ನಟ ಆದಿತ್ಯ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ಅಭಿನಯಿಸಿರುವ “5ಡಿ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ಸಿನಿಮಾದ ಹಾಡು ಮತ್ತು ಲಿರಿಕಲ್ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್, ಉಪಾಧ್ಯಕ್ಷ ಶಿಲ್ಪಾ ಶ್ರೀನಿವಾಸ್, ಗೋವಿಂದ್, ವಿತರಕರಾದ ನಂದಳಿಕೆ ನಿತ್ಯಾನಂದ ಪ್ರಭು, ರಾಧಾಕೃಷ್ಣ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದು, ಚಿತ್ರದ ಹಾಡು ಮತ್ತು ಲಿರಿಕಲ್ ವಿಡಿಯೋ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. “ಒನ್ ಟು ಹಂಡ್ರೆಡ್ ಡ್ರೀಮ್ ಮೂವೀಸ್’ ಬ್ಯಾನರ್‌ನಲ್ಲಿ ಸ್ವಾತಿ ಕುಮಾರ್ ನಿರ್ಮಿಸಿರುವ “5ಡಿ’ ಸಿನಿಮಾಕ್ಕೆ ಹಿರಿಯ ನಿರ್ದೇಶಕ ಎಸ್. ನಾರಾಯಣ್ ನಿರ್ದೇಶನವಿದೆ.
ಇನ್ನು ಬಿಡುಗಡೆಯಾಗಿರುವ “5ಡಿ’ ಸಿನಿಮಾದ ಹಾಡುಗಳಿಗೆ ಎಸ್. ನಾರಾಯಣ್ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದು, ಸೋನು ನಿಗಂ, ಕಾರ್ತಿಕ್ ಮೊದಲಾದ ಗಾಯಕರು ಧ್ವನಿಯಾಗಿದ್ದಾರೆ.
ಇನ್ನು “5ಡಿ’ ಸಿನಿಮಾದ ಹಾಡುಗಳ ಬಗ್ಗೆ ಮಾತನಾಡಿದ ನಿರ್ಮಾಪಕಿ ಸ್ವಾತಿ ಕುಮಾರ್, “ಈಗಾಗಲೇ ಸಿನಿಮಾಕ್ಕೆ ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅಂತೆಯೇ ಈಗ ಬಿಡುಗಡೆಯಾಗಿರುವ ಸಿನಿಮಾದ ಹಾಡುಗಳು ಕೂಡ ಎಲ್ಲರಿಗೂ ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ. “5ಡಿ’ ಕಂಪ್ಲೀಟ್ ಎಂಟರ್ ಟೈನ್ಮೆಂಟ್ ಸಿನಿಮಾ. ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿ, ಎಮೋಷನ್ ಹೀಗೆ ಎಲ್ಲಾ ಥರದ ಎಲಿಮೆಂಟ್ ಚಿತ್ರದಲ್ಲಿವೆ. ಎಸ್. ನಾರಾಯಣ್ ಅವರ ಹಿಂದಿನ ಎಲ್ಲ ಸಿನಿಮಾಗಳಿಗಿಂತ, ಸಂಪೂರ್ಣ ವಿಭಿನ್ನವಾಗಿ ಈ ಸಿನಿಮಾ ಮೂಡಿಬಂದಿದೆ’ ಎಂದರು.
ಚಿತ್ರದ ಬಗ್ಗೆ ಮಾತನಾಡಿದ ಕಾರ್ಯಕಾರಿ ನಿರ್ಮಾಪಕ ಕುಮಾರ್, “ಈ ಸಿನಿಮಾ ಆರಂಭಿಸಿದಾಗ ತುಂಬಾ ಜನರಿಂದ ತುಂಬಾ ನೆಗೆಟಿವ್ ರಿಯಾಕ್ಷನ್ ಬಂದಿದ್ದವು. ಆದರೆ ಈಗ ಸಿನಿಮಾ ಮೆಚ್ಚಿಕೊಂಡು ಪಾಸಿಟಿವ್ ರಿಯಾಕ್ಷನ್ ಬರುತ್ತಿದೆ. ಈ ಸಿನಿಮಾದಲ್ಲಿ ಮನರಂಜನೆ ಮತ್ತು ಮೆಸೇಜ್ ಎರಡೂ ಇದೆ. ಮನುಷ್ಯನಿಗೆ ರಕ್ತ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು, ನಾವು ಇತರರಿಗೆ ಉಪಯೋಗವಾಗಲಿ ಎಂದು ಕೊಡುವ ರಕ್ತ ಸರಿಯಾದ ರೀತಿ ಬಳಕೆಯಾಗುತ್ತಿದೆಯೋ, ಇಲ್ಲವೋ ಅಂತ ನಾವ್ಯಾರೂ ಯೋಚಿಸುವುದಿಲ್ಲ, ಬ್ಲಿಡ್ ಡೊನೇಟ್ ಮಾಡುವುದು ಸರೀನಾ, ತಪ್ಪಾ ಎನ್ನುವ ಕಂಟೆಂಟ್ ಮೇಲೆ ಈ ಸಿನಿಮಾ ನಿಂತಿದೆ. ಮೆಡಿಕಲ್ ಜಗತ್ತಿನಲ್ಲಿ ಬ್ಲಿಡ್ ಮಾಫಿಯಾ ನಡೆಯುತ್ತಿದೆ. ಅದು ಹೇಗೆ, ಯಾರು ಇದನ್ನು ಮಾಡುತ್ತಿರುವವರು ಎನ್ನುವುದೇ ಚಿತ್ರದ ಮುಖ್ಯ ವಸ್ತು’ ಎಂದು ಕಥಾಹಂದರದ ವಿವರಣೆ ನೀಡಿದರು.
ಕಲಾವಿದರಾದ ರತನ್ ರಾಮ್, ರಾಜೇಶ್, ಪ್ರಸನ್ನ, ರಾಘವೇಂದ್ರ, ಛಾಯಾಗ್ರಾಹಕ ಕುಮಾರ್ ಗೌಡ, ಕಥೆಗಾರ ರವಿ ಗುಂಟಿಮಡುಗು, ವಿತರಕ ರಾಧಾಕೃಷ್ಣ ಚಿತ್ರದ ಕುರಿತಂತೆ ಮಾತನಾಡಿದರು. ಅಂದಹಾಗೆ, “5ಡಿ’ ಎಸ್. ನಾರಾಯಣ್ ನಿರ್ದೇಶನದ ಐವತ್ತನೇ ಸಿನಿಮಾವಾಗಿದ್ದು, ಫೆಬ್ರವರಿ 10ಕ್ಕೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.