Advertisement

ನಾಗಾಪುರದಲ್ಲಿ ಇಂದಿನಿಂದ ಆದಿವಾಸಿಗಳ ಉಪವಾಸ ಸತ್ಯಾಗ್ರಹ

12:35 PM Jan 26, 2018 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ತಾಲೂಕಿನ ನಾಗಾಪುರಕ್ಕೆ ಪುನರ್ವಸತಿಗೊಳಿಸಿದ ನಂತರ ಜಿಲ್ಲಾಡಳಿತ, ಸರ್ಕಾರ ಪ್ಯಾಕೇಜ್‌ ನಂತೆ ಸೌಲಭ್ಯ ನೀಡದೆ ವಂಚಿಸಿದೆ, ಇದರ ವಿರುದ್ಧ ಆದಿವಾಸಿಗಳು ನಾಗಪುರ ಪುನರ್ವಸತಿ ಕೇಂದ್ರದ ಘಟಕ-1ರಲ್ಲಿ ಶುಕ್ರವಾರದಿಂದ ಆಹೋರಾತ್ರಿ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ ಎಂದು ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದ ಆದಿವಾಸಿಗಳ ಮುಖಂಡ ಜೆ.ಕೆ.ತಿಮ್ಮಯ್ಯ, ಪಿ.ಬಿ.ವೀಣಾ ತಿಳಿಸಿದ್ದಾರೆ.

Advertisement

ಈ ಬಗ್ಗೆ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ನಾಗರಹೊಳೆಯಿಂದ 1999ರಲ್ಲಿ ಪುನರ್ವಸತಿಗೊಂಡಿರುವ 259 ಗಿರಿಜನ ಕುಟುಂಬಗಳಿಗೆ  ಕೇಂದ್ರ ಸರ್ಕಾರ ಘೋಷಿಸಿದ್ದ ಪ್ಯಾಕೇಜ್‌ ಜಾರಿಗೊಂಡಿಲ್ಲ, ಇಂದು ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿವೆ. ಕೇಂದ್ರ ಸರ್ಕಾರದ ಪ್ಯಾಕೇಜ್‌ ಅನ್ವಯ ಪ್ರತಿ ಕುಟುಂಬಕ್ಕೆ 5 ಎಕರೆ ಕೃಷಿ ಭೂಮಿ, 1 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ರಮ, ಅದರೊಂದಿಗೆ ಸೌದೆ ಸಂಗ್ರಹಕ್ಕೆ,

ದನಕರುಗಳನ್ನು ಮೇಯಿಸಲು ಹುಲ್ಲುಗಾವಲನ್ನು ಸಮುದಾಯ ಒಡೆತನದಲ್ಲಿ 100 ಹೆಕ್ಟೇರ್‌ ಪ್ರದೇಶ ಮೀಸಲಿಡಲು ಆದೇಶ ಹೊರಡಿಸಿತ್ತು. ಪ್ರಸ್ತುತ 731 ಹೆ.ಮೀಸಲು ಅರಣ್ಯ ಪ್ರದೇಶದಿಂದ ಪುನರ್ವಸತಿ ಉದ್ದೇಶಕ್ಕಾಗಿ ಬಿಡುಗಡೆಯಾಗಿರುವ ಪ್ರದೇಶವು ಬಹುತೇಕ ಆದಿವಾಸಿಗಳಲ್ಲದವರ ಹಿಡಿತ ಹಾಗೂ ಒತ್ತುವರಿಯಾಗಿದೆ ಎಂದು ಆರೋಪಿಸಿದರು.

ನೂರೆಂಟು ಸಮಸ್ಯೆ: ಪುನರ್ವಸತಿ ಕೇಂದ್ರಗಳಲ್ಲಿ ಕಾಡಾನೆ ಹಾವಳಿ ತಡೆಯಲು ಬೇಕಾದ ಸೂಕ್ತ ಕ್ರಮ ಕೈಗೊಂಡಿಲ್ಲ. ಕುಡಿಯುವ ನೀರಿಗೆ ಸಮಸ್ಯೆ ಇದೆ. ನಾಗಪುರ ಕೇಂದ್ರದಲ್ಲಿ ಸ್ಥಾಪನೆಗೊಂಡಿರುವ ಆರೋಗ್ಯ ಉಪ ಕೇಂದ್ರ 7 ವರ್ಷಗಳೇ ಕಳೆದಿದ್ದರೂ ಸೇವೆಗೆ ಸಿಕ್ಕಿಲ್ಲ. ಸಮರ್ಪಕ ಅಂಗನವಾಡಿ ಕೇಂದ್ರಗಳಿಲ್ಲದೇ ಶೇ.40ಕ್ಕೂ ಹೆಚ್ಚು ಗಿರಿಜನ ಮಕ್ಕಳು ಕಾಫಿ ತೋಟದಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

ಹಾಗಾಗಿ ಅತಂತ್ರ ಸ್ಥಿತಿಯಲ್ಲಿರುವ ಗಿರಿಜನರಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಶುಕ್ರವಾರದ ಗಣರಾಜ್ಯೋತ್ಸವದ ದಿನದಿಂದ ನಿರಂತರ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಜೆ.ಎ.ಹರೀಶ್‌, ಜೆ.ಕೆ.ತಿಮ್ಮಯ್ಯ, ಜೆ.ಎ.ಸಣ್ಣಪ್ಪ, ಬಿ.ಕೆ.ಸೋಮು, ಜೆ.ಬಿ.ಸೋಮಣ್ಣ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next