“ಯಾರೋ ಒಬ್ಬ ಹುಡುಗ ಬಾಯ್‌ಫ್ರೆಂಡ್ ಆಗಿ ಇರಬೇಕು ಅಂಥ ಇರೋದಲ್ಲ. ಆ ಹುಡುಗ ಜೀವನ ಸಂಗಾತಿಯಾಗಿ, ಜೀವನ ಪೂರ್ತಿ ಇರಬೇಕು. ಕಷ್ಟ-ಸುಖ, ನೋವು-ನಲಿವು ಎಲ್ಲದರಲ್ಲೂ ಜೊತೆಯಾಗಿರಬೇಕು. ಹಾಗಿದ್ದರೇನೇ, ಜೀವನಕ್ಕೂ ಒಂದು ಅರ್ಥ, ಜೀವನದಲ್ಲಿ ಬಾಯ್‌ಫ್ರೆಂಡ್‌ಗೂ ಒಂದು ಅರ್ಥ…’ ಇದು ನಟಿ ಅದಿತಿ ಪ್ರಭುದೇವ ಮಾತು.
ಹೌದು, ಇತ್ತೀಚೆಗಷ್ಟೇ ಅದಿತಿ ಪ್ರಭುದೇವ ನಿಶ್ಚಿತಾರ್ಥ ಮಾಡಿಕೊಂಡಿರುವ ಸುದ್ದಿ ಅನೇಕರಿಗೆ ಗೊತ್ತಿರಬಹುದು. ತಮ್ಮ ನೆಚ್ಚಿನ ಹುಡುಗನ ಜೊತೆ ಎಂಗೇಜ್ ಆದ ಬಳಿಕ, ಮೊದಲ ಬಾರಿಗೆ “ಉದಯವಾಣಿ’ ಜೊತೆಗೆ ಮಾತಿಗೆ ಸಿಕ್ಕ ಅದಿತಿ ತಮ್ಮ ಪಾಟ್ನರ್, ಭವಿಷ್ಯದ ಯೋಜನೆಗಳ ಕುರಿತು ಒಂದಷ್ಟು ಮಾತನಾಡಿದ್ದಾರೆ.
“ನಾನು ಮದುವೆಯಾಗುವ ಹುಡುಗ ಹೇಗಿರಬೇಕು ಎಂಬ ಬಗ್ಗೆ ನನಗೆ ಸ್ಪಷ್ಟತೆಯಿತ್ತು. ಆ ಹುಡುಗನ ಬಗ್ಗೆ ನನ್ನದೇ ಆದ ಒಂದಷ್ಟು ಕನಸುಗಳಿದ್ದವು. ಅದೆಲ್ಲವನ್ನೂ ಪರಿಪೂರ್ಣ ಮಾಡುವಂಥ ಹುಡುಗ ಸಿಕ್ಕಿರುವುದಕ್ಕೆ ಖುಷಿಯಾಗುತ್ತಿದೆ. ನನಗೆ ಎಂಥ ಹುಡುಗ ಬೇಕು ಅನ್ನೋದನ್ನ ನಮ್ಮ ಮನೆಯವರೇ ಹುಡುಕಿ ಕೊಟ್ಟಿದ್ದಾರೆ. ಮನೆಯವರಿಗೆ ಇಷ್ಟವಾದ ಹುಡುಗ ನನಗೂ ಇಷ್ಟವಾಗಿದ್ದಾರೆ. ಅದು ಇನ್ನೂ ಖುಷಿಯ ವಿಷಯ’ ಎನ್ನುತ್ತಾರೆ ಅದಿತಿ.
