ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ನಾಯಕ ನಟಿಯರ ಪೈಕಿ ಅದಿತಿ ಪ್ರಭುದೇವ ಕೂಡ ಒಬ್ಬರು. ಸದ್ಯ ಅದಿತಿ ಪ್ರಭುದೇವ ನಾಯಕಿಯಾಗಿ ಹನ್ನೆರಡಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು, ಅದರಲ್ಲಿ ಎಂಟಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿ ನಿಂತಿವೆ. ಇದರ ನಡುವೆಯೇ ಅದಿತಿ ಪ್ರಭು ದೇವ ಸದ್ದಿಲ್ಲದೇ ಹೊಸ ಸಿನಿಮಾವೊಂದನ್ನು ಒಪ್ಪಿ ಕೊಂಡಿದ್ದಾರೆ.
ಅಂದಹಾಗೆ, ಅದಿತಿ ಹೊಸ ಸಿನಿಮಾದಲ್ಲಿ ಪವನ್ ತೇಜ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. “ಭುವನೇಶ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಉದ್ಯಮಿ ವಿ. ಚಂದ್ರು ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ಜೀವ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇನ್ನೂ ಹೆಸರಿಡದ ಈ ಹೊಸ ಸಿನಿಮಾದ ಮುಹೂರ್ತ ಸಮಾರಂಭ ಇತ್ತೀ ಚೆಗೆ ನೆರವೇರಿತು.
ಚಿತ್ರದ ಮೊದಲ ದೃಶ್ಯಕ್ಕೆ ನಿರ್ಮಾಪಕ ವಿ. ಚಂದ್ರು ಕ್ಲಾಪ್ ಮಾಡಿದರೆ, ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ:ಟಾಲಿವುಡ್ ನಲ್ಲಿ ಶ್ರೀಲೀಲಾಗೆ ಬೇಡಿಕೆ
ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರದ ಸಿನಿಮಾವಾಗಿದ್ದು, ಅದಿತಿ ಪ್ರಭುದೇವ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕ ಪವನ್ ತೇಜ್ ಕೂಡ ವಿಭಿನ್ನಪಾತ್ರದಲ್ಲಿ ಅಭಿನಯಿಸುತ್ತಿದ್ದಾರಂತೆ. ಉಳಿದಂತೆ ಮೇಘಶ್ರೀ, ನಾಗಾರ್ಜುನ, ಹನುಮಂತೇಗೌಡ, ರಂಜಿತ್, ನವೀನ್ ಪಡೀಲ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಸುಮಾರು 45 ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದ್ದು, ಮೈಸೂರು, ರಾಜಸ್ಥಾನ್ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಪ್ರವೀಣ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಚಿತ್ರಕ್ಕೆ ಸಾಯಿ ಸತೀಶ್ ಛಾಯಾಗ್ರಹಣ, ಕೇಶವನ್ ಸಂಕಲನವಿದೆ. ಚಿತ್ರಕ್ಕೆ ಮಾಸ್ ಮಾದ, ವಿಕ್ರಮ್ ಮೋರ್ ಸಾಹಸ ಮತ್ತು ಸಂತು – ಮದನ್ ಹರಿಣಿ ನೃತ್ಯ ಸಂಯೋಜಿಸುತ್ತಿದ್ದಾರೆ. ಸದ್ಯ ಭರದಿಂದ ಚಿತ್ರೀಕರಣಕ್ಕೆ ಚಾಲನೆ ನಿಡಿರುವ ಚಿತ್ರತಂಡ ಇದೇ ವರ್ಷದ ಕೊನೆಗೆ ಚಿತ್ರೀಕರಣ ಪೂರ್ಣಗೊಳಿಸುವ ಯೋಚನೆಯಲ್ಲಿದೆ.