ಹಾವೇರಿ: ಜಿಲ್ಲೆಯಲ್ಲಿರುವ ಅನಧಿಕೃತ ಹಾಗೂ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸಬೇಕು. ರಸ್ತೆ ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ಪರಶುರಾಮ ಲೊಕೋಪಯೋಗಿ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಸ್ತೆ ಅಪಘಾತ ಸಂದರ್ಭದಲ್ಲಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ತ್ವರಿತವಾಗಿ ಆಂಬ್ಯುಲೆನ್ಸ್ ವಾಹನಗಳ ಸೇವೆ ನೀಡುವುದು, ಆಸ್ಪತ್ರೆಗಳಲ್ಲಿ ತಕ್ಷಣ ಸ್ಪಂದಿಸಿ ಚಿಕಿತ್ಸೆ ನೀಡುವ ಕುರಿತಂತೆ ಹಾಗೂ ಹೆಚ್ಚು ಗಾಯಾಳುಗಳು ದಾಖಲಾದ ಸಂದರ್ಭದಲ್ಲಿ ಖಾಸಗಿ ವೈದ್ಯರ ಹಾಗೂ ಅರೇ ವೈದ್ಯಕೀಯ ಸಿಬ್ಬಂದಿ ಸಹಕಾರ ಪಡೆದು ತ್ವರಿತ ವೈದ್ಯಕೀಯ ಸ್ಪಂದನೆ ಹಾಗೂ ಚಿಕಿತ್ಸೆಗೆ ಸೂಕ್ತ ನಿರ್ದೇಶನ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅವರು ತಿಳಿಸಿದರು.
ಹೆಚ್ಚಿನ ಸಾರಿಗೆ ಸೌಲಭ್ಯ ನೀಡಿ: ಜಿಲ್ಲೆಯ ಜಾತ್ರೆ, ಧಾರ್ಮಿಕ ಸ್ಥಳ, ಕಾರ್ಖಾನೆಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಪ್ರಯಾಣ ದಟ್ಟಣೆ ಇರುವ ಪ್ರದೇಶಗಳನ್ನು ಆಯಾ ಇಲಾಖೆಗಳು ಸರ್ವೇ ಮಾಡಬೇಕು. ಸಾರಿಗೆ ವ್ಯವಸ್ಥೆ ಕುರಿತಂತೆ ವರದಿ ಮಾಡಬೇಕು ಹಾಗೂ ದಾವಣಗೆರೆ ಹಾಗೂ ಹುಬ್ಬಳ್ಳಿಗೆ ಪ್ರತಿದಿನ ಕಾರ್ಮಿಕರು ಪ್ರಯಾಣ ಮಾಡುವ ಸಂದರ್ಭಗಳಲ್ಲಿ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸುವ ಕುರಿತಂತೆ ವಾಯವ್ಯ ರಸ್ತೆ ಸಾರಿಗೆ ಅಧಿಕಾರಿಗಳು ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ವರದಿ ಸಲ್ಲಿಸುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ವಿವಿಧ ಧಾರ್ಮಿಕ ಕ್ಷೇತ್ರಗಳಿವೆ. ಈ ಕ್ಷೇತ್ರಗಳಿಗೆ ನಿಗದಿತ ದಿನಾಂಕದಂದು ಜನರು ಹೆಚ್ಚು ಬಂದು ಹೋಗುತ್ತಾರೆ. ಇಂಥ ಸ್ಥಳಗಳನ್ನು ಗುರುತಿಸಬೇಕು. ಯಾವ ಯಾವ ದಿನಗಳಲ್ಲಿ ಜಿಲ್ಲೆಯ ಯಾವ ಧಾರ್ಮಿಕ ಕೇಂದ್ರಗಳಿಗೆ ಹೆಚ್ಚು ಜನ ಪ್ರಯಾಣಿಸುತ್ತಾರೆ ಎಂದು ಸಮೀಕ್ಷೆ ಮಾಡಿ ಜನರ ಸುರಕ್ಷಿತ ಪ್ರಯಾಣಕ್ಕಾಗಿ ಒತ್ತು ನೀಡಿ ಹೆಚ್ಚಿನ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೋಟೆಲ್ ಮೇಲೆ ನಿಗಾ ಇಡಿ: ರಸ್ತೆ ಬದಿಯ ಹೋಟೆಲ್ ಹಾಗೂ ಡಾಬಾಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಹಾಗೂ ಮದ್ಯ ಸೇವನೆ ತಡೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಆಗಾಗ್ಗೆ ಪರಿಶೀಲನೆ ನಡೆಸಬೇಕು. ಕೆಲವೊಮ್ಮೆ ಹೆದ್ದಾರಿ ಮಾರ್ಗದ ಹೋಟೆಲ್ಗಳಲ್ಲಿ ಚಾಲಕರೇ ಮದ್ಯ ಕೊಂಡೊಯ್ದು ಊಟದ ಮುಂಚೆ ಹೋಟೆಲ್ಗಳಲ್ಲಿ ಮದ್ಯಪಾನ ಮಾಡುವುದು ಉಂಟು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಅಪರಾಧ ಹಾಗೂ ಅಪಾಯಕಾರಿ. ಇಂತಹ ಚಟುವಟಿಕೆಗೆ ಕಡಿವಾಣ ಹಾಕಲು ಅಬಕಾರಿ ಇಲಾಖಾ ಅಧಿಕಾರಿಗಳು ಸತತ ನಿಗಾವಹಿಸಬೇಕು. ನಿರಂತರವಾಗಿ ಹೋಟೆಲ್ಗಳ ಮೇಲೆ ನಿಗಾವಹಿಸಿ ಪರಿಶೀಲಿಸಬೇಕೆಂದು ಸೂಚಿಸಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ದೀಪಕ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರಕಾಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ವಾರ್ತಾಧಿಕಾರಿ ಬಿ.ಆರ್. ರಂಗನಾಥ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೀರಜಾದೆ, ಕಾರ್ಮಿಕ ಇಲಾಖೆ, ಅಬಕಾರಿ ಇಲಾಖೆ ಹಾಗೂ ನಗರಸಭೆ ಮತ್ತು ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಇದ್ದರು.
Advertisement
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಸ್ತೆ ಡಿವೈಡರ್ ಫಲಕಗಳು, ರಸ್ತೆ ರಿಫ್ಲೆಕ್ಟರ್‌ಗಳು ಅಳವಡಿಸುವುದು. ರಸ್ತೆ ಉಬ್ಬುಗಳಿಗೆ ಪೇಂಟಿಂಗ್ ಮಾಡಿಸುವ ಕುರಿತಂತೆ ಕ್ರಮವಹಿಸಬೇಕು. ನಗರ ವ್ಯಾಪ್ತಿಯೊಳಗೆ ಸಿಸಿ ಟಿವಿಗಳ ಅಳಡಿಕೆ ಹಾಗೂ ಸಮರ್ಪಕ ಕಾರ್ಯನಿರ್ವಹಣೆ ಕುರಿತಂತೆ ಕ್ರಮವಹಿಸುವುದು, ವಿವಿಧ ಸಂಚಾರಿ ಮಾರ್ಗಸೂಚಿಗಳನ್ನು ಅಳವಡಿಸುವುದು, ವ್ಯವಸ್ಥಿತ ವಾಹನ ನಿಲುಗಡೆಗೆ ಮಾರ್ಕಿಂಗ್ ವ್ಯವಸ್ಥೆ, ಸೂಚನಾ ಫಲಕಗಳನ್ನು ಅಳವಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
Related Articles
ಸಮಿತಿ ರಚನೆ
ರಸ್ತೆ ಅಪಘಾತಗಳ ವೈಜ್ಞಾನಿಕ ತನಿಖೆಗೆ ಸರ್ವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿ ನಿರ್ದೇಶನದಂತೆ ಲೊಕೋಪಯೋಗಿ, ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಪ್ರತಿನಿಧಿಗಳನ್ನು ಒಳಗೊಂಡ ತಾಲೂಕಾವಾರು ತನಿಖಾ ತಂಡಗಳನ್ನು ರಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಸಮಿತಿ ಪ್ರತಿ ರಸ್ತೆ ಅಪಘಾತ ಸಂಭವಿಸಿದ ನಂತರ ವೈಜ್ಞಾನಿಕ ತನಿಖೆ ನಡೆಸಿ ಕಾರಣಗಳನ್ನು ದೃಢಪಡಿಸಿ ಅಪಘಾತ ತಗ್ಗಿಸುವ ನಿಟ್ಟಿನಲ್ಲಿ ಸುರಕ್ಷೆ ಕೈಗೊಳ್ಳುವ ಕುರಿತಂತೆ ಕ್ರಮ ವಹಿಸಲಿದೆ ಎಂದು ಎಸ್ಪಿ ಕೆ. ಪರಶುರಾಮ ತಿಳಿಸಿದರು.
Advertisement