ಇನ್ನು ಅದಿತಿ ವರಿಸಲು ಹೊರಟಿರುವ ಹುಡುಗ ಯಶಸ್ ವೃತ್ತಿಯಲ್ಲಿ ಕಾಫಿ ಪ್ಲಾಂಟರ್ ಮತ್ತು ಬಿಲ್ಡರ್. ಜೊತೆಗೆ ಪ್ರಕೃತಿ ಪ್ರೇಮಿ ಕೂಡ. ಈ ಬಗ್ಗೆ ಮಾತನಾಡುವ ಅದಿತಿ, “ಅವರಿಗೆ ಸಿನಿಮಾದ ಬಗ್ಗೆ ಎಷ್ಟು ಆಸಕ್ತಿ ಇದೆ ಅನ್ನೋದು ನನಗೆ ಗೊತ್ತಿಲ್ಲ. ನಾವು ಸಿನಿಮಾದ ಬಗ್ಗೆ ಹೆಚ್ಚೇನೂ ಮಾತನಾಡುವುದಿಲ್ಲ. ಆದ್ರೆ ನನ್ನ ಪ್ರಕಾರ, ಅವರಿಗೆ ಖಂಡಿತಾ ಸಿನಿಮಾ ಅಂದ್ರೆ ಆಸಕ್ತಿ ಇದ್ದೇ ಇರುತ್ತದೆ. ಯಾಕಂದ್ರೆ, ಅವರು ಮೆಚ್ಚಿಕೊಂಡಿರುವುದೇ ಸಿನಿಮಾದವಳನ್ನ. ಹೀಗಾಗಿ ಸಿನಿಮಾದ ಮೇಲೆ ಒಂಚೂರಾದ್ರೂ ಆಸಕ್ತಿ ಇದ್ದೇ ಇರುತ್ತದೆ’ ಎಂದು ಮುಗುಳು ನಗು ಚೆಲ್ಲುತ್ತಾರೆ.
ಮದುವೆ ಡೇಟ್ ಇನ್ನೂ ಫಿಕ್ಸ್ ಆಗಿಲ್ಲ
ತಮ್ಮ ಮದುವೆ ದಿನಾಂಕ ಹಾಗೂ ಇತರ ತಯಾರಿ ಬಗ್ಗೆ ಮಾತನಾಡುವ ಅದಿತಿ, “ಈಗಷ್ಟೇ ಮನೆಯವರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದೇವೆ. ಆದರೆ ಮದುವೆ ಯಾವಾಗ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಅದನ್ನ ಮನೆಯವರು, ದೊಡ್ಡವರು ಸೇರಿ ನಿರ್ಧರಿಸುತ್ತಾರೆ. ದಿನಾಂಕ ನಿಶ್ಚಯವಾದ ಬಳಿಕ ಖಂಡಿತಾ ಎಲ್ಲರಿಗೂ ಗೊತ್ತಾಗುತ್ತದೆ. ಸದ್ಯಕ್ಕೆ ಈಗಾಗಲೇ ಒಪ್ಪಿಕೊಂಡಿರುವ ಒಂದಷ್ಟು ಸಿನಿಮಾಗಳನ್ನು ಮುಗಿಸಬೇಕಿದೆ. ಹಾಗಾಗಿ ಸದ್ಯಕ್ಕೆ ಮಾಡಬೇಕಾಗಿರುವ ಕೆಲಸಗಳ ಕಡೆಗೆ ಹೆಚ್ಚಿನ ಗಮನ ಮತ್ತು ಸಮಯ ಕೊಡಬೇಕಾಗಿದೆ’ ಎನ್ನುತ್ತಾರೆ ಅದಿತಿ.
ಮದುವೆಯಾದ ಮೇಲೆ ಸಿನಿಮಾ ಕಥೆ?
ಸಾಮಾನ್ಯವಾಗಿ ಹೀರೋಯಿನ್ಸ್ ಎಂಗೇಜ್‌ಮೆಂಟ್ ಅಥವಾ ಮದುವೆಯ ಬಳಿಕ ಸಿನಿಮಾಗಳಿಂದ ದೂರ ಉಳಿಯುತ್ತಾರೆ ಎಂಬ ಮಾತು ಚಿತ್ರರಂಗದಲ್ಲಿದೆ. ಇದೇ ಪ್ರಶ್ನೆಯನ್ನು ಅದಿತಿ ಅವರ ಮುಂದಿಟ್ಟರೆ, ಅವರಿಂದ ಬರುವ ಉತ್ತರ ಹೀಗಿದೆ, “ನಾನು ಆ್ಯಕ್ಟಿಂಗ್ ಮಾಡುತ್ತಿರುವುದಕ್ಕೆ ಅವರಿಂದಲೂ ಸಪೋರ್ಟ್ ಸಿಗುತ್ತಿದೆ. ಮುಂದೆಯೂ ಇದೇ ರೀತಿ ಸಪೋರ್ಟ್ ಸಿಗುತ್ತದೆ ಎಂಬ ಭರವಸೆ ಇದೆ. ಆದ್ರೆ, ಮದುವೆಯ ನಂತರ ಆ್ಯಕ್ಟಿಂಗ್ ಮಾಡಬೇಕಾ, ಬೇಡವಾ..? ಅನ್ನೋದರ ಬಗ್ಗೆ ನಾನೇ ಇನ್ನೂ ನಿರ್ಧರಿಸಿಲ್ಲ. ಮೊದಲಿನಿಂದಲೂ ಒಳ್ಳೆಯ ಸಬ್ಜೆಕ್ಟ್, ಸ್ಕ್ರಿಪ್ಟ್, ಕ್ಯಾರೆಕ್ಟರ್ ಸಿಕ್ಕರೆ ಅದನ್ನು ಖುಷಿಯಿಂದ ಒಪ್ಪಿಕೊಂಡು ಆ್ಯಕ್ಟಿಂಗ್ ಮಾಡುತ್ತಿದ್ದೇನೆ. ಒಳ್ಳೆಯ ಅವಕಾಶಗಳು ಸಿಕ್ಕರೆ, ಖಂಡಿತಾ ನಾನಂತೂ ಆ್ಯಕ್ಟಿಂಗ್ ಮಾಡಲು ರೆಡಿ. ಮುಂದೇನಾಗುತ್ತದೆಯೋ ನೋಡೋಣ…’ ಅನ್ನೋದು ಅದಿತಿ ಮಾತು.
ಹೊಸವರ್ಷದ ಮೊದಲ ಸಿನಿಮಾದ ಮೇಲೆ ನಿರೀಕ್ಷೆ…
ಅಂದಹಾಗೆ, ಇಂದು ಅದಿತಿ ಪ್ರಭುದೇವ ಮತ್ತು ಲೂಸ್‌ಮಾದ ಯೋಗಿ ಜೋಡಿಯಾಗಿ ಕಾಣಿಸಿಕೊಂಡಿರುವ “ಒಂಬತ್ತನೇ ದಿಕ್ಕು’ ಚಿತ್ರ ತೆರೆಗೆ ಬರುತ್ತಿದೆ. “ಒಂಬತ್ತನೇ ದಿಕ್ಕು’ ಹೊಸವರ್ಷದಲ್ಲಿ ತೆರೆಗೆ ಬರುತ್ತಿರುವ ಅದಿತಿ ಅಭಿನಯದ ಮೊದಲ ಸಿನಿಮಾವಾಗಿದ್ದರಿಂದ, ಈ ಸಿನಿಮಾದ ಬಗ್ಗೆ ಅದಿತಿ ಕೂಡ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಾರೆ. “ಇಲ್ಲಿಯವರೆಗೆ ನಾನು ಮಾಡಿದ ಸಿನಿಮಾಗಳ ಕ್ಯಾರೆಕ್ಟರ್‌ಗಳಿಗಿಂತ, ತುಂಬಾ ಡಿಫರೆಂಟ್ ಆಗಿರುವಂಥ ಕ್ಯಾರೆಕ್ಟರ್ ಈ ಸಿನಿಮಾದಲ್ಲಿದೆ. ನೈಜ ಘಟನೆಯೊಂದರಿಂದ ಪ್ರೇರಣೆಗೊಂಡು ಈ ಸಿನಿಮಾ ಮಾಡಿದ್ದರಿಂದ, ಸಿನಿಮಾದ ಪಾತ್ರಗಳು ಕೂಡ ನಮ್ಮ ನಡುವೆಯೇ ಇರುವಂಥೆ ಕಾಣುತ್ತದೆ. ತುಂಬ ಸಹಜವಾಗಿರುವಂಥ, ನಮ್ಮ ಸುತ್ತಮುತ್ತ ಎಲ್ಲರೂ ನೋಡಿರುವಂಥ ಹುಡುಗಿಯ ಪಾತ್ರ ನನ್ನದು. ಮೊದಲ ಬಾರಿಗೆ ಯೋಗಿ ಅವರೊಂದಿಗೆ ಕೆಲಸ ಮಾಡಿದ್ದು ಒಂದೊಳ್ಳೆ ಎಕ್ಸ್‌ಪೀರಿಯನ್ಸ್. ಸ್ವಲ್ಪ ಸೀರಿಯಸ್ ಸಬೆjಕ್ಟ್ ಸಿನಿಮಾವಾದರೂ, ಯೋಗಿ ಮತ್ತು ನನ್ನ ಕಾಂಬಿನೇಶನ್‌ನಲ್ಲಿ ಕಾಮಿಡಿ ಸಿನಿಮಾದಲ್ಲಿ ವರ್ಕೌಟ್ ಆಗಿದೆ. ಸಿನಿಮಾದ ಸಬ್ಜೆಕ್ಟ್, ಕ್ಯಾರೆಕ್ಟರ್ ಎರಡೂ ನನಗೆ ಇಷ್ಟವಾಗಿದೆ. “ಒಂಬತ್ತನೇ ದಿಕ್ಕು’ ಆಡಿಯನ್ಸ್‌ಗೂ ಇಷ್ಟವಾಗಲಿದೆ’ ಎನ್ನುವುದು ಅದಿತಿ ಮಾತು.
ಈ ವರ್ಷ ಎಂಟಕ್ಕೂ ಹೆಚ್ಚು ಸಿನಿಮಾ ರಿಲೀಸ್!
ಎಲ್ಲ ಅಂದುಕೊಂಡಂತೆ ನಡೆದರೆ, ಈ ವರ್ಷ ಅದಿತಿ ಪ್ರಭುದೇವ ಅಭಿನಯದ ಎಂಟಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಲಿವೆ! ಹೌದು, “ಒಂಬತ್ತನೇ ದಿಕ್ಕು’ ಸಿನಿಮಾದ ಬಳಿಕ “ತೋತಾಪುರಿ-1′, “ತೋತಾಪುರಿ-2′, “ಓಲ್ಡ್ ಮಾಂಕ್’, “ಗಜಾನನ ಆ್ಯಂಡ್ ಗ್ಯಾಂಗ್’, “5ಡಿ’, “ದಿಲ್ಮಾರ್’, “ತ್ರಿಬಲ್ ರೈಡಿಂಗ್’, “ಅಂದೊಂದಿತ್ತು ಕಾಲ’ ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಪೂರ್ಣಗೊಂಡಿದ್ದು, ಈಗಾಗಲೇ ಅದಿತಿ ಅಭಿನಯದ ಸುಮಾರು ಎಂಟಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಇದಲ್ಲದೆ ಇನ್ನೂ “ಜಮಾಲಿಗುಡ್ಡ’, “ಮಾಫಿಯಾ’, ಸೇರಿದಂತೆ ಅದಿತಿ ನಾಯಕಿಯಾಗಿರುವ ಇನ್ನೊಂದಷ್ಟು ಚಿತ್ರಗಳು ಚಿತ್ರೀಕರಣ ಹಂತದಲ್ಲಿವೆ. ಈ ಎಲ್ಲ ಸಿನಿಮಾಗಳೂ ಈ ವರ್ಷವೇ ತೆರೆಕಂಡರೆ, ಒಂದೇ ವರ್ಷ ಡಜನ್ ಸಿನಿಮಾಗಳು ರಿಲೀಸ್ ಆದ ಹೀರೋಯಿನ್ ಎಂಬ ಹೆಗ್ಗಳಿಕೆ ಅದಿತಿ ಪಾಲಾಗಲಿದೆ.
ಜಿ.ಎಸ್.ಕಾರ್ತಿಕ ಸುಧನ್