಆಯೋಜಿಸಿದ್ದ ಶ್ರೀನಿವಾಸ್‌ ಪ್ರಸಾದ್‌ ಅವರ 70ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆಲ್ಲಾ ಸಮಾಜದ ಬಡವರು, ಜನರ ಪರವಾಗಿ ಹೋರಾಡುವವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಲಾಗುತ್ತಿತ್ತು.

ಅಲ್ಲದೇ ಬಹುತೇಕ ಸಂದರ್ಭಗಳಲ್ಲಿ ಚುನಾವಣೆಗೆ ಜನರೇ ಹಣ ನೀಡಿ, ಸ್ಪರ್ಧಿಸಲು ಅವಕಾಶ ಕಲ್ಪಿಸುತ್ತಿದ್ದರು. ಆದರೆ, ಈ ನಿಲುವು ಇತ್ತೀಚಿನ ರಾಜಕೀಯ ವ್ಯವಸ್ಥೆಯಲ್ಲಿ ಬದಲಾಗಿದ್ದು, ಇಂದು ಶಾಸಕ ಅಥವಾ ಮಂತ್ರಿಯಾಗಬೇಕಾದರೆ ಸಾಮಾಜಿಕ ಬದ್ಧತೆಗಿಂತಲೂ ಮುಖ್ಯವಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕಿದ್ದು, ಶೇ.99 ಜನಪ್ರತಿನಿಧಿಗಳು ಇದೇ ನಿಲುವನ್ನು ಹೊಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯುವಕರಿಗೆ ಆದ್ಯತೆ: ಪಸ್ತುತ ಸಂದರ್ಭದಲ್ಲಿ ರಾಜಕೀಯಕ್ಕೆ ಬರುವವರು ಕಲಬೆರಕೆಯವರಾಗಿದ್ದು, ಅವರಿಗೆ ಏನು ಮಾಡಬೇಕೆಂದು ಗೊತ್ತಿರುವುದಿಲ್ಲ. ಆದರೆ ಆದರ್ಶ ರಾಜ್ಯದ ಕಲ್ಪನೆಯ ಹಾದಿಯಲ್ಲಿ ಸಾಗುತ್ತಿರುವ ನಾವು ಚುನಾವಣೆಗಳಲ್ಲಿ ಯುವಕರಿಗೆ ಆದ್ಯತೆ ನೀಡಬೇಕಿದ್ದು, ಆ ಮೂಲಕ ಸಮಾಜದಲ್ಲಿನ ಜಾತೀಯತೆ, ಭ್ರಷ್ಟಚಾರವನ್ನು ನಮ್ಮಿಂದ ದೂರವಾಗಿಸಬೇಕಿದೆ. ಈ ನಿಟ್ಟಿನಲ್ಲಿ ಯುವಕರನ್ನು ಸಿದ್ಧಗೊಳಿಸಬೇಕಿದೆ, ಎಂದ ಅವರು, ಈ ಹಿಂದೆ ತಾವು ಯುವ ಕಾಂಗ್ರೆಸ್‌ ಅಧಕ್ಷನಾಗಿದ್ದಾಗ ಅನೇಕ ಯುವ ನಾಯಕರಿಗೆ ಟಿಕೆಟ್‌ ನೀಡಿದ್ದೆ ಎಂದು ಸ್ಮರಿಸಿದರು.

ಹಣವಂತರಿಗೆ ಮಣೆ: ವಿಧಾನಸಭಾ ಮಾಜಿ ಸಭಾಧ್ಯಕ್ಷ ಕೃಷ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಹಣವಂತರಿಗೆ ಮಣೆ ಹಾಕುತ್ತಿದ್ದು, ಆ ಮೂಲಕ ರಿಯಲ್‌ ಎಸ್ಟೇಟ್‌ ಉದ್ಯಮಿಗಳು, ಗಣಿಗಾರಿಕೆ ನಡೆಸುವವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಲಾಗುತ್ತಿದೆ. ಆದರೆ ಇವರುಗಳು ಸಮಾಜಮುಖೀ ರಾಜಕೀಯಕ್ಕೆ ಬರಲು ಹೇಗೆ ಸಾಧ್ಯವಾಗುತ್ತದೆ?.

Advertisement

ರಾಜಕೀಯ ಪಕ್ಷಗಳಿಗೆ ಮುಖ್ಯವಾಗಿ ಸಾಮಾಜಿಕ ಬದ್ಧತೆ ಇರಬೇಕಿದ್ದು, ಆ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವ ನೀಡಬೇಕಿದೆ. ಇಂದು ರಾಜಕೀಯ ಪಕ್ಷಗಳು ಜನ ಕೆಟ್ಟಿದ್ದಾರೆ ಎಂದು ದೂರುತ್ತವೆ, ಜನರು ಹಣ ನೀಡದಿದ್ದರೆ ಗೆಲ್ಲಿಸುವುದಿಲ್ಲ ಎಂಬ ಉತ್ತರವನ್ನು ರಾಜಕೀಯ ಪಕ್ಷಗಳು ನೀಡುತ್ತಿವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಡಾ. ಕಮಲರಾಮನ್‌, ಡಾ.ರಂಗನಾಥಯ್ಯ, ಡಾ.ವೆಂಕಟೇಶ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಹುಟ್ಟುಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಡಾ ಮಾಜಿ ಅಧ್ಯಕ್ಷ ಕೆ.ಆರ್‌.ಮೋಹನ್‌ ಕುಮಾರ್‌, ಬಿಜೆಪಿ ಮುಖಂಡರಾದ ಬಸವೇಗೌಡ, ಶಿವಣ್ಣ, ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಎಚ್‌.ವಿ.ರಾಜೀವ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